ಮರಣದಂಡನೆ
ಮರಣದಂಡನೆ (Prof. ಬರಗೂರು ರಾಮಚಂದ್ರಪ್ಪ ) ಇದು ಬರಗೂರು ರಾಮಚಂದ್ರಪ್ಪರವರು ಬರೆದ ಕಾದಂಬರಿ. ' ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದ ಕಾದಂಬರಿಯನ್ನು ೨೦೧೪ರಲ್ಲಿ ಮೈಸೂರಿನ 'ಅಭಿರುಚಿ ಪ್ರಕಾಶನ'ದವರು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಬರಗೂರರ ಹೆಸರು ಅಪರಿಚಿತವಲ್ಲದಿದ್ದರೂ ಅವರ ಬರವಣಿಗೆಯ ಶೈಲಿ ನನಗೆ ಅಪರಿಚಿತವಾಗಿಯೇ ಉಳಿದಿತ್ತು, ನಮ್ಮ ಸುಳ್ಯದ ಸಾರ್ವಜನಿಕ ಗ್ರಂಥಾಲಯದಲ್ಲಿ ಪುಸ್ತಕದ ಮೇಲೆ ಅವರ ಹೆಸರು ಕಂಡದ್ದೇ ತಡ ಅದರ ಮುಖಪುಟ, ಶೀರ್ಷಿಕೆಯನ್ನೂ ಸರಿಯಾಗಿ ನೋಡದೆ ಎರಡು ಪುಸ್ತಕಗಳನ್ನು ಎತ್ತಿಕೊಂಡಿದ್ದೆ. ಈ ಪುಸ್ತಕವನ್ನು ಓದಿದ ನಂತರ ಅದರಲ್ಲೇನಾದರು ತಪ್ಪಿದೆ ಎಂದು ನನಗನಿಸದು. ಕತೆಗಾರನೊಬ್ಬ ತನ್ನೂರಿನ ಹುಡುಗನೊಬ್ಬನ ಕತೆಯನ್ನು ನಮ್ಮೆದುರು ತಾನು ಕಂಡ ಹಾಗೆ ತೆರೆದಿಡುತ್ತಾ ಹೋಗುತ್ತಾನೆ. ಕತೆಯ ಮುಖ್ಯ ಪಾತ್ರ ಹುಸೇನನ ಮೂಲಕ ಸಮಾಜದ ಸೂಕ್ಷ್ಮತೆಗಳೆಡೆಗೆ ತೆರೆದುಕೊಳ್ಳುತ್ತಾ ಹೋಗುವುದೇ ಈ ಕಾದಂಬರಿಯ ವೈಶಿಷ್ಟ್ಯ ಎನ್ನಬಹುದು. ಹುಸೇನ್ ನಗರದ ಜೈಲಿನಲ್ಲಿ ಮರಣದಂಡನೆಗೆ ಗುರಿಯಾದವರನ್ನು ನೇಣುಗಂಬಕ್ಕೇರಿಸುವಾತ(Death Sentence Executor)!! ಆತನಿಗೆ ತನ್ನ ತಂದೆ-ತಂಗಿ, ಊರಿನ ಟೀಚರಮ್ಮ, ಕತೆಗಾರರು ಹಾಗೂ ಊರಿನ ಹಿರಿಯರೇ ಜಗತ್ತು. ಅಲ್ಲಿಂದಾಚೆಗೆ ಹೆಚ್ಚೇನನ್ನೂ ತಲೆಗೆ ಹಚ್ಚಿಕೊಳ್ಳದ ನಮ್ಮ ಹುಸೇನ್ ಸರ್ವೇ ಜನಾಃ ಸುಖಿನೋಭವಂತು ಅಂತ ತನ್ನಷ್ಟಕ್ಕೆ ತಾನು ಬದುಕುತಿದ್ದವನು. ಅ...