ಹನಿ-ದನಿ
ಮಕ್ಕಳ ಬೆನ್ನಿಗೆ ರೆಕ್ಕೆಯನಂಟಿಸಿದ ಗುರುವು ತನ್ನ ನೆಲವ ಬಿಟ್ಟು ಹಾರಲೇ ಇಲ್ಲ!! *** ವಿನಂತಿಗಳ ಸಂತೆಯಲಿ ಬೆಲೆಯಿರುವುದು ಬಣ್ಣದ ಮಾತುಗಳಿಗಷ್ಟೇ!! *** ಕಣ್ಣ ರೆಪ್ಪೆಯ ಗೋಡೆಗಳ ಹಿಂದಡಗಿರುವುದು ಬಣ್ಣದ ಕನಸುಗಳು!! *** ಅವಳ ಅಡುಗೆ ಮನೆಯ ಕತೆಗಳು-ವ್ಯಥೆಗಳು ಹಾಳೆಗಳಿಗಿಳಿಯಲೇ ಇಲ್ಲ!! *** ಅಪ್ಪನ ದಪ್ಪ ಮೀಸೆಯ ಮರೆಯಲ್ಲವಿತಿರುವುದು ನೋವಿನ ನಗೆಯೇನು?! *** ಹಸಿವಿನ ಹೊರೆಯಡಿಯಲ್ಲಿ ಮೊನ್ನೆಯ ತಂಗಳನ್ನವೂ ಹಳಸದು!! *** ಮನೆಯೊಡತಿಯ ಹೆಸರು ಮನೆಯೊಡೆಯನ ಮಡದಿಯೆಂದು!! *** ಸಿರಿವಂತನ ಸಂಪತ್ತಿನ ಮೂಟೆ ಹೊತ್ತವನ ಗೋಣು ಮುರಿದರೂ ಮುಗಿದದ್ದಿಲ್ಲ!! *** ಸಂಸಾರದ ನೊಗ ಅವನಿಗೆಂದೂ ಭಾರವೆನಿಸಲಿಲ್ಲ!! *** ಉಸಿರುಗಟ್ಟಿಸಿದ ಹತ್ತು ಜನರು ಆತ ಸತ್ತ ಮೇಲೆ ಸುತ್ತ ನಿಂತು ಅತ್ತರು!! -ಪಲ್ಲವಿ ಕಬ್ಬಿನಹಿತ್ಲು