ಹೊಸತನದ ಸೋಗಿನಲ್ಲಿ...


ಇನ್ನೇನು ಗೋಡೆಗೆ ನೇತು ಹಾಕಿರುವ ಕ್ಯಾಲೆಂಡರ್ ಬದಲಾಯಿಸುವ ದಿನ ಬಂತು... ಹೊಸ ವರ್ಷ ಎಂಬ ಸೋಗಿನಲ್ಲಿ ಎಲ್ಲರಿಗೆ ಸಿಹಿಯನ್ನು ಬಯಸುವ, ಬದುಕಿನಲ್ಲಿ ಎದುರಾಗುವ ಕಹಿಯನ್ನು ಎದುರಿಸುವ ಶಕ್ತಿ ಇರಲೆಂದು ಹಾರೈಸುವ ಸಂದೇಶಗಳು ರವಾನೆಯಾಗುತ್ತಲಿದೆ, ಕಳೆದ 2020ರಲ್ಲಿ ಕಷ್ಟ-ನಷ್ಟಗಳ ನಡುವೆಯೂ ಜೊತೆಯಾದ ಆತ್ಮೀಯರಿಗೆ ಧನ್ಯವಾದಗಳು, ಬಿರುಕು ಬಿಟ್ಟ ಸಂಬಂಧಗಳ ಸವಿಯನ್ನು ನೆನಪಿಸಿ ಅವರವರ ಪಾಲಿನ ಕ್ಷಮೆ ಯಾಚನೆಯ ಸಂದೇಶಗಳು ಸಹಾ ಮತ್ತೊಮ್ಮೆ ಹರಿದಾಡತೊಡಗಿವೆ. ಮತ್ತೊಮ್ಮೆ ನ್ಯೂ ಈಯರ್ ರೆಸೊಲ್ಯೂಶನ್ (New Year Resolution) ತೆಗೆದುಕೊಂಡು, ಈ ಬಾರಿ ಯಾರು ಏನೆಂದರೂ ನಾನು ಹಾಕಿದ ಗುರಿಯನ್ನು ಮುಟ್ಟಿಯೇ ತೀರುತ್ತೇನೆ ಎಂಬ (ಆರಂಭ!) ಶೂರತ್ವದ ಮಾತುಗಳು ಎದೆಯೊಳಗಿನಿಂದ ಮೊಳಗುತ್ತಿವೆ... ಇವೆಲ್ಲ ಪ್ರತಿ ಹೊಸವರ್ಷದಲ್ಲಿ ಮತ್ತೆ-ಮತ್ತೆ ಮರುಕಳಿಸುವಂತಹವೇ ಹಾಗಾದರೆ ಹೊಸತೇನಿದೆ ಎಂದು ಕೇಳಿದರೆ ನನ್ನಲ್ಲಿ ಉತ್ತರವಿಲ್ಲ!




ಹಿಂದಿನ ಬಾರಿ ಹೊಸ ವರುಷಕ್ಕೆ ನಾನೇ ಹಾಕಿಟ್ಟುಕೊಂಡ ಬೇಲಿಯನ್ನು ದಾಟಿಕೊಂಡು ಹೊಸ ಮುಖಗಳ ಪರಿಚಯವಾದ ಹಾಗೆಯೇ, ಗೆಳೆತನದ ನಂಟನ್ನು ಬೆಸೆದುಕೊಂಡು ಬಹಳಷ್ಟು ಗೆಳೆಯ-ಗೆಳತಿಯರನ್ನು ಸಂಪಾದಿಸಿಕೊಳ್ಳಬೇಕೆಂದುಕೊಂಡಿದ್ದೆ, ಆದರೇನಾಯಿತು, ಈಗಲೂ ಮೊದಲಿದ್ದ ಗೆಳೆಯ-ಗೆಳತಿಯರನ್ನು ನಾನು ಕಳೆದುಕೊಳ್ಳಲಿಲ್ಲ ಎಂಬ ತೃಪ್ತಿ ಮಾತ್ರ ನನ್ನೊಂದಿಗೆ ಉಳಿದದ್ದು. ಅದಕ್ಕಿಂತಲೂ ಹೆಚ್ಚಾಗಿ ನನ್ನ ಸ್ನೇಹವಿದ್ದದ್ದು ಗ್ರಂಥಾಲಯದೊಂದಿಗೆ, ಪುಸ್ತಕಗಳೊಂದಿಗೆ... ಆದರೆ ಕೊರೋನಾ ಕೃಪೆಯಿಂದ ವರ್ಷದ ಬಹುಪಾಲು ಬಾಗಿಲು ಮುಚ್ಚಿಕೊಂಡೇ ಇದ್ದು, ತೆರೆದಾಗಲೂ ಸಹ ಕೊರೋನಾ ಭೀತಿಯಿಂದ ಅದರ ಆಸು-ಪಾಸಿನಲ್ಲಿ ಸುಳಿಯದೇ ಇದ್ದದ್ದು ಕಹಿ ಸತ್ಯ. ಹಾಗೆಂದು ಅಷ್ಟಕ್ಕೇ ಬಿಟ್ಟು ಹೋಗುವ ಚಟವಲ್ಲ ಪುಸ್ತಕಗಳದ್ದು, ಆನ್‍ಲೈನ್ ನಲ್ಲಿ ಪಿಡಿಎಫ್ ರೂಪದಲ್ಲಿ ಒಂದಷ್ಟು ಪುಸ್ತಕಗಳನ್ನು ಓದಿದ್ದು ಹೌದು, ಆದರೆ ಕೈಯಲ್ಲಿ ಹಿಡಿದು ಓದುವ ಪುಸ್ತಕಗಳ ಮುಂದೆ, ಇದರ ರುಚಿ ಹಿಡಿಸಲೇ ಇಲ್ಲ. 

ಇನ್ನು ಕಾಲೇಜಿನ ಸಂಗತಿಯಂತೂ ಇನ್ನೂ ಸ್ವಾರಸ್ಯಕರವಾದದ್ದು. ಇನ್ನೇನು ಇಂಟರ್ನಲ್ ಪರೀಕ್ಷೆಗಳ ನಂತರ ‘ಕಾಲೇಜು ಡೇ’ ಸಂಭ್ರಮ ಅಂದುಕೊಳ್ಳುವಾಗ ಲಾಕ್ಡೌನ್ ಬ್ರೇಕ್ ಹಾಕಿತ್ತು ಮನಸಿನ ಗಾಡಿಗೆ... ಅದೂ ಕಡಿಮೆ ಎನ್ನುವ ಹಾಗೆ, ಪ್ರತಿಯೊಬ್ಬರದ್ದೂ ಒಂದೇ ದಿನದಲ್ಲಿ ಬದುಕಿನ ಆಯಾಮವೇ ಬದಲಾಗಿ ಹೋಗಿತ್ತು. ಇಷ್ಟು ದಿನದಿಂದ ಬದಲಾಗದು ಎಂಬಂತೆ ಬದುಕಿದ್ದು ಬುಡಮೇಲಾಗಿತ್ತು. 



ವ್ಯಕ್ತಿಗಿಂತ ಸಮಷ್ಟಿಯ ದೃಷ್ಟಿಕೋನದಲ್ಲಿ ನೋಡಿದಾಗ ಒಂದೆಡೆ ಜೀವನಕ್ಕೆ ಆಧಾರವಾಗಿದ್ದ ವೃತ್ತಿ, ಕೆಲಸಗಳು ಒಂದೊಂದಾಗಿ ಕೈ ಜಾರಿ ಹೋಗುತ್ತಿದ್ದವು, ಇನ್ನೊಂದೆಡೆ ರೋಗದ ಭಯ ಅದಕ್ಕಿಂತಲೂ ಹೆಚ್ಚಾಗಿ ಆಸ್ಪತ್ರೆಯ ಖರ್ಚಿನ ಚಿಂತೆ ಸಾಮಾನ್ಯನ ಬದುಕನ್ನು ಹೆದರಿಸುತಿದ್ದವು. ಹಸಿವು ಮತ್ತು ಜೀವನ ಎಂಬೆರಡು ಪೆಡಂಬೂತಗಳಾಗಿ ಅತ್ತ ದರಿ ಇತ್ತ ಪುಲಿ ಎಂಬಂತೆ ಜೀವ ಹಿಂಡಿದ್ದು ಭೀಕರ. ಅದೇ ಭಯ ಅಲ್ಲಲ್ಲಿ ಅಸಹಾಯಕತೆಗಳಾಗಿ, ಕೆಲವು ವಾರ್ತಾವಾಹಿನಿಗಳಿಗೆ ಊಟ ಹಾಕುವ ತಟ್ಟೆಗಳಾದದ್ದು ಸಹ ಸಮಾಜದ ಕಟು ವಾಸ್ತವ. 






ಮೈಲುಗಟ್ಟಲೆ ನಡೆದು ಊರು ಸೇರಿಕೊಂಡುಬಿಡುತ್ತೇವೆ ಎನ್ನುತ್ತಾ ಹಿರಿ-ಕಿರಿಯರೆನ್ನದೆ ಊರಿನೆಡೆಗೆ ಹೆಜ್ಜೆ ಹಾಕುತಿದ್ದ ಒಂದಷ್ಟು ಘಟನೆಗಳು ಬದುಕಿನುದ್ದಕ್ಕೂ ಚುಚ್ಚುತ್ತಲೇ ಉಳಿಯುವ ಸಂಗತಿಗಳು. ಎಲ್ಲವನ್ನೂ ಎದುರಿಸಿಕೊಂಡು ಸಮಾಜಕ್ಕಾಗಿ ತಮ್ಮ ಬದುಕನ್ನೇ ಒತ್ತೆಯಿಟ್ಟ ವೈದ್ಯರು, ಪೋಲಿಸರು, ಸ್ವಚ್ಛತಾ ತಂಡದವರು, ಯುವಕ ಸಂಘಟನೆಗಳು, ಫಾರ್ಮಸಿಗಳು, ಎನ್.ಜಿ.ಓ ಗಳ ಸೇವೆಗಳನ್ನು ನೆನೆದರೆ ಇಂದಿಗೂ ಮೈ ರೋಮಾಂಚನಗೊಳ್ಳುತ್ತದೆ. ಲಾಕ್‍ಡೌನ್ ನಲ್ಲಿ ಜನರ ಕಣ್ಣಲ್ಲೇ ಉಳಿದ ಕಣ್ಣೀರು, ದುಡಿಯುವ ಮನಸಿದ್ದೂ ಕೆಲಸವಿಲ್ಲದ ನಿಸ್ಸಹಾಯಕ ಭಾವ, ಮುಂದೇನು ಎಂಬ ಗಾಬರಿಯ ನಡುವೆಯೂ ಸಹ ಕಲಿತುಕೊಂಡ ಪಾಠಗಳಿಗೆ, ಜೋಳಿಗೆಯನ್ನು ತುಂಬಿದ ಅನುಭವಗಳಿಗೆ ಮಿತಿಯೇ ಇಲ್ಲ.



ಒಂದೊಂದೇ ಪೊರೆ ಕಳಚಿಕೊಂಡಂತೆ ಲಾಕ್ಡೌನ್ ಸರಿದಾಗ ಬಹಳಷ್ಟು ಬದಲಾವಣೆಗಳಿಗೆ ಸಮಾಜ ಒಪ್ಪಿಕೊಂಡಾಗಿತ್ತು... ಮುಖ್ಯವಾಗಿ ಆನ್ಲೈನ್ ಶಿಕ್ಷಣ ವ್ಯವಸ್ಥೆ, ಪಾವತಿ ವ್ಯವಸ್ಥೆಗಳೆಲ್ಲವೂ ಬದುಕಿನ ಸಹಜ ಭಾಗಗಳೇನೋ ಎಂಬಷ್ಟು ಸಹಜವಾಯಿತು. ಹೊಸ-ಹೊಸ ಯೋಚನೆಗಳು, ಪ್ರತಿಭೆಗಳು ಬೆಳಕಿಗೆ ಬಂದವು. ಇರುವುದರಲ್ಲಿಯೇ ಎಷ್ಟನ್ನು ಸಾಧಿಸಬಹುದು ಎಂಬುವುದಕ್ಕೆ ಸಾಕಷ್ಟು ಜನರು ಉದಾಹರಣೆಯಾಗಿ ನಮ್ಮ ಮುಂದೆ ನಿಂತರು. ಬಹಳಷ್ಟು ಪ್ರತಿಭೆಗಳು ನಮ್ಮನ್ನಗಲಿದರು. ಹಲವಾರು ಹೊಸ ಪ್ರಯೊಗಗಳಿಂದ ಹೊಸ ಮುಖಗಳೂ ಸಹ ಪರಿಚಿತವಾದವು.



ಹೀಗೆ ಸಿಹಿ-ಕಹಿಗಳ ನಡುವೆ ನಾಳೆ ಮತ್ತೆ ಹೊಸ ವರ್ಷ ನಮಗಾಗಿ ಕಾಯುತ್ತಿದೆ... ಈ ಬಾರಿ ಈ ಹೊಸತನದ ಭಾವ ನಾಳೆಗೆ ಸೀಮಿತವಾಗದೆ, ದಿನ-ದಿನವೂ, ಕ್ಷಣ-ಕ್ಷಣವೂ ಹೊಸತೇ ಎಂಬುವುದನ್ನು ಒಪ್ಪಿಕೊಂಡು, ಈ ವರ್ಷ ಹೀಗೇ ಇರಬೇಕು ಅನ್ನುವುದಕ್ಕಿಂತ ಹೇಗಿದ್ದರೂ ನಾನು ಬೆಳೆಯುತ್ತಾ, ನನ್ನ ಗುರಿಯೆಡೆಗೆ ಹೆಜ್ಜೆ ಹಾಕುತ್ತೇನೆ ಎಂಬ ಭಾವದೊಂದಿಗೆ ಮತ್ತೊಂದು ಹೊಸ ದಿನವನ್ನು ನವ ವರ್ಷವೆಂದು ಸ್ವಾಗತಿಸೋಣ...



ನಿಮ್ಮ 2020ರ ಅನುಭವಗಳು, ವಿಶೇಷ ನೆನಪುಗಳಿದ್ದರೆ, ಕಲಿಕೆಗಳಿದ್ದರೆ ನಮ್ಮೊಂದಿಗೆ ಕಾಮೆಂಟ್ ನಲ್ಲಿ ಹಂಚಿಕೊಳ್ಳಿ...

-ಪಲ್ಲವಿ ಕಬ್ಬಿನಹಿತ್ಲು



Comments

  1. Wonderful artical.wish you happy new year

    ReplyDelete
  2. ಅಷ್ಟೇ ಅಲ್ಲ.. ಕಳೆದು ಹೋದ ಬಾಲ್ಯ ದ ಕಡೆಗೆ ಇಣುಕಿ ನೋಡಲು ಸಹಕರಿಸಿ ದ್ದು ಇದೇ corona year 2020. Online class ನೆಪದಲ್ಲಿ ಬಹುತೇಕರ ಮೊಬೈಲ್ ಕನಸು ನನಸಾಗಿದ್ದು ಇದೇ ವರುಷ. ಬೆಂಗಳೂರು, ಮೈಸೂರು ಎಂಬ ಮಹಾ ನಗರದಿಂದ ಹಳ್ಳಿ ಸೇರಿದ ಅಣ್ಣಂದಿರ ಜೊತೆ ಗೋಲಿ , ಕ್ರಿಕೇಟ್, ಲಗೋರಿ ಆಡಲು ; ಸತ್ತೆ ಹೋಗಿದೆ ಎಂಬಂತಿದ್ದ ಕೂಡು ಕುಟುಂಬದ ಸೊಗಡನ್ನು ಮತ್ತೆ ಚಿತ್ರೀಕರಿಸಿದ ಈ ವರುಷಕ್ಕೆ ಒಂದಿಷ್ಟಾದರೂ ಕೃತಜ್ಞತೆ ಇರಲೇಬೇಕು . ಸಕ್ಕರೆ ಇಲ್ಲದ ಕನ್ನ ಛಾಯ , ಗಂಜಿ ಚಟ್ನಿ ಯಲ್ಲಿ ಊಟ ಮಾಡಿದ ದಿನಗಳನ್ನು ಮರೆಯುವುದಾದರು ಹೇಗೆ? ?? Thank you 2020...

    ReplyDelete
  3. ಮಾನವನ ಮಿತಿಮೀರಿದ ಆಕ್ರಮಣದಿಂದ ಜರ್ಜರಿತವಾಗಿದ್ದ ಪ್ರಕೃತಿಗೆ ತುಸು ಚೇತರಿಸಿಕೊಳ್ಳಲು ಅವಕಾಶ ಸಿಕ್ಕಿದ್ದೇ ಈ ಲಾಕ್ಡೌನ್ ಸಂದರ್ಭದಲ್ಲಿ. ದುರಂತವೆಂದರೆ ನಾವಿನ್ನೂ ಪಾಠ ಕಲಿತಂತಿಲ್ಲ. ಮತ್ತದೇ ಹಳೆ ಚಾಳಿ ಮುಂದುವರಿದಂತಿದೆ.

    ReplyDelete
    Replies
    1. ಕಹಿ ಸತ್ಯ ಸರ್... ಎಂದಿದ್ದರೂ ನಾಯಿಬಾಲ ಡೊಂಕೇ ಎಂಬಂತಾಗಿದೆ ನಮ್ಮ ಸ್ಥಿತಿ...

      ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್

      Delete

Post a Comment

Popular posts from this blog

THE LONGING…

Heartless Me…

Let It Be...