ಹೊಸತನದ ಸೋಗಿನಲ್ಲಿ...
ಇನ್ನೇನು ಗೋಡೆಗೆ ನೇತು ಹಾಕಿರುವ ಕ್ಯಾಲೆಂಡರ್ ಬದಲಾಯಿಸುವ ದಿನ ಬಂತು... ಹೊಸ ವರ್ಷ ಎಂಬ ಸೋಗಿನಲ್ಲಿ ಎಲ್ಲರಿಗೆ ಸಿಹಿಯನ್ನು ಬಯಸುವ, ಬದುಕಿನಲ್ಲಿ ಎದುರಾಗುವ ಕಹಿಯನ್ನು ಎದುರಿಸುವ ಶಕ್ತಿ ಇರಲೆಂದು ಹಾರೈಸುವ ಸಂದೇಶಗಳು ರವಾನೆಯಾಗುತ್ತಲಿದೆ, ಕಳೆದ 2020ರಲ್ಲಿ ಕಷ್ಟ-ನಷ್ಟಗಳ ನಡುವೆಯೂ ಜೊತೆಯಾದ ಆತ್ಮೀಯರಿಗೆ ಧನ್ಯವಾದಗಳು, ಬಿರುಕು ಬಿಟ್ಟ ಸಂಬಂಧಗಳ ಸವಿಯನ್ನು ನೆನಪಿಸಿ ಅವರವರ ಪಾಲಿನ ಕ್ಷಮೆ ಯಾಚನೆಯ ಸಂದೇಶಗಳು ಸಹಾ ಮತ್ತೊಮ್ಮೆ ಹರಿದಾಡತೊಡಗಿವೆ. ಮತ್ತೊಮ್ಮೆ ನ್ಯೂ ಈಯರ್ ರೆಸೊಲ್ಯೂಶನ್ (New Year Resolution) ತೆಗೆದುಕೊಂಡು, ಈ ಬಾರಿ ಯಾರು ಏನೆಂದರೂ ನಾನು ಹಾಕಿದ ಗುರಿಯನ್ನು ಮುಟ್ಟಿಯೇ ತೀರುತ್ತೇನೆ ಎಂಬ (ಆರಂಭ!) ಶೂರತ್ವದ ಮಾತುಗಳು ಎದೆಯೊಳಗಿನಿಂದ ಮೊಳಗುತ್ತಿವೆ... ಇವೆಲ್ಲ ಪ್ರತಿ ಹೊಸವರ್ಷದಲ್ಲಿ ಮತ್ತೆ-ಮತ್ತೆ ಮರುಕಳಿಸುವಂತಹವೇ ಹಾಗಾದರೆ ಹೊಸತೇನಿದೆ ಎಂದು ಕೇಳಿದರೆ ನನ್ನಲ್ಲಿ ಉತ್ತರವಿಲ್ಲ! ಹಿಂದಿನ ಬಾರಿ ಹೊಸ ವರುಷಕ್ಕೆ ನಾನೇ ಹಾಕಿಟ್ಟುಕೊಂಡ ಬೇಲಿಯನ್ನು ದಾಟಿಕೊಂಡು ಹೊಸ ಮುಖಗಳ ಪರಿಚಯವಾದ ಹಾಗೆಯೇ, ಗೆಳೆತನದ ನಂಟನ್ನು ಬೆಸೆದುಕೊಂಡು ಬಹಳಷ್ಟು ಗೆಳೆಯ-ಗೆಳತಿಯರನ್ನು ಸಂಪಾದಿಸಿಕೊಳ್ಳಬೇಕೆಂದುಕೊಂಡಿದ್ದೆ, ಆದರೇನಾಯಿತು, ಈಗಲೂ ಮೊದಲಿದ್ದ ಗೆಳೆಯ-ಗೆಳತಿಯರನ್ನು ನಾನು ಕಳೆದುಕೊಳ್ಳಲಿಲ್ಲ ಎಂಬ ತೃಪ್ತಿ ಮಾತ್ರ ನನ್ನೊಂದಿಗೆ ಉಳಿದದ್ದು. ಅದಕ್ಕಿಂತಲೂ ಹೆಚ್ಚಾಗಿ ನನ್ನ ಸ್ನೇಹವಿದ್ದದ್ದು ಗ್ರಂಥಾಲಯದೊಂದಿಗೆ, ಪುಸ್ತಕಗಳೊಂದಿ...