(ಅ)ಪರಿಪೂರ್ಣತೆಯ ಸುಖ
ಬದುಕಿನಲ್ಲಿ ಅರ್ಧವಾಗಿ ಉಳಿಯುವುದೇ ಖುಷಿಯಲ್ಲವೆ? ಅರೆರೆ, ಇದೇನು ಹುಚ್ಚು ಕಲ್ಪನೆ ಎಂದೆನಿಸಿದರೆ ತಪ್ಪಿಲ್ಲ... ತಪ್ಪು-ಒಪ್ಪುಗಳ ನಡುವೆಯೇ ಬದುಕಿನ ಸೊಗಡು ಅಡಗಿರುವುದು, ಆದರೆ, ಪರಿಪೂರ್ಣತೆಯಲ್ಲಿ ತಪ್ಪುಗಳಿಗೆ ಎಡೆಯಿಲ್ಲ, ಅಲ್ಲಿ ಎಲ್ಲವೂ, ಎಲ್ಲರೂ ಸರಿಯೇ; ಸಂಪೂರ್ಣವೇ! ಆದರೆ ಅರ್ಧವಾಗಿ, ಅಪರಿಪೂರ್ಣ, ಅಪಕ್ವವಾಗಿ ಉಳಿಯುವುದರಲ್ಲಿ ಇವೆಲ್ಲಕ್ಕೂ ಅವಕಾಶವಿದೆ... ಅನುಭವಗಳ ಪಾಠಕ್ಕೆ ಬೆಲೆಯಿದೆ, ಅಲ್ಲಲ್ಲಿ ಎಡೆವಿದರೂ ನಡೆಯುವ ನಿಲುವಿದೆ... ಪರಿಪೂರ್ಣರಾಗುವ ಕನಸು ಕಾಣುವುದಕ್ಕೂ ಅಪೂರ್ಣರಾಗುವ ಅಗತ್ಯತೆಯಿದೆ. ಸೋಲಿನಿಂದ ಕಲಿತು ಗೆದ್ದವನಿಗೆ ಎಂದಿದ್ದರೂ ಸೋಲಿನ ಬಳಿಕದ ಹಾದಿಯ ಮೇಲೆ ಅಪಾರ ಪ್ರೀತಿ, ಬಾಂಧವ್ಯಗಳಿರುತ್ತದೆ. ಆ ನಂಟು ಗೆಲುವಿನ ಸವಿಗಿಂತಲೂ ದಟ್ಟವಾಗಿರುತ್ತದೆ. ಹಾಗೆಯೇ ಅರ್ಧ ತಿಳಿದುಕೊಂಡು ಪೂರ್ತಿಯನ್ನು ಹುಡುಕುವಾಗಿನ ಕುತೂಹಲ, ಉತ್ಸಾಹ, ಅಲ್ಲಡಗಿರುವ ಗಾಬರಿ, ಆತುರತೆ-ಕಾತುರತೆ ಎಲ್ಲವೂ ಚಂದ... ಅದು ಗೆಲುವಿ(ಅರಿವಿ)ನ ಕ್ಷಣದಲ್ಲೊಮ್ಮೆ ಕಾಡಿ ಹೋದಾಗ ಎದೆ ತುಂಬಿ ಬಂದು ಕಣ್ಣು ತುಂಬಿಕೊಳ್ಳುತ್ತದೆ. ಇದೇಕೆ ಹೀಗೆ? ಎಂದರೆ ಇರುವುದೆಲ್ಲವನು ಬಿಟ್ಟು ಇಲ್ಲದುದರೆಡೆಗೆ ತುಡಿವ ಮನಕ್ಕೇನನ್ನೋಣ! ಹುಡುಕಿದ್ದು ಸಿಕ್ಕಿತು ಎನ್ನುವಾಗ ಇನ್ನೊಂದು ಹುಡುಕಾಟಕ್ಕೆ ವಿಷಯವನ್ನು ಮನಸ್ಸು ಹುಡುಕಿಕೊಳ್ಳುತ್ತದೆ, ಅದಕ್ಕೂ ಪೂರ್ಣವಾಗುವುದಕ್ಕೆ ಇಷ್ಟವಿಲ್ಲ! ಅಜ್ಞಾನ ದ ಖಾಲಿತನದಲ್ಲಿ ಅದು ವಿಹರಿಸುವ ಜಾಗವನ್ನು ಹುಡು...