ಕನಸೂ ಕಾಯುತ್ತದೆ!
ಕನಸು ಈ ಬಾರಿ ರೆಕ್ಕೆ ಕಟ್ಟಿಕೊಂಡು ಹಾರಿಹೋಗಿ ದೂರದಲ್ಲಿ ಮರೆಯಾಗಿಲ್ಲ; ಕಣ್ಣ ತೆರೆದ ನಂತರವೂ ಉಳಿದುಕೊಂಡಿತ್ತು ನನ್ನೆದುರಲ್ಲೇ! ಅದು ಗುರಿಯಾಗಿ, ಯಶಸ್ಸೆಂಬ ಗರಿಯಾಗಿ ಆಕಾಶದೀಪವಾಗಲಿಲ್ಲ! ಬೆಳಕಾಗಿ-ಜೊತೆಯಾಗಿ ನನ್ನೊಂದಿಗೇ ಹೆಜ್ಜೆ ಹಾಕಿತು... ನಾನು ನಕ್ಕಾಗ ನಕ್ಕು, ಸೋತು ಬಿದ್ದಾಗ ಅತ್ತು, ಮತ್ತೊಮ್ಮೆ ಕೈಹಿಡಿದು ಮೇಲೆಬ್ಬಿಸಿತು, ಅದೇ ಹಾದಿಯಲ್ಲಿಟ್ಟ ಪಾದಕ್ಕೆ ಮುಳ್ಳು ತರಚಿದಾಗ ನೆತ್ತರಾಗಿ ಹರಿಯಿತು, ಕನಸು ಕಣ್ಣಲ್ಲೇ ಕುಳಿತಿದ್ದರೂ ನನ್ನ ಹತ್ತಿರದಲ್ಲಿಲ್ಲವೆಂದು ಹತಾಶನಾದಾಗ, ಎದೆಯೊಳಗೆ ಮುಳ್ಳಾಗಿ ಕೊರೆಯಿತು! ಹೊಸ ನೋವಿನ ಬೇನೆ ಹೆಚ್ಚೆಂದುಕೊಂಡು ಮರೆಯಲ್ಲಿಟ್ಟರೆ ಮರೆತುಬಿಡಬಲ್ಲೆನೆಂಬ ಭ್ರಮೆಯೊಳಗೆ ಬದುಕು ಕಟ್ಟಿಕೊಂಡೆ... ಕಾಲದ ಚಕ್ರವನ್ನು 'ತಳ್ಳುವುದೇ' ಬದುಕೆಂದುಕೊಂಡೆ!! ಆದರೆ, ಈ ಬಾರಿ ಕನಸಿಗೆ ರೆಕ್ಕೆಗಳಿರಲಿಲ್ಲ ಅದು ಹಾರಿಹೋಗಲಿಲ್ಲ, ಉಳಿದುಕೊಂಡಿತ್ತು ನನ್ನೊಳಗಲ್ಲೇ... ನಶೆ ಬಿರಿದು ನಿಶೆ ಕಳೆಯುವವರೆಗೂ ಕಾಯುತ್ತಾ ಕುಳಿತಿತ್ತು ನನಗಾಗಿ, 'ನನ್ನ ಕನಸು' -ಪಲ್ಲವಿ ಕಬ್ಬಿನಹಿತ್ಲು