ಬೆಳಕಿನ ಭಯ
ಕತ್ತಲಿನೊಳಗೆ ಕರಗಿ ಯಾರಿಲ್ಲವೆಂದು ಕೊರಗುವ ನಾನು, ಹೆದರುತ್ತಿದ್ದೇನೆ ಬೆಳಕಿನ ಸುಳಿವು ಸಿಕ್ಕಾಗ... ಬೆಳಕ ಕಂಡು ಅವಿತುಕೊಳ್ಳಲು ಮರೆಯನರಸುವಾಗ, ಕತ್ತಲ ಕಣ್ಣುಪಟ್ಟಿ ನನ್ನನ್ನು ಬಿಟ್ಟು ಉಳಿದೆಲ್ಲವನು ತನ್ನೊಳಗೆ ಅಡಗಿಸಿಕೊಳ್ಳುತ್ತದೆ... ತಡಕಾಡುತ್ತಾ ಇನ್ನಷ್ಟು ಹುಡುಕುತ್ತೇನೆ; ಅಲ್ಲಲ್ಲಿ ಎಡವುತ್ತೇನೆ, ನೋವನ್ನು ಕಣ್ಣಿನೊಳಗೆ ಕದಡಿ ಕಣ್ಣೀರಾಗುತ್ತೇನೆ, ಯಾರಿಗೂ ನಿಜ ಹೇಳದೆ ನೂರು ಜನರೊಳಗೆ ನೂರು ಕಥೆಯಾಗುತ್ತೇನೆ, ಅವರೊಳಗೆ ಕುಳಿತ ರೇಜಿಗೆಗಳಿಗೆ ಚಿತೆಯಾಗುತ್ತೇನೆ, ಅವರು, ಹೆಣೆದಿಟ್ಟುಕೊಂಡ ನೂರು ಕಥೆಗಳನು ಉಸುರಿ, ನಮಗ್ಯಾಕೆ ಅವಳ ಉಸಾಬರಿ ಎನ್ನುತ್ತಾ ಎಲ್ಲರೂ ಹಗುರಾಗುತ್ತಾರೆ; ನಾನು, ಮತ್ತೆ ಎಲ್ಲವನು ಕೇಳಿ ಭಾರವಾಗಿ ಭಯಬಿದ್ದು ಇನ್ನಷ್ಟು ಕತ್ತಲಿನೊಳಗೆ, ಕತ್ತಲೂ ಹೆದರುವ ಕರಿಕೂಪದೊಳಗೆ ಹೋಗಬೇಕೆಂದುಕೊಳ್ಳುತ್ತೇನೆ... ಕಾರಣ, ನೂರಾರು ಸುಳ್ಳುಗಳೆಡೆಯಲಿ ನನ್ನದೊಂದು ಸತ್ಯ ಬೆತ್ತಲಾಗಲು ಹೆಣಗುತ್ತಿದೆ, ಆದರೆ, ಮಿಥ್ಯದ ಹೊದಿಕೆಗಳನು ಸರಿಸುವುದಕ್ಕಿಂತಲೂ ಅದರೊಳಗೆ ಹೂತು ಹೋಗುವುದು ಸರಳವೆಂದು, ಕೂಪದೊಳಗೆ ನುಸುಳಿರುವೆನು ನಾನು; ಈಗ ಹೆದರುತ್ತಿದ್ದೇನೆ ಬೆಳಕಿನ ಸುಳಿವು ಸಿಕ್ಕಿತೆಂದು... ಕತ್ತಲಿನೊಳಗೆ ಕರಗಿ ಯಾರಿಲ್ಲವೆಂದು ಕೊರಗುವ ನಾನು, ಹೆದರುತ್ತಿದ್ದೇನೆ ಬೆಳಕಿನ ಸುಳಿವು ಸಿಕ್ಕಾಗ.....