ಮರಣದಂಡನೆ
ಮರಣದಂಡನೆ
ಇದು ಬರಗೂರು ರಾಮಚಂದ್ರಪ್ಪರವರು ಬರೆದ ಕಾದಂಬರಿ. ' ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದ ಕಾದಂಬರಿಯನ್ನು ೨೦೧೪ರಲ್ಲಿ ಮೈಸೂರಿನ 'ಅಭಿರುಚಿ ಪ್ರಕಾಶನ'ದವರು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಬರಗೂರರ ಹೆಸರು ಅಪರಿಚಿತವಲ್ಲದಿದ್ದರೂ ಅವರ ಬರವಣಿಗೆಯ ಶೈಲಿ ನನಗೆ ಅಪರಿಚಿತವಾಗಿಯೇ ಉಳಿದಿತ್ತು, ನಮ್ಮ ಸುಳ್ಯದ ಸಾರ್ವಜನಿಕ ಗ್ರಂಥಾಲಯದಲ್ಲಿ ಪುಸ್ತಕದ ಮೇಲೆ ಅವರ ಹೆಸರು ಕಂಡದ್ದೇ ತಡ ಅದರ ಮುಖಪುಟ, ಶೀರ್ಷಿಕೆಯನ್ನೂ ಸರಿಯಾಗಿ ನೋಡದೆ ಎರಡು ಪುಸ್ತಕಗಳನ್ನು ಎತ್ತಿಕೊಂಡಿದ್ದೆ. ಈ ಪುಸ್ತಕವನ್ನು ಓದಿದ ನಂತರ ಅದರಲ್ಲೇನಾದರು ತಪ್ಪಿದೆ ಎಂದು ನನಗನಿಸದು.
ಕತೆಗಾರನೊಬ್ಬ ತನ್ನೂರಿನ ಹುಡುಗನೊಬ್ಬನ ಕತೆಯನ್ನು ನಮ್ಮೆದುರು ತಾನು ಕಂಡ ಹಾಗೆ ತೆರೆದಿಡುತ್ತಾ ಹೋಗುತ್ತಾನೆ. ಕತೆಯ ಮುಖ್ಯ ಪಾತ್ರ ಹುಸೇನನ ಮೂಲಕ ಸಮಾಜದ ಸೂಕ್ಷ್ಮತೆಗಳೆಡೆಗೆ ತೆರೆದುಕೊಳ್ಳುತ್ತಾ ಹೋಗುವುದೇ ಈ ಕಾದಂಬರಿಯ ವೈಶಿಷ್ಟ್ಯ ಎನ್ನಬಹುದು.
ಹುಸೇನ್ ನಗರದ ಜೈಲಿನಲ್ಲಿ ಮರಣದಂಡನೆಗೆ ಗುರಿಯಾದವರನ್ನು ನೇಣುಗಂಬಕ್ಕೇರಿಸುವಾತ(Death Sentence Executor)!! ಆತನಿಗೆ ತನ್ನ ತಂದೆ-ತಂಗಿ, ಊರಿನ ಟೀಚರಮ್ಮ, ಕತೆಗಾರರು ಹಾಗೂ ಊರಿನ ಹಿರಿಯರೇ ಜಗತ್ತು. ಅಲ್ಲಿಂದಾಚೆಗೆ ಹೆಚ್ಚೇನನ್ನೂ ತಲೆಗೆ ಹಚ್ಚಿಕೊಳ್ಳದ ನಮ್ಮ ಹುಸೇನ್ ಸರ್ವೇ ಜನಾಃ ಸುಖಿನೋಭವಂತು ಅಂತ ತನ್ನಷ್ಟಕ್ಕೆ ತಾನು ಬದುಕುತಿದ್ದವನು. ಅಪರಾಧಿಗಳನ್ನು ನೇಣುಗಂಬಕ್ಕೇರಿಸುವುದೇ ಧರ್ಮಕಾರ್ಯ-ಪುಣ್ಯಕಾರ್ಯ ಅಂದುಕೊಳ್ಳುವ ಹುಸೇನನಿಗೆ ನ್ಯಾಯದ ಮೇಲೆ, ದೇಶದ ಮೇಲೆ ಇನ್ನಿಲ್ಲದ ಪ್ರೀತಿ. ನ್ಯಾಯಕ್ಕಾಗಿ ತನ್ನ ಉದ್ಯೋಗವನ್ನೇ ಅಡವಿಟ್ಟು ನೆರವಾಗುವುದರಲ್ಲೂ ಆತ ಹಿಂದುಳಿಯಲಾರ. ಆದರೆ ಆತನ ಇನ್ನೊಬ್ಬರಿಗೆ ಸಹಾಯ ಮಾಡುವ ಸ್ವಭಾವವೇ ಕಾನೂನಿನ ದೃಷ್ಟಿಯಲ್ಲಿ ಆತನನ್ನು ಅಪರಾಧಿಯಾಗಿಸಿದ್ದು ಹೇಗೆ? ಎಂಬುವುದೇ ಕಾದಂಬರಿಯ ಕಥಾವಸ್ತು. ಆತನನ್ನು ಕೋರ್ಟ್ ಅಪರಾಧಿಯಾಗಿ ಘೋಷಿಸಿದ್ದು ಮಾತ್ರವಲ್ಲದೆ ಮರಣದಂಡನೆಯ ಶಿಕ್ಷೆಯನ್ನೂ ನೀಡಿತ್ತು. ಆತನಿಗೆ ನ್ಯಾಯ ಸಿಗುವುದೇ? ಎಂಬುವುದನ್ನು ತಿಳಿಯುವುದಕ್ಕೆ ಕಾದಂಬರಿಯನ್ನು ಓದುವುದೇ ಚೆನ್ನ.
ಈ ಕಾದಂಬರಿಯಲ್ಲಿ ತನ್ನ ಮನೆಯವರ ಒಂದರ್ಥದಲ್ಲಿ ಊರಿನ ಒಳಿತಿಗಾಗಿ ತನ್ನೆಲ್ಲವನ್ನೂ ತ್ಯಾಗ ಮಾಡಿದ ನಿಸ್ವಾರ್ಥ ಮನೋಭಾವದ ಟೀಚರಮ್ಮ ಇದ್ದಾರೆ; ಎಲ್ಲವನ್ನೂ ಅರ್ಥ ಮಾಡಿಕೊಂಡು ತುಂಬಿದ ಕೊಡ ತುಳುಕದು ಎಂಬ ಮಾತಿಗೆ ನಿದರ್ಶನವಾಗಬಲ್ಲ ಹಯಾತ್ ಸಾಬರು ಇದ್ದಾರೆ; ಮುಗ್ಧತೆಯ ಮೂರ್ತಿಯಾಗಿರುವ ಫಾತೀಮ ಇದ್ದಾಳೆ, ಹೊಸ ಜಗದ ಬದಲಾವಣೆಗೆ ಒಗ್ಗಿಕೊಳ್ಳುವ ಪ್ರಯತ್ನದಲ್ಲಿ ಅಷ್ಟಿಷ್ಟು ಸಫಲರಾಗುತ್ತಾ ಅಂದಿನ ಮತ್ತು ಇಂದಿನ ನಡುವೆ ಇರುವ ಹೊಸಿಲಿನಲ್ಲಿ ನಿಂತ ಶಾನುಭೋಗರು ಹಾಗೂ ಪಟೇಲರಿದ್ದಾರೆ; ಸಾಮಾಜಿಕ ಕಾರ್ಯಕರ್ತೆಯಾಗಿ ನ್ಯಾಯದ ಹೋರಾಟಕ್ಕೆ ತನ್ನ ಬದುಕನರ್ಪಿಸಿಕೊಂಡ ಸಮತಾ ಇದ್ದಾಳೆ; ಬಲವಂತಯ್ಯನಂತಹ ಅತ್ಯಾಚಾರಿಯಿದ್ದಾನೆ, ಅಧಿಕಾರದ ಮದದಲ್ಲಿ ಮೆರೆಯುವ ಮುಖ್ಯಮಂತ್ರಿ ಒಂದೆಡೆಯಾದರೆ ಅಧಿಕಾರದೊಳಗೆ ಅಸಹಾಯಕತೆಯನ್ನನುಭವಿಸುತಿದ್ದ ರಾಷ್ಟ್ರಪತಿಯ ಚಿತ್ರಣವೂ ಇದೆ. ಅದರ ಜೊತೆಗೆ, ನ್ಯಾಯಕ್ಕಾಗಿ ಮುಖ್ಯಮಂತ್ರಿಯಾದ ತಂದೆಯನ್ನೇ ತನ್ನ ಹಟದೆದುರು ಮಣಿಸುತ್ತಾಳೆ, ಅದೇ ತಂದೆ ಇಲ್ಲವಾದಾಗ ಅವರಿಗಾಗಿ ಹಲುಬುವ ಸುಶೀಲ ಎಂಬ ಸಾಮಾನ್ಯ ಯುವತಿಯ ಪಾತ್ರ, ತನ್ನೂರಿನ ಮಗನಿಗಾಗಿ ಕೊರಳಲ್ಲಿದ್ದ ಕಾಸಿನ ಸರವನ್ನೇ ತೆಗೆದು ಎದುರಿಗಿರಿಸುವ ಊರಿನ ಮಹಿಳೆಯ ಪಾತ್ರ ಕಾದಂಬರಿಯುದ್ದಕ್ಕೂ ನಮ್ಮನ್ನು ಕಾಡುತ್ತವೆ. ಇನ್ನು ಮೌನವಾಗಿದ್ದುಕೊಂಡೇ ಎಲ್ಲವನ್ನು ಕತೆಯಾಗಿ ನಮ್ಮೆದುರಿಗಿರಿಸುವ ಕತೆಗಾರನ ಕಣ್ಣಲ್ಲಿ ನಮ್ಮೊಳಗಿನ ಗೊಂದಲಗಳೂ ಹೊರಬೀಳುವ ಶೈಲಿ ಆಕರ್ಷಕವಾದದ್ದು. ಒಟ್ಟಿನಲ್ಲಿ ಬರಗೂರರ ಲೇಖನಿಯಲ್ಲಿ ಮೂಡಿದ ಕತೆಗಾರನು ತನ್ನೂರಿನ ಕತೆ ಎನ್ನುತ್ತಾ ನಮ್ಮ ಸುತ್ತ-ಮುತ್ತಲಿನ ಸಮಾಜದ ಘಟನೆಗಳನ್ನು ನಮ್ಮೆದುರಿಗಿಟ್ಟಿದ್ದಾನೆ. ಹಾಗಾಗಿಯೇ ಇರಬೇಕು ಇದರಲ್ಲಿ ಬರುವ ಎಲ್ಲಾ ಪಾತ್ರಗಳೂ ವೈಯುಕ್ತಿಕ ನೆಲೆಯಲ್ಲಿ ಹತ್ತಿರವಾಗುತ್ತವೆ, ಅಲ್ಲಲ್ಲಿ ಅಸಹಾಯಕತೆಯ ನಿಟ್ಟುಸಿರು ಹೊರಹಾಕುವಂತೆ ಮಾಡುತ್ತವೆ. 'ಮರಣದಂಡನೆ' ಕಾದಂಬರಿಯ ಶೀರ್ಷಿಕೆಯಲ್ಲಿರುವ ಮರಣದಂಡನೆಯ ತೀರ್ಪು ಹುಸೇನನ ವಿರುದ್ಧವೋ ಅಥವಾ ನ್ಯಾಯದ ವಿರುದ್ಧವೋ? ಉತ್ತರ ಮನಸಿಗೆ ಬಿಟ್ಟದ್ದು...
ಬರಗೂರು ರಾಮಚಂದ್ರಪ್ಪ ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸಕ್ತಿಯಿದ್ದಲ್ಲಿ ಈ ಕೊಂಡಿಯನ್ನು ಬಳಸಬಹುದು...
-ಪಲ್ಲವಿ ಕಬ್ಬಿನಹಿತ್ಲು
🔥🔥
ReplyDelete🤩🙏🙏
DeleteNimma Hosa Hejjege shubhashayagalu.
ReplyDeleteಧನ್ಯವಾದಗಳು
Delete👍👍
ReplyDelete🙏🙏
Delete🙏🙏
ReplyDelete🙏👍👍
ReplyDelete🙏🙏
Delete