Posts

Showing posts from January 22, 2023

ಭಾಷೆಗೂ ಬಣ್ಣ ಉಂಟಂತೆ!!

Image
  ಭಾರತೀಯರು ವರ್ಣಪ್ರಿಯರು. ಭಾವನೆಗಳು, ಸಂಸ್ಕೃತಿಗಳು, ಹಬ್ಬಗಳು ಎಲ್ಲದಕ್ಕೂ ಬಣ್ಣಗಳು ರಾಯಭಾರಿ! ಭಾಷೆಯ ಸೊಗಡನ್ನು ಬಿಂಬಿಸುವ ಬಣ್ಣವೂ ಇರಬಹುದೇನೋ ಎಂಬ ಕುತೂಹಲ ನನಗೆ. ಭಾಷೆಯ ಬಣ್ಣ ಎಂದಾಕ್ಷಣ ಥಟ್ಟನೆ ಹೊಳೆದದ್ದು ಕನ್ನಡ ಭುವನೇಶ್ವರಿಯ ಅರಶಿಣ-ಕುಂಕುಮದ ಪವಿತ್ರ ವರ್ಣ. ಆದರೆ  ಸಂಸ್ಕೃತಿ ಮತ್ತು ಭಾಷೆ ಮರಕ್ಕೆ ಹಬ್ಬಿದ ಬಳ್ಳಿಯ ಹಾಗೆಯೇ ಅಲ್ಲವೇನು? ವೃಕ್ಷದ ಬೇರು ಆಳಕ್ಕಿಳಿದಷ್ಟು ಬಳ್ಳಿಯ ಬದುಕು ಅಷ್ಟರ ಮಟ್ಟಿಗೆ  ಹೆಚ್ಚು ಸುರಕ್ಷಿತ. ಸಂಸ್ಕೃತಿಯ ತರುವಿಗೆ ಸುತ್ತಿಕೊಂಡ ನಮ್ಮ ಮಾತೃಭಾಷೆಯೆಂಬ ಲತೆಯು ಎಲ್ಲ ರಂಗಿನ ಹೂಗಳನ್ನು ಅರಳಿಸುತ್ತದೆಯಾದರೂ ಲತೆಯ ಇರುವನ್ನು ಬೇರೆ ಬಣ್ಣಗಳೂ ಎತ್ತಿ ಹಿಡಿಯಬಹುದಲ್ಲಾ, ಅವು ಯಾವುದಿರಬಹುದೆಂಬ ಹುಚ್ಚು ಯೋಚನೆಯೊಂದು ನನ್ನಲ್ಲಿ ಹುಟ್ಟಿಕೊಂಡಿತು. ಆ ಹೊತ್ತಿಗೆ ಕಾಡಿದ ಕನ್ನಡದ ಬಣ್ಣವು ‘ಕ್ಲಾಸಿಕ್’ ಕಪ್ಪು-ಬಿಳುಪು! ಎಲ್ಲಾ ರಂಗುಗಳು ಹದವಾಗಿ ಬೆರೆತ ಬಿಳುಪು, ಬಣ್ಣಗಳ ಅಸ್ತಿತ್ವಕ್ಕೆ ಸಡ್ಡು ಹೊಡೆಯುವ ಕಪ್ಪು(Black is the absence of colour).  ಅರೇ ಇದೇನಿದು? ಕನ್ನಡದ ಬಣ್ಣ ಎನ್ನುತ್ತಾ ಬಿಳುಪನ್ನು ಒಪ್ಪಿಕೊಳ್ಳಬಹುದೇನೋ, ಆದರೆ ಕಪ್ಪುಎನ್ನುತ್ತಾಳಲ್ಲಾ ಎಂದು ಮೂಗು ಮುರಿಯಬೇಡಿಪ್ಪಾ... ಎಷ್ಟೆಷ್ಟೋ ಹೊತ್ತು ಕುಳಿತು ತಲೆ ಕೆರೆದ ಮೇಲಷ್ಟೆ ನಾನು ಹೀಗಂದದ್ದು! ಕನ್ನಡದ ಬಣ್ಣವು ಅಸ್ತಿತ್ವದ  "ಇರುವಿಕೆ ಹಾಗೂ ಇಲ್ಲದಿರುವಿಕೆ"ಯ ನಡುವಿನ ವಿರೋಧಾಭಾಸವನ್ನು ಪ್ರತಿನಿಧಿಸದಿದ್ದರೆ ಹ