Posts

Showing posts from November 7, 2021

ಕಾಫಿಯ ಕಪ್ಪು

Image
ಕಾಫಿಯ ಕಪ್ಪು ಖಾಲಿಯಾಗಿದೆ, ಆದರೆ ಮಾತು ಶುರುವಾಗಲೇ ಇಲ್ಲ! ಅವಳು ಅವನೆದುರು ತಂದಿಟ್ಟದ್ದು  ಹಬೆಯಾಡುವ ಬಿಸಿ ಕಾಫಿಯ ಕಪ್ಪು ಅದು ಅವನಿಗಿಷ್ಟವಾದದ್ದು... ಬಂಧ ಬಂಧನವಾಗಿ ಕೊಂಡಿ ಕಳಚಿದ ಮೇಲೆ ಮಾತು ಕಿರಿಕಿರಿಯೆನಿಸಿದರೆ ಮೌನ ಅಸಹನೀಯ! ತಿಂಗಳುಗಳು ಕಳೆದರೂ ಅವನ ಕಂಡಾಗ ಅವಳ ನಿಟ್ಟುಸಿರ ದಟ್ಟತೆ ಕದಡಿ ಹೋದಂತಿಲ್ಲ: ಅವಳೆದುರು ಬಂದಾಗ ಅವನ ಹುಬ್ಬುಗಳು ಗಂಟಾಗದೆ ಉಳಿಯುವುದೇ ಇಲ್ಲ! ಸಪ್ತಪದಿ ತುಳಿದವರ ಹಾದಿ ಬೇರೆಯಾದಾಗ  ನಡುವೆ ಉಳಿದುಕೊಳ್ಳುವುದು ಕಂದಕ ಮಾತ್ರ!! ಮೌನದೊಳಗೆ ಹೂತು ಹಾಕಿದ್ದ ಮಾತುಗಳು ಮಾತಾಗದೆ ವ್ಯಾಜ್ಯಗಳಾಗಿದ್ದವು  ಕಗ್ಗಂಟಿನ ಗಂಟುಗಳ ಸಡಿಲಿಸಲು ಕ್ಷಮೆಗಾಗಿ ಇಂದಿನ ಭೇಟಿ! ಆ ಹೊತ್ತಿಗೆ ಜೊತೆಯಾಗಿ ನಕ್ಕ ಕ್ಷಣಗಳೆಲ್ಲಾ ಹೃದಯದ ಮೆದು ಪದರವನ್ನು ಚುಚ್ಚಿಕೊಂಡವು... ಕಣ್ಣಲ್ಲಿ ನೀರಾಡಿತು, ಆದರೆ ಮಾತು ಶುರುವಾಗಲೇ ಇಲ್ಲ; ಖಾಲಿ ಕಪ್ಪಿನ ತಳದಲ್ಲಿ ಒಂದಷ್ಟು ಕಪ್ಪು ಕರಿ ಉಳಿದುಕೊಂಡಿತ್ತು!! -ಪಲ್ಲವಿ ಕಬ್ಬಿನಹಿತ್ಲು

ಅಸ್ತಿತ್ವವೇ ಇಲ್ಲದ ಅಪರಾಧಿ!!

Image
ತಿಳಿಯಲೇ ಇಲ್ಲ  ಬದುಕಿನ ಓಟದಲ್ಲಿ!! ಅದಾಗಲೇ ತನ್ನ ಗುರುತನ್ನು ಕಳೆದುಕೊಂಡಾಗಿತ್ತು... ಕಪಟ ಸಂಬಂಧಗಳನು ಕಳಚಿಕೊಳ್ಳುವ ಪ್ರಯತ್ನದಲಿ; ಎಲ್ಲರನ್ನೂ ತೃಪ್ತಿಗೊಳಿಸುವ ಹುಚ್ಚು ಆಕಾಂಕ್ಷೆಯಲಿ; ಷಡ್ಯಂತ್ರಗಳ ವ್ಯೂಹದಿಂದ ಹೊರಬರುವ ಪ್ರಯತ್ನದಲಿ; ಮುಖವಾಡಧಾರಿಗಳ ಹಿಡಿತದಿಂದ ಪರಾರಿಯಾಗುವ ಪ್ರಯಾಸದಲಿ; ದ್ವೇಷ-ಸಾಧನೆಯ ಹುಚ್ಚು ಹಠದಲಿ; ಅದಾಗಲೇ ತನ್ನನ್ನು ಕಳೆದುಕೊಂಡಾಗಿತ್ತು! ಈಗ ಮೌನಕೆ ಶರಣಾಗಿಹೆನು... ತನ್ನತನದ ಹುಡುಕಾಟದಲ್ಲಿರುವೆನು... ಆತ್ಮದ ಕಟಕಟೆಯಲಿ ಆರೋಪಿಯಾಗಿ ನಿಂತಿರುವೆನು!! ತನ್ನ ಕರ್ಮಗಳನು ಸರಿಯೆಂದು ಸಾಬೀತುಪಡಿಸುವ  ಹುಚ್ಚು ಪ್ರಯತ್ನದಲ್ಲಿರುವೆನು... ಕ್ಷಣಗಳು ಉರುಳುತಲಿದೆ... ಮನದ ಹೊಯ್ದಾಟ ಮುಂದುವರೆದಿದೆ... ಆದರೆ ಸೋತಿರುವೆನು!! ತನ್ನತನವನೇ ಕಳೆದುಕೊಂಡಿರುವ ಅಪರಾಧಿಯಾಗಿರುವೆನು; ಅಸ್ತಿತ್ವವೇ ಇಲ್ಲದ ಅಪರಾಧಿಯಾಗಿರುವೆನು!! ಇದೀಗ ಹೊರಟಿರುವೆನು... ತನ್ನತನದ ಜಾಡ ಹಿಡಿದು; ಏಕೆಂದರೆ, ಇನ್ನೂ ಮನದ ಮೂಲೆಯಲಿ ಹಸಿರಾಗಿಹುದು ಹೊಸ 'ನನ್ನನ್ನು' ರೂಪಿಸುವ ಆಸೆ, ಹೊಸ ಅಸ್ತಿತ್ವದ ಕನಸು...                                                                                            - ಪಂಚಮಿ ಕಬ್ಬಿನಹಿತ್ಲು