Posts

Showing posts from 2021

ಕಾಫಿಯ ಕಪ್ಪು

Image
ಕಾಫಿಯ ಕಪ್ಪು ಖಾಲಿಯಾಗಿದೆ, ಆದರೆ ಮಾತು ಶುರುವಾಗಲೇ ಇಲ್ಲ! ಅವಳು ಅವನೆದುರು ತಂದಿಟ್ಟದ್ದು  ಹಬೆಯಾಡುವ ಬಿಸಿ ಕಾಫಿಯ ಕಪ್ಪು ಅದು ಅವನಿಗಿಷ್ಟವಾದದ್ದು... ಬಂಧ ಬಂಧನವಾಗಿ ಕೊಂಡಿ ಕಳಚಿದ ಮೇಲೆ ಮಾತು ಕಿರಿಕಿರಿಯೆನಿಸಿದರೆ ಮೌನ ಅಸಹನೀಯ! ತಿಂಗಳುಗಳು ಕಳೆದರೂ ಅವನ ಕಂಡಾಗ ಅವಳ ನಿಟ್ಟುಸಿರ ದಟ್ಟತೆ ಕದಡಿ ಹೋದಂತಿಲ್ಲ: ಅವಳೆದುರು ಬಂದಾಗ ಅವನ ಹುಬ್ಬುಗಳು ಗಂಟಾಗದೆ ಉಳಿಯುವುದೇ ಇಲ್ಲ! ಸಪ್ತಪದಿ ತುಳಿದವರ ಹಾದಿ ಬೇರೆಯಾದಾಗ  ನಡುವೆ ಉಳಿದುಕೊಳ್ಳುವುದು ಕಂದಕ ಮಾತ್ರ!! ಮೌನದೊಳಗೆ ಹೂತು ಹಾಕಿದ್ದ ಮಾತುಗಳು ಮಾತಾಗದೆ ವ್ಯಾಜ್ಯಗಳಾಗಿದ್ದವು  ಕಗ್ಗಂಟಿನ ಗಂಟುಗಳ ಸಡಿಲಿಸಲು ಕ್ಷಮೆಗಾಗಿ ಇಂದಿನ ಭೇಟಿ! ಆ ಹೊತ್ತಿಗೆ ಜೊತೆಯಾಗಿ ನಕ್ಕ ಕ್ಷಣಗಳೆಲ್ಲಾ ಹೃದಯದ ಮೆದು ಪದರವನ್ನು ಚುಚ್ಚಿಕೊಂಡವು... ಕಣ್ಣಲ್ಲಿ ನೀರಾಡಿತು, ಆದರೆ ಮಾತು ಶುರುವಾಗಲೇ ಇಲ್ಲ; ಖಾಲಿ ಕಪ್ಪಿನ ತಳದಲ್ಲಿ ಒಂದಷ್ಟು ಕಪ್ಪು ಕರಿ ಉಳಿದುಕೊಂಡಿತ್ತು!! -ಪಲ್ಲವಿ ಕಬ್ಬಿನಹಿತ್ಲು

ಅಸ್ತಿತ್ವವೇ ಇಲ್ಲದ ಅಪರಾಧಿ!!

Image
ತಿಳಿಯಲೇ ಇಲ್ಲ  ಬದುಕಿನ ಓಟದಲ್ಲಿ!! ಅದಾಗಲೇ ತನ್ನ ಗುರುತನ್ನು ಕಳೆದುಕೊಂಡಾಗಿತ್ತು... ಕಪಟ ಸಂಬಂಧಗಳನು ಕಳಚಿಕೊಳ್ಳುವ ಪ್ರಯತ್ನದಲಿ; ಎಲ್ಲರನ್ನೂ ತೃಪ್ತಿಗೊಳಿಸುವ ಹುಚ್ಚು ಆಕಾಂಕ್ಷೆಯಲಿ; ಷಡ್ಯಂತ್ರಗಳ ವ್ಯೂಹದಿಂದ ಹೊರಬರುವ ಪ್ರಯತ್ನದಲಿ; ಮುಖವಾಡಧಾರಿಗಳ ಹಿಡಿತದಿಂದ ಪರಾರಿಯಾಗುವ ಪ್ರಯಾಸದಲಿ; ದ್ವೇಷ-ಸಾಧನೆಯ ಹುಚ್ಚು ಹಠದಲಿ; ಅದಾಗಲೇ ತನ್ನನ್ನು ಕಳೆದುಕೊಂಡಾಗಿತ್ತು! ಈಗ ಮೌನಕೆ ಶರಣಾಗಿಹೆನು... ತನ್ನತನದ ಹುಡುಕಾಟದಲ್ಲಿರುವೆನು... ಆತ್ಮದ ಕಟಕಟೆಯಲಿ ಆರೋಪಿಯಾಗಿ ನಿಂತಿರುವೆನು!! ತನ್ನ ಕರ್ಮಗಳನು ಸರಿಯೆಂದು ಸಾಬೀತುಪಡಿಸುವ  ಹುಚ್ಚು ಪ್ರಯತ್ನದಲ್ಲಿರುವೆನು... ಕ್ಷಣಗಳು ಉರುಳುತಲಿದೆ... ಮನದ ಹೊಯ್ದಾಟ ಮುಂದುವರೆದಿದೆ... ಆದರೆ ಸೋತಿರುವೆನು!! ತನ್ನತನವನೇ ಕಳೆದುಕೊಂಡಿರುವ ಅಪರಾಧಿಯಾಗಿರುವೆನು; ಅಸ್ತಿತ್ವವೇ ಇಲ್ಲದ ಅಪರಾಧಿಯಾಗಿರುವೆನು!! ಇದೀಗ ಹೊರಟಿರುವೆನು... ತನ್ನತನದ ಜಾಡ ಹಿಡಿದು; ಏಕೆಂದರೆ, ಇನ್ನೂ ಮನದ ಮೂಲೆಯಲಿ ಹಸಿರಾಗಿಹುದು ಹೊಸ 'ನನ್ನನ್ನು' ರೂಪಿಸುವ ಆಸೆ, ಹೊಸ ಅಸ್ತಿತ್ವದ ಕನಸು...                                                                                            - ಪಂಚಮಿ ಕಬ್ಬಿನಹಿತ್ಲು

ಹನಿ-ದನಿ

Image
ಮಕ್ಕಳ ಬೆನ್ನಿಗೆ ರೆಕ್ಕೆಯನಂಟಿಸಿದ ಗುರುವು ತನ್ನ ನೆಲವ ಬಿಟ್ಟು ಹಾರಲೇ ಇಲ್ಲ!! *** ವಿನಂತಿಗಳ ಸಂತೆಯಲಿ  ಬೆಲೆಯಿರುವುದು ಬಣ್ಣದ ಮಾತುಗಳಿಗಷ್ಟೇ!! *** ಕಣ್ಣ ರೆಪ್ಪೆಯ ಗೋಡೆಗಳ ಹಿಂದಡಗಿರುವುದು ಬಣ್ಣದ ಕನಸುಗಳು!! *** ಅವಳ ಅಡುಗೆ ಮನೆಯ ಕತೆಗಳು-ವ್ಯಥೆಗಳು ಹಾಳೆಗಳಿಗಿಳಿಯಲೇ ಇಲ್ಲ!! *** ಅಪ್ಪನ ದಪ್ಪ ಮೀಸೆಯ ಮರೆಯಲ್ಲವಿತಿರುವುದು ನೋವಿನ ನಗೆಯೇನು?! *** ಹಸಿವಿನ ಹೊರೆಯಡಿಯಲ್ಲಿ ಮೊನ್ನೆಯ ತಂಗಳನ್ನವೂ ಹಳಸದು!! *** ಮನೆಯೊಡತಿಯ  ಹೆಸರು ಮನೆಯೊಡೆಯನ ಮಡದಿಯೆಂದು!! *** ಸಿರಿವಂತನ ಸಂಪತ್ತಿನ ಮೂಟೆ ಹೊತ್ತವನ ಗೋಣು ಮುರಿದರೂ ಮುಗಿದದ್ದಿಲ್ಲ!! *** ಸಂಸಾರದ ನೊಗ ಅವನಿಗೆಂದೂ ಭಾರವೆನಿಸಲಿಲ್ಲ!! *** ಉಸಿರುಗಟ್ಟಿಸಿದ ಹತ್ತು ಜನರು ಆತ ಸತ್ತ ಮೇಲೆ ಸುತ್ತ ನಿಂತು ಅತ್ತರು!! -ಪಲ್ಲವಿ ಕಬ್ಬಿನಹಿತ್ಲು

ಮಶಾಲು ಉರಿಯುತಲಿದೆ...

Image
ಬಿರುಗಾಳಿ, ಮಳೆ-ಚಳಿಗೆ ನಂದದೆ ಅಂತರಂಗದೊಳಗಿನ ಮಶಾಲು ಉರಿಯುತ್ತಲೇ ಇದೆ! ಸುತ್ತಲೆಲ್ಲ ಅದೆಷ್ಟು ಕರಿ ನೆರಳುಗಳು ಸುಳಿದರೂ, ಅವು ಮೈ ಸೋಕದಂತೆ ಹೆದರಿಸುತ್ತಾ ಉರಿಯುತಿದೆ; ಕಣ್ಣು ಕೋರೈಸುವ ಮಿನುಗುವ ಬದುಕುಗಳ ಎದೆ ನಡುಗಿಸುವ ಮಂದ ಬೆಳಕನು ಚೆಲ್ಲುತ ಉರಿಯುತಿದೆ; ತನ್ನೊಳಗೇ ಮುಳುಗಿರುವವರ ಕಣ್ಣು ತೆರೆಸಲು ಸ್ವಾರ್ಥದ ಪರದೆಯನೇ ನುಂಗುತ್ತಾ ಉರಿಯುತಿದೆ... ತಣ್ಣಗಿನ ಎದೆಯವರ ಮೇಲೆ ಜ್ವಾಲೆಯು ಕೆನ್ನಾಲಗೆಯ ಬರೆಯನೆಳೆದೆಳೆದು ಉರಿಯುತಿದೆ; ಅಂತರಾಳದೊಳಗೆ ಒಂದಷ್ಟು ಶುದ್ಧತೆಯನುಳಿಸುವ, ಅದರ ದನಿಗೆ ಬೆಳಕಾಗಲು ಮಶಾಲು ಉರಿಯುತ್ತಲೇ ಇದೆ... ಗುಡ್ಡೆ ಹಾಕುತ್ತಲಿರುತ್ತದೆ ಎಲ್ಲರೊಳಗಿನ ಮಶಾಲು  ನಮ್ಮ ಕೈಲಾದ ಅನ್ಯಾಯ ಅಪಮಾನಗಳನು ಸದ್ದಿಲ್ಲದೆ... ಎಗ್ಗಿಲ್ಲದೆ ಆಗಾಗ ಅವುಗಳನು ಮನದ ಮುಂದಿರಿಸಿ  ಕಾಡಿ-ಕಾಡಿ ದಹಿಸುವುದು ನಮ್ಮೊಳಗನು ಪಶ್ಚಾತಾಪದ ಅಗ್ನಿಯಲಿ; ಒಂಟಿಯಾದಾಗ ಒಂದೊಂದನೇ ಯೋಚನೆಗಳಾಗಿ ಕಣ್ಣು ಮುಚ್ಚಿದಾಗ ದಾರುಣ ಕನುಸುಗಳಾಗಿ ಮದದ ಹೆದೆಯೇರಿಸುವಾಗ ಕರ್ಮಗಳ ಪ್ರತಿಫಲದ ಅಂಜಿಕೆಯಾಗಿ ಕಾಡಿ-ಕಾಡಿ ದಹಿಸುವುದು ನಮ್ಮೊಳಗನು ಪಶ್ಚಾತಾಪದ ಅಗ್ನಿಯಲಿ ಎಗ್ಗಿಲ್ಲದೆ ಆಗಾಗ ಅನ್ಯಾಯ ಅಪಮಾನಗಳನು  ಮನದ ಮುಂದಿರಿಸಿ.... ಈ ಮಾನವೀಯತೆಯ ಮಶಾಲು ಉರಿದಷ್ಟು ದಿನ  ಮಾನವನು ಉಳಿದಾನು ಮಾನವನಾಗಿ, ಇದನರಿತ ಅಂತರಾತ್ಮದ ಮಶಾಲು ಉರಿಯುತ್ತಲೇ ಇದೆ; ಎಂತಹ ಬಿರುಗಾಳಿ, ಮಳೆ-ಚಳಿಗೂ ಭಯ ಬೀಳದೆ... -ಪಲ್ಲವಿ ಕಬ್ಬಿನಹಿತ್ಲು

ಹೊಸಬೆಳಕು

Image
ಯಾವಾಗಲೆಂದರೆ ಆಗ ಒಂಟಿಯಾಗುತ್ತೇನೆ, ಮೌನದಿಂದ ಸುಳಿಯುವ ಗಾಳಿಗೆ ನಿಟ್ಟುಸಿರ ಸಂದೇಶ ಕಳುಹಿಸುತ್ತಾ... ಶೂನ್ಯದಲ್ಲಿ ದೃಷ್ಟಿ ನೆಟ್ಟು ಬಿಡುತ್ತೇನೆ, ರೆಪ್ಪೆಗಳು ಕನಸ ತೆರೆಯನು ಕಣ್ಣ ಮೇಲೆಳೆಯದಂತೆ!! ಇಂದೇನೋ ಹೊಸತಿದೆ; ಗಾಳಿಯಲ್ಲಿ ನಗುವನ್ನಷ್ಟೇ ಬೆರೆಸುವ ಆಸೆ ರೆಪ್ಪೆಗಳೊಳಗಿನ ಸ್ವಪ್ನಲೋಕಕ್ಕೆ ಜಾರುವ ತವಕ; ನೆಟ್ಟ ದೃಷ್ಟಿಯ ಪರಿಧಿಯೊಳಗೆ ಅವನು ಇಣುಕಿದ್ದಾನಷ್ಟೆ; ಅಷ್ಟೇ ಸಾಕೆನಿಸಿತು ಒಂಟಿಯಾಗುಳಿಯುವಾಸೆ ತೊರೆಯುವುದಕ್ಕೆ!! ದಿನ-ದಿನದ ಭೇಟಿ ಹೊಸತನದ ಬೆಳಕಾಗಿದೆ ಬದುಕಿಗೆ, ತುಟಿಯಂಚಿಗಂಟಿದ ನಗುವೊಂದಿಗೆ ಆತ ಬೆರೆಸುವ ಮಾತು ಕ್ಷಣ-ಕ್ಷಣವನೂ  ಉಲ್ಲಸಿತಗೊಳಿಸುವುದು, ಆಗೊಮ್ಮೆ-ಈಗೊಮ್ಮೆ ನೋಟ ಬೆರೆತಾಗ ರೆಪ್ಪೆ-ಕೆನ್ನೆಗಂಟಿಕೊಳ್ಳುತ್ತದೆ, ಕನಸಿನ ಲೋಕ ಮತ್ತೆ ತೆರೆದುಕೊಳ್ಳುತ್ತದೆ!! ಅಲ್ಲಿ ಹಾರಾಡುತ್ತೇನೆ, ಈಜಾಡುತ್ತೇನೆ ಯಾರ ಹಂಗಿಲ್ಲದೆ ನಕ್ಕು ಬಿಡುತ್ತೇನೆ... ನನ್ನ, ಅವನ ಸಂತಸದ ಬದುಕಿನ ಕನಸಲ್ಲಿ ಕಳೆದುಹೋಗುತ್ತೇನೆ... ಒಳ್ಳೆಯದರ ಆಯಸ್ಸು ಕಡಿಮೆಯೇ; ಭೇಟಿ, ಮಾತು, ನೋಟ ಇದ್ದಕ್ಕಿದ್ದಂತೆ ಮರೆಯಾಗಿದೆ ಮತ್ತೆ, ನಾಪತ್ತೆಯಾಗಿದೆ ಮೊಗದ ಮೇಲಿನ ನಗುವಿನ ಸುಳಿವು! ಈಗ ಮತ್ತೆ, ಯಾವಾಗಲೆಂದರೆ ಆಗ ಒಂಟಿಯಾಗುತ್ತೇನೆ, ಮೌನದಿಂದ ಸುಳಿಯುವ ಗಾಳಿಗೆ ನಿಟ್ಟುಸಿರ ಸಂದೇಶ ಕಳುಹಿಸುತ್ತಾ, ಶೂನ್ಯದಲ್ಲಿ ದೃಷ್ಟಿ ನೆಟ್ಟು ಬಿಡುತ್ತೇನೆ ರೆಪ್ಪೆಗಳು ಕನಸ ತೆರೆಯನು ಮತ್ತೆ ಕಣ್ಣ ಮೇಲೆಯಳೆಯದಂತೆ! ಸಾಕೆನಿಸುತ್ತಿದೆ ಈ ಬಾಳು, ಪ್ರೀತಿಯ ಆಸರೆಗೆ ಮ

(ವಿ)ಚಿತ್ರ ಹನಿಗಳು-3

Image
  ಹಾಕಬೇಕೆನ್ನಿಸಿತು ಖುಷಿಗೊಂದಷ್ಟು ಕಡಿವಾಣ, ಆದರೆ ಖುಷಿಯೆಲ್ಲಿದೆ ನನ್ನಲ್ಲಿ?! ********************************************* ಹುಡುಕಾಟದ ಕಿಡಿಯೊಂದು ಹುಟ್ಟಿತು: ಕಾಳೊಂದು ಮೆಲ್ಲನೆ ಮೊಳಕೆಯೊಡೆದ ಹಾಗೆ, ರವಿಯ ಕಿರಣ ಭುವಿಯನಪ್ಪಿದ ಹಾಗೆ, ಮಳೆಯ ಮೊದಲ ಹನಿ ಮಣ್ಣಿನೊಳಗೆ ಇಳಿದ ಹಾಗೆ, ಸದ್ದಿಲ್ಲದೆ, ಸುದ್ದಿಯೇ ಇಲ್ಲದೆ!! ********************************************** ಸುಳಿವೇ ಸಿಗದಂತೆ ಮರೆಯಾಗುವುನೆಂದರೆ, ಹಾಳು ಮನಸೇ ನನ್ನಲ್ಲಿಲ್ಲವಲ್ಲ!! ನಿನ್ನಲ್ಲೇ ಅದ ಬಿಟ್ಟರೆ ನನ್ನುಸಿರು ಮುನಿಸಿಕೊಂಡೀತೆಂದು, ಉಳಿದುಕೊಂಡಿರುವೆನಿಲ್ಲಿಯೇ!! *********************************************** ಕಚ್ಚಾಡುವ ಮಾತೂ ವಿಚ್ಛೇದನ ಕೊಟ್ಟಂತಿದೆ, ಹೆಚ್ಚಾಡುವ ಮೌನವೂ ಮುನಿಸಿಕೊಂಡಂತಿದೆ, ಇಲ್ಲದವುಗಳನ್ನು ಇದೆಯೆನ್ನುವ, ಇರುವುದರ ಅರಿವನ್ನೂ ಅಲ್ಲಗಳೆಯುವ, 'ಜಗ್ಗಾಟ'ದಲಿ... ************************************************* ಅವಳು ಎಂದೂ ಅಳುವವಳಲ್ಲ, ಯಾವ ಸಂದರ್ಭವೂ ಅವಳ ಮೊಗದ ನಗುವನ್ನು 'ಅಳಿಸು'ವುದಿಲ್ಲ; ಕಾರಣ; ಕಾಲ ಕಲಿಸಿದೆ ಅವಳಿಗೆ ನೋವಿಗೂ ನಗಲು ಕಲಿಸುವುದನ್ನು.... -ಪಲ್ಲವಿ ಕಬ್ಬಿನಹಿತ್ಲು 

ತಪ್ಪು-ಒಪ್ಪುಗಳ ಕಪ್ಪು ಹಂಚುವ ಮುನ್ನ...

Image
"ನೀನು ಗುಡ್ ಗರ್ಲ್ ಅಲ್ವಾ ಪುಟ್ಟಿ, ಒಳ್ಳೆ ಮಾರ್ಕ್ಸ್ ತಗೋಬೇಕು" "ಏಯ್ ಪುಟ್ಟ, ಯಾಕೋ ಹುಡುಗಿಯರ ತರ ಅಳ್ತಾ ಇದ್ದೀಯ? ಹುಡುಗರು ಹಾಗೆಲ್ಲ ಅಳೋದಿಲ್ಲ" ಹೀಗೆ ಇದು ಸರಿ, ಇದು ತಪ್ಪು ಎಂದು ಎಲ್ಲಾ ಕೆಲಸಗಳನ್ನು ವಿಶ್ಲೇಷಿಸಿ ವಿಂಗಡಿಸುವ ಮನೋಧರ್ಮ ಎಳವೆಯೆಂದಲೇ ನಮ್ಮೊಳಗೆ ಬೆಳೆಯುತ್ತದೆ. ಈ ಮನೋಧರ್ಮ ನಾವಿರುವಷ್ಟು ದಿನ ನಮ್ಮ ಜೊತೆಗೇ ಬದುಕುತ್ತದೆ. ಎಲ್ಲಾ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವ ಮುನ್ನ ಅದು  ನ್ಯಾಯಯುತವಾಗಿದ್ದು, 'ಸರಿ' ಎಂಬ ಅರ್ಹತೆಯನ್ನು ಪಡೆದುಕೊಳ್ಳಲೇಬೇಕು. ಹಾಗಿಲ್ಲದಿದ್ದರೆ ಆ ಯೋಚನೆ ಜನರೆದುರು ಬಿತ್ತರಗೊಳ್ಳಲು ನಾಲಯಕ್ಕು ಎಂಬುದು ನಮ್ಮ ಸಹಜ ಮನಸ್ಥಿತಿ. ಅಪ್ಪಿ-ತಪ್ಪಿ ಬುದ್ಧಿ ತಪ್ಪು ಎಂದುಕೊಂಡ ಕೆಲಸಕ್ಕೆ ಕೈ ಹಾಕಿದರೆ, ಅಪರಾಧಿ ಭಾವದ ಕೊರಗು ಕಾಡಲು ಶುರುವಾಗುತ್ತದೆ. ಈ ಯೋಚನೆಗೆ ಹೊರತಾದವರು ಯಾರಿಲ್ಲವಾದರೂ ತಪ್ಪುಗಳು, ಅಪರಾಧಗಳು 'ಇಲ್ಲ'ದಾಗುವುದಿಲ್ಲ ಎಂಬುವುದು ವಿಶಿಷ್ಟವಾದ ವಿಚಿತ್ರ ಸತ್ಯ...   ನೋಡಿದ್ದು, ಕೇಳಿದ್ದು ಎಲ್ಲವನ್ನೂ ನಮ್ಮೊಳಗೇ ಇರುವ ತಕ್ಕಡಿಯಲ್ಲಿ ತೂಗಿ ಈ ಎರಡರಲ್ಲಿ ಒಂದು ಪಟ್ಟಿಗೆ ಸೇರಿಸುತ್ತೇವೆ. ಹೀಗೆ ಮೊದಲೇ ನಮ್ಮೊಳಗೆ ತುಂಬಿಕೊಂಡಿರುವ ಮನಸ್ಥಿತಿಯಿಂದಾಗಿಯೇ ಹಲವಾರು ಬಾರಿ, ನಮ್ಮಿಂದ ಸರಿಪಡಿಸಲಾಗದಂತಹ ತಪ್ಪುಗಳಾದದ್ದನ್ನು ಅಲ್ಲಗಳೆಯಲಾಗದು. ಒಂದು ನಾಣ್ಯಕ್ಕೆ ಇರುವ ಇನ್ನೊಂದು ಮುಖವನ್ನು ಕಾಣುವ ಪ್ರಯತ್ನಕ್ಕೆ ನಾವ್ಯಾರೂ ಕೈ ಹಾಕುವುದೇ

ಕಿಸೆ ತುಂಬುವ ಕನಸುಗಳು

Image
ನನ್ನ ಖಾಲಿ ಕಿಸೆಗಳಲ್ಲಿ ಆಗಾಗ ತುಂಬುತ್ತೇನೆ ಒಂದಷ್ಟು ನಾಣ್ಯಗಳ ಜೊತೆಗೆ, ಬಣ್ಣದ-ಬೆಳಕಿನ ಬದುಕಿನ ಕನಸುಗಳನು... ಅವು ಹರಿದ ಕಿಸೆಯಲಿರುವ ಸೆರೆಯಿಂದ ಹನಿ-ಹನಿಯಾಗಿ ಸೋರಿಕೊಳ್ಳುತ್ತವೆ, ಚೂರು-ಪಾರು ಗಾಳಿಯಲಿ ಕರಗಿಬಿಡುತ್ತವೆ; ನಾಣ್ಯಗಳ ತೂಕದಡಿಯಲಿ ಹೊಸಕಿ ಹೋಗುತ್ತವೆ!! ಅಲ್ಲದಿದ್ದರೇನು?! ನೋಟು ತುಂಬುವ ಕಿಸೆಯಾದರೆ, ಸೋರುವ ಸೆರೆಯಿಲ್ಲ; ತುಳಿದುಬಿಡುವ ಭಾರವಿಲ್ಲ!! ಬದಲಾಗಿ ಹಗುರ ನೋಟುಗಳು ರೆಕ್ಕೆಗಳಾಗುವವು; ನಾಣ್ಯಗಳ ಹಾಗೆ ಕಡಿವಾಣ ಹಾಕಲಾರವು, ಎತ್ತರೆತ್ತರಕ್ಕೆ ಹಾರುವುದಕ್ಕೆ; ಏರುವುದಕ್ಕೆ!! ಕಿಸೆಯಲಿರುವುದು ಬರೀ ನಾಣ್ಯಗಳೆಂದು ಅತ್ತೆನೆಂದರೆ, ನನ್ನೆದೆಯ ನೋವಿನ ಬಿಸಿ ಅವುಗಳಿಗೆ ಗರಿ-ಗರಿಯಾಗುವುದನು ಕಲಿಸಬಲ್ಲುದೇ?! ಕಣ್ಣೀರ ಬಿಂದುಗಳು ಅವುಗಳೊಳಗನ್ನು ತೋಯಿಸಬಲ್ಲವೇ?! ಆ ಕಾವು ಸುಡುವುದು ಕಿಸೆಗೆ ತುಂಬಿದ್ದ ಕನಸುಗಳನ್ನಷ್ಟೇ!! ಆ ಕನಸುಗಳನು ತುಂಬಿದ ಕೈಗಳ ಹಿಡಿದ ಮನಸುಗಳಷ್ಟೇ!! ಅರಿವಿನ ಪರಿಧಿಯನು ನಿಲುಕಿ, ಅಸಹಾಯಕತೆಯ ಇನ್ನಷ್ಟು ಕಲಕುವ ನಿಜವೆಂದರೆ, ಆ ನಾಣ್ಯಗಳನು ಕಳೆದುಕೊಂಡರೆ ಕಿಸೆ ಬರಿದಾಗುತ್ತದೆ; ನಂತರ ಕನಸುಗಳೂ ಕಿಸೆಗಿಳಿಯವು!! ಸೋರಿ-ಕರಗಿ ಉಳಿದು  ನಾಣ್ಯಗಳಿಗಂಟಿದ  ಕನ‌ಸುಗಳು ಕಿಸೆಯನು ತುಂಬುತ್ತವೆ!! -ಪಲ್ಲವಿ ಕಬ್ಬಿನಹಿತ್ಲು

ಕಳವಳವ ಕಳೆದುಕೊಂಡಾಗ...

Image
ಕಳೆದುಕೊಳ್ಳುವ ಭಯ ನನಗಿಲ್ಲ, ಕಳೆದುಕೊಳ್ಳುವಂತಹದ್ದೇನೂ ನನ್ನಲ್ಲಿ ಉಳಿದಿಲ್ಲ! ಕೆಸರಿನೊಳಗೇ ಬೆಳೆದಿದ್ದ ಪುಷ್ಪ ನಾನು; ತೊಳೆದಾಗಿದೆ ಇಂದು, ಮತ್ತೆ ಮೆತ್ತಿಕೊಳ್ಳೆನು ನಿನ್ನೆ ನನ್ನ ಬಗಲಲ್ಲಿದ್ದ ರಾಡಿಯ ಭಾರವನ್ನು! ಹಾಗೆಂದು ಅಲ್ಲಿ ಕಳೆದ ಕಾಲವೆಲ್ಲ, ಕೊಳೆಯಾಗಲಿಲ್ಲ ಬದುಕಿಗೆ; ಕಳೆಯಾಗಿ ಬೆಳೆದಿದ್ದುದನೆಲ್ಲ ಕಿತ್ತೆಸೆದಾಗ ಕಳೆದದ್ದೆಲ್ಲಾ ಇಂದಿನ ಹೊಳಪಿನೊಳಗೆ, ‘ಕಳೆ’ಯಾಯಿತು...   ಈಗ ಜೀವನದ ಕೊಳದೊಳಗೆ ಕೆಸರಿಲ್ಲವೆಂದರೆ ಸುಳ್ಳು; ತಳದಲ್ಲಿ ಕುಳಿತುಕೊಂಡಿದೆ ಇನ್ನೂ ಒಂದಷ್ಟು. ಬೇಸರವಿಲ್ಲ ನನಗೆ, ಆಸೆ ಮೊಳೆದುಕೊಂಡಿದೆ ಈಗಷ್ಟೇ, ಇದರೊಳಗಿಂದ ಮತ್ತೊಂದು ತಾವರೆ ಹುಟ್ಟಿಕೊಂಡೀತೆಂದು! ಈ ಆಸೆಗಿಲ್ಲ ಕಳೆದುಕೊಳ್ಳುವ ಅರಿವು, ಏನಿದ್ದರೂ ಬೆಳೆಯುವದರಲ್ಲಿ ಮಾತ್ರ ಇದಕೆ ಒಲವು... ಬದುಕು ಕಳೆದುಕೊಳ್ಳುವ ಕಳವಳವ ಕಳೆದುಕೊಂಡಾಗ, ಮನದೊಳಗೆ ಉಳಿದುಕೊಂಡಿತು, ಉಳಿದು ಬೆಳೆಯುವ ಆಸೆ... -ಪಲ್ಲವಿ ಕಬ್ಬಿನಹಿತ್ಲು