ದರ್ಪಣ
ಅರೆ! ಅವಳೇ ಇವಳಾ? ಎಂದು ನನ್ನ ಮನಸ್ಸು ಅಚ್ಚರಿಗೊಂಡಿತು, ಮತ್ತೊಮ್ಮೆ ತಿರುಗಿದೆ. ಗೊಂದಲ ನಿವಾರಣೆಗೆ. ಹೌದು, ಅವಳೇ... ಅವಳು ನನ್ನ ಬಾಲ್ಯದ ಗೆಳತಿ ದರ್ಪಣ. ಇಂದು ಕಂಕುಳಲ್ಲೊಂದು ಕೂಸು, ಕೈಯಲ್ಲಿ ತರಕಾರಿಯ ಕಟ್ಟನ್ನು ಹಿಡಿದು ವಿವಾಹಿತ ಮಹಿಳೆಯ ಗಾಂಭೀರ್ಯದೊಂದಿಗೆ ನನ್ನೆದುರಿನಿಂದಲೇ ಸುಳಿದು ಮರೆಯಾದಳು. ಅವಳ ಜೊತೆಗೆ ನನ್ನ ಮನಸ್ಸು ಕೂಡ ಮರೆಯಾಯಿತು. ಅವಳ ಗುರಿ ಯಾವುದೆಂದು ತಿಳಿಯದಿದ್ದರೂ ನನ್ನ ಮನಸ್ಸು ಹೆಜ್ಜೆಯಿಟ್ಟಿದ್ದು ಬಾಲ್ಯದ ಕಡೆಗೆ... * * * * * ದಪ್ಪು! ಅವಳೇ ದರ್ಪಣ, ಅದಾಗ ಎಳೇ ಹುಡುಗಿ, ಗುಂಡು-ಗುಂಡಾಗಿ ತನ್ನ ಕರ್ರಗಿನ ಕೇಶರಾಶಿಯನ್ನು ಬಾಚದೆ, ಸಿಂಬಳ ಸುರಿಸುತ್ತಾ ನನ್ನೊಂದಿಗೆ ಕಲ್ಲಾಟ ಆಡುವುದರಲ್ಲಿ ಸಂತಸ ಪಡುತ್ತಿದ್ದಳು. ಹರಿದ ಫ್ರಾಕು ಹಾಕಿಕೊಂಡು ನನ್ನ ಜೊತೆಗೆ ಅಂಗನವಾಡಿಗೂ ಓಡಿ ಬರುತ್ತಿದ್ದಳು. ನಾನೋ ಅವಳಿಂದ ಎರಡು ವರ್ಷ ದೊಡ್ಡವನು. ನನ್ನಲ್ಲಿ, ನಾನವಳ ' ದೊಡ್ಡಣ್ಣ ' ಎಂಬ ಭಾವನೆ ಮನೆ ಮಾಡಿತ್ತು. ಕೊಂಕು ತೆಗೆದು, ಕಾಲೆಳೆದು ರೇಗಿಸಿ, ಅವಳನ್ನಳಿಸಿ, ಕೊನೆಗೆ ಅವಳ ಮನೆ ತಲುಪುವಷ್ಟರಲ್ಲಿ ' ಅಕ್ರೋಟ್ ' ಕೊಟ್ಟು ನಗಿಸುತ್ತಿದ್ದೆ. ಅಷ್ಟಲ್ಲದೆ ಬೆಳೆದಂತೆ ' ದೊಡ್ಡ ಶಾಲೆ ' ಗೆ ಹೋದಾಗ