ಭಾಷೆಗೂ ಬಣ್ಣ ಉಂಟಂತೆ!!
ಭಾರತೀಯರು ವರ್ಣಪ್ರಿಯರು. ಭಾವನೆಗಳು, ಸಂಸ್ಕೃತಿಗಳು, ಹಬ್ಬಗಳು ಎಲ್ಲದಕ್ಕೂ ಬಣ್ಣಗಳು ರಾಯಭಾರಿ! ಭಾಷೆಯ ಸೊಗಡನ್ನು ಬಿಂಬಿಸುವ ಬಣ್ಣವೂ ಇರಬಹುದೇನೋ ಎಂಬ ಕುತೂಹಲ ನನಗೆ. ಭಾಷೆಯ ಬಣ್ಣ ಎಂದಾಕ್ಷಣ ಥಟ್ಟನೆ ಹೊಳೆದದ್ದು ಕನ್ನಡ ಭುವನೇಶ್ವರಿಯ ಅರಶಿಣ-ಕುಂಕುಮದ ಪವಿತ್ರ ವರ್ಣ. ಆದರೆ ಸಂಸ್ಕೃತಿ ಮತ್ತು ಭಾಷೆ ಮರಕ್ಕೆ ಹಬ್ಬಿದ ಬಳ್ಳಿಯ ಹಾಗೆಯೇ ಅಲ್ಲವೇನು? ವೃಕ್ಷದ ಬೇರು ಆಳಕ್ಕಿಳಿದಷ್ಟು ಬಳ್ಳಿಯ ಬದುಕು ಅಷ್ಟರ ಮಟ್ಟಿಗೆ ಹೆಚ್ಚು ಸುರಕ್ಷಿತ. ಸಂಸ್ಕೃತಿಯ ತರುವಿಗೆ ಸುತ್ತಿಕೊಂಡ ನಮ್ಮ ಮಾತೃಭಾಷೆಯೆಂಬ ಲತೆಯು ಎಲ್ಲ ರಂಗಿನ ಹೂಗಳನ್ನು ಅರಳಿಸುತ್ತದೆಯಾದರೂ ಲತೆಯ ಇರುವನ್ನು ಬೇರೆ ಬಣ್ಣಗಳೂ ಎತ್ತಿ ಹಿಡಿಯಬಹುದಲ್ಲಾ, ಅವು ಯಾವುದಿರಬಹುದೆಂಬ ಹುಚ್ಚು ಯೋಚನೆಯೊಂದು ನನ್ನಲ್ಲಿ ಹುಟ್ಟಿಕೊಂಡಿತು. ಆ ಹೊತ್ತಿಗೆ ಕಾಡಿದ ಕನ್ನಡದ ಬಣ್ಣವು ‘ಕ್ಲಾಸಿಕ್’ ಕಪ್ಪು-ಬಿಳುಪು! ಎಲ್ಲಾ ರಂಗುಗಳು ಹದವಾಗಿ ಬೆರೆತ ಬಿಳುಪು, ಬಣ್ಣಗಳ ಅಸ್ತಿತ್ವಕ್ಕೆ ಸಡ್ಡು ಹೊಡೆಯುವ ಕಪ್ಪು(Black is the absence of colour).
ಅರೇ ಇದೇನಿದು? ಕನ್ನಡದ ಬಣ್ಣ ಎನ್ನುತ್ತಾ ಬಿಳುಪನ್ನು ಒಪ್ಪಿಕೊಳ್ಳಬಹುದೇನೋ, ಆದರೆ ಕಪ್ಪುಎನ್ನುತ್ತಾಳಲ್ಲಾ ಎಂದು ಮೂಗು ಮುರಿಯಬೇಡಿಪ್ಪಾ... ಎಷ್ಟೆಷ್ಟೋ ಹೊತ್ತು ಕುಳಿತು ತಲೆ ಕೆರೆದ ಮೇಲಷ್ಟೆ ನಾನು ಹೀಗಂದದ್ದು! ಕನ್ನಡದ ಬಣ್ಣವು ಅಸ್ತಿತ್ವದ "ಇರುವಿಕೆ ಹಾಗೂ ಇಲ್ಲದಿರುವಿಕೆ"ಯ ನಡುವಿನ ವಿರೋಧಾಭಾಸವನ್ನು ಪ್ರತಿನಿಧಿಸದಿದ್ದರೆ ಹೇಗೆ. ಪ್ರತಿನಿತ್ಯ ಇದ್ದರೂ ಇಲ್ಲದಂತೆ ನಮ್ಮ ಮಾತಾಗುವ ಭಾಷೆಯು ಭಾಷಿಗರ ಅಸ್ತಿತ್ವದ ಇರುವಿಕೆಯನ್ನು ಘಂಟಾಘೋಷವಾಗಿ ಸಾರುವುದಿಲ್ಲವೇ?
ಅದೇನಿದ್ದರೂ ಕಪ್ಪು ಅಂದಾಕ್ಷಣ ಮನದೊಳಗೆ ಮೂಡುವ ಚಿತ್ರಣ ನಕಾರತ್ಮಕವಾದದ್ದು; ಎದೆ ನಡುಗಿಸುವ ಕತ್ತಲೆಯೂ ಕಪ್ಪು, ನಿರಾಶೆಯ ಕರಿ ಛಾಯೆಯೂ ಕಪ್ಪು, ಕೆಡುಕೂ ಕಪ್ಪು, ಕಲೆಯೂ ಕಪ್ಪು, ನೋವೂ ಕಪ್ಪು!! ಕಪ್ಪೆಂದರೆ ಕೆಟ್ಟದ್ದು ಎನ್ನುವ ‘ಕಪ್ಪು’ಯೋಚನೆಯನ್ನು ನಾವು ಎಂದಿನಿಂದಲೋ ತಲೆಯೊಳಗೆ ತುಂಬಿಕೊಂಡು ಬಂದದ್ದೇನೋ ನಿಜ. ಆದರೆ ನನ್ನೆದೆಯಲ್ಲಿ ಕಪ್ಪೆಂದರೆ ಕನಸು ಹುಟ್ಟಿಸುವ ಕತ್ತಲ ಬಣ್ಣ, ಸಣ್ಣ ದೀಪದ ಮಿಣುಕನ್ನೂ ಬೆಳಕಾಗಿಸುವ ಆಶಾಕಿರಣದ ಬಣ್ಣ, ದುಡುಕುವುದು ಬದುಕಿನ ಸಹಜ ಸತ್ಯವೆನ್ನುವ ಬಣ್ಣ, ಬಿಳಿ ಹಾಳೆಯ ಮೇಲೆ ನಾನಿಟ್ಟ ದೃಷ್ಟಿಬೊಟ್ಟಿನ ಬಣ್ಣ, ಮನುಷ್ಯನನ್ನು ಹೆಜ್ಜೆ-ಹೆಜ್ಜೆಯಲ್ಲೂ ಕೆಡವಿ ಗಟ್ಟಿಯಾಗಿಸುವ ಬಣ್ಣ. ಸಾಮಾಜಿಕ ಬದಲಾವಣೆಗಳಿಗೆ ರುವಾರಿಯಾಗುವ ಬಂಡಾಯದ ಆರಂಭದ ಬಣ್ಣವೂ ಜನರ ಕಣ್ಣಲ್ಲಿ ಕಪ್ಪು!
ಕಪ್ಪು ಕಣ್ಣಿನ ಕಾಡಿಗೆಯಾದರೆ, ಕನ್ನಡ ಮಾತನಾಡುವವನ ಸ್ವರದ ಕಾಡಿಗೆ! ಅದೆಷ್ಟು ಭಾಷೆಗಳ ಅರಿವು ಮೆದುಳಿಗಿದ್ದರೂ ಹೃದಯದ ಒಳಗೆ ಗಾಢವಾದ ರಂಗು ಚೆಲ್ಲಿ ಭದ್ರವಾಗಿ ಕುಳಿತಿರುವುದು ನಮ್ಮ ಕನ್ನಡವೇ ಅಲ್ಲವೇನು?! ನಮ್ಮ-ನಮ್ಮ ಭಾಷೆ ಮಾತ್ರವೇ ನಮ್ಮ ನೈಜ ಅಸ್ತಿತ್ವವನ್ನು ಹೊರತರಲು ಸಾಧ್ಯವೆಂಬುದು ನನ್ನ ನಂಬಿಕೆ. ಹೇಗೆ ಕಪ್ಪು ಅದೆಷ್ಟು ಬಣ್ಣಗಳು ತನ್ನ ಮೇಲೆ ಹರಡಿಕೊಂಡರೂ ತನ್ನತನವನ್ನು ಬಿಟ್ಟುಕೊಡುವುದಿಲ್ಲವೋ ಹಾಗೆಯೇ ಕನ್ನಡವೂ ಬೇರೆ ಯಾವ ಭಾಷೆಯ ಪ್ರಭಾವವೂ ತನ್ನ ಮೂಲ ಸ್ವರೂಪಕ್ಕೆ-ಸೌಂದರ್ಯಕ್ಕೆ ಕುಂದು ತಾರದಂತೆ ಕಾಪಾಡಿಕೊಂಡು ಬಂದಿರುವುದನ್ನು ಅಲ್ಲಗಳೆಯುವಂತಿಲ್ಲ.
'ಸಂಕಟ ಬಂದಾಗ ವೆಂಕಟರಮಣ' ಎಂಬ ಮಾತಿನಂತೆ ಭಾಷೆಯ ಕೈಯನ್ನು ಗಟ್ಟಿಯಾಗಿ ಹಿಡಿಯುವುದು ಹೆಚ್ಚಾಗಿ ಹೃದಯದಲ್ಲಿ ನೋವು ಮಡುಗಟ್ಟಿದಾಗಲೇ! ಎದೆಯೊಳಗಿನ ನೋವೆಲ್ಲಾ ಹೊರ ಹಾಕುವ ಹೊತ್ತಲ್ಲಿ ಭಾಷೆಯ ಬಣ್ಣ ಕಪ್ಪಾಗದೆ ಬೇರೆ ಬಣ್ಣವಾಗಲು ಸಾಧ್ಯವಿದೆಯೇನು??
ಕಪ್ಪು ಬಣ್ಣದ ಇನ್ನೊಂದು ವಿಶೇಷತೆ ಏನಪ್ಪಾ ಅಂದ್ರೆ, ಯಾವುದೇ ಬಣ್ಣಕ್ಕೆ ಒಂಚೂರು ಕಪ್ಪು ಬೆರೆಸಿದರೆ ಮೂಲ ಬಣ್ಣ ಇನ್ನಷ್ಟು ಗಾಢವಾಗುತ್ತದೆ. ನಮ್ಮ ರಂಗೂ ಅಷ್ಟೇ ಭಾಷೆಯನ್ನು ಬದುಕಿಗೆ ಬೆರೆಸಿದಷ್ಟು ಬದುಕಿನ ಬಣ್ಣ ಗಾಢವಾಗುತ್ತದಲ್ಲವೇನು?!
ಈಗೀಗ ಕನ್ನಡವನ್ನು ಜನರು ಬಳಸಿ ಉಳಿಸಬೇಕೆಂಬ ಕೂಗು ಕೇಳಿ ಬರುತ್ತಿರುವುದು ಹೊಸ ವಿಷಯವೇನಲ್ಲ. ಆದರೆ ಯೋಚಿಸಬೇಕಾದ ವಿಚಾರವೇನೆಂದರೆ, ಅದೆಷ್ಟೋ ಏರಿಳಿತಗಳನ್ನು ಬದುಕಿ ಬಂದ ಭಾಷೆಗೆ ನಮ್ಮ ರಕ್ಷಣೆ ಬೇಕೆನ್ನುವುದು ಸರಿಯೇ? ಎಂಬ ಪ್ರಶ್ನೆ. ಕನ್ನಡವನ್ನು ನಾವು ಉಳಿಸಬೇಕಾದ್ದಕ್ಕಿಂತಲೂ ಕನ್ನಡವೇ ನಮ್ಮನ್ನುಳಿಸುವುದು ಎಂಬ ನಗ್ನ ಸತ್ಯದ ಅರಿವಿಲ್ಲದ ನಾವು ಮೂಢರಲ್ಲದೆ ಇನ್ನೇನು? ಸಂಸ್ಕೃತಿಯ ಒಳ-ಹೊರವುಗಳನ್ನೆಲ್ಲಾ ಅರಿತುಕೊಂಡೇ ಭಾಷೆ ಹುಟ್ಟಿದ್ದು-ಬೆಳೆದದ್ದು ಎಂಬುವುದರಲ್ಲಿ ಎರಡು ಮಾತಿಲ್ಲ. ಮಾನವನ ಅಸ್ತಿತ್ವದ ಆಧಾರವೂ ನಮ್ಮ ಮೂಲ ಸಂಸ್ಕೃತಿಯೇ. ಈ ಅಸ್ತಿತ್ವವನ್ನು ರಕ್ಷಿಸುವ ಶಕ್ತಿಯಿರುವುದು ‘ಸಂಸ್ಕೃತಿಯ ಭಾಷೆ’ಯಿಂದ ಮಾತ್ರ ಸಾಧ್ಯ. ಹಾಗಾಗಿ ಕನ್ನಡಿಗರ ಅಸ್ತಿತ್ವವನ್ನು ರಕ್ಷಿಸುವ ಕಪ್ಪು ದಾರ ಕನ್ನಡ. ಕನ್ನಡ ಕೃಷ್ಣನ ಹಾಗೆ, ಶ್ಯಾಮವರ್ಣದವನಾದರೂ ಎಲ್ಲರಿಗೂ ಅಚ್ಚು-ಮೆಚ್ಚು.
ಕನ್ನಡ ಮರದ ಬುಡಕ್ಕೆ ಉದುರಿ ಕಪ್ಪು ಗೊಬ್ಬರವಾಗುವ ಎಲೆಯ ಹಾಗೆ, ಬಳಸುವ ಜನರ ಬುದ್ಧಿಗೆ ಮೇವು.
ಕನ್ನಡ ಕಪ್ಪು ಮಳೆ ಮೋಡದ ಹಾಗೆ, ಕಾತರಿಸಿ ಕಾಯುವವರ ಎದೆಗೆ ತಂಪುಣಿಸುವಲ್ಲಿ ಹಿಂದುಳಿದದ್ದೇ ಇಲ್ಲ, ಆದರೆ ಕೋಪ ಬಂದಾಗ ಅದರೆದುರು ಉಳಿದವರೇ ಇಲ್ಲ!
ಕನ್ನಡ ಕಣ್ಣಿನ ಕಪ್ಪು ಬೊಂಬೆಯ ಹಾಗೆ, ಜಗತ್ತಿನ ಕಡೆಗೆ ನೋಡುವ 'ದೃಷ್ಟಿ'ಕೋನವಲ್ಲವೇ?!
ಹೀಗೆಲ್ಲಾ ಯೋಚಿಸುವಾಗ ಹೌದಪ್ಪಾ, ಕಪ್ಪು ನೆಲದ(ಕರುನಾಡ) ಭಾಷೆಯ ಬಣ್ಣ ಕಪ್ಪು ಎಂದದ್ದರಲ್ಲಿ ತಪ್ಪಿಲ್ಲ ಎನಿಸಬಹುದು. ಆದರೆ ಬಿಳುಪು ಕೂಡ ನಮ್ಮ ಮಾತಿನ ಬಣ್ಣ ಎಂದರೆ ವೈರೋಧ್ಯವಾಗದೆ ಎಂದುಕೊಂಡರೆ, ನಾನನ್ನುತ್ತೇನೆ ಇದೇ ನಮ್ಮ ಭಾಷೆಯ ಸೌಂದರ್ಯ ಎಂದು.
ಕಪ್ಪು ಎಲ್ಲ ಬಣ್ಣಗಳನ್ನು ಒಪ್ಪಿಕೊಳ್ಳದೆ, ಒಪ್ಪಿಕೊಂಡ ಬಣ್ಣಗಳನ್ನು ಎತ್ತಿ ಹಿಡಿಯುತ್ತದೆ ಎಂದಾದರೆ ಕನ್ನಡದ ಬಿಳುಪು ಎಲ್ಲ ಬಣ್ಣಗಳನ್ನು ತನ್ನದಾಗಿಸಿಕೊಳ್ಳುತ್ತದೆ. ಉದಾಹರಣೆಗೆ ಆಂಗ್ಲದ ಪದಗಳಾದ ಬಸ್ಸು, ಕಾರು, ಪೆನ್ನು, ಕಾಫಿಗಳೆಲ್ಲವೂ ಇಂದು ಕನ್ನಡದ ಸ್ವಂತ ಶಬ್ದಗಳು ಎನಿಸುವಷ್ಟು ಆತ್ಮೀಯವಾಗಿದೆ. ಬಿಳುಪಿನ ಇನ್ನೊಂದು ಗುಣವೆಂದರೆ ಎಲ್ಲ ರಂಗುಗಳು ಸೇರುತ್ತಾ ಹೋದಂತೆ ಬಣ್ಣ ಸ್ವಲ್ಪ ಸ್ವಲ್ಪವೇ ಬದಲಾದರೂ ಒಂದು ಹಂತದಲ್ಲಿ ಮಿಶ್ರವಾದ ಬಣ್ಣವು ಮತ್ತೆ ಬಿಳುಪಾಗುತ್ತದೆ. ಅಸ್ತಿತ್ವದ ರಂಗು ಕೊಂಚ-ಕೊಂಚವೇ ಬದಲಾಗಿ ಮತ್ತೆ ತನ್ನ ಅಸ್ತಿತ್ವಕ್ಕೆ ಮರಳುವ ಸೊಗಸು ನಮ್ಮ ಭಾಷೆ ಹಾಗೂ ಭಾಷಿಗರ ಸೊಗಡು ಎಂದರೆ ಸುಳ್ಳಲ್ಲ.
ಬಿಳಿ ಬಣ್ಣ ಶಾಂತಿ, ಪರಿಶುದ್ಧತೆಯ ಸಂಕೇತ. ರಕ್ತದ ಕೆಂಪು ಕಲೆಯೂ ಭಾಷೆಯ ಬಳಕೆಯಿಂದ ಶಾಂತಿಯ ಬಿಳುಪಾದದ್ದು ಇತಿಹಾಸದ ಪುಟಗಳಲ್ಲಿ ದಾಖಲಾದ ಸಂಗತಿ. ಬಿಳುಪು ಹೊಸ ಅವಕಾಶಗಳ ಕೇಂದ್ರ, ಹೊಸ ಬದುಕಿನ ನಿರೀಕ್ಷೆಯ ಬಣ್ಣ, ಕನಸುಗಳು ನನಸಾಗುವ ಆರಂಭದ ರಂಗು. ಕನ್ನಡದ ಹಾಗೆ ಮನಸು-ಬುದ್ಧಿಗೆ ತಂಪನ್ನೀಯುವ ಬಣ್ಣ. ಶ್ವೇತ ವರ್ಣ ಸರಳತೆ ಹಾಗೂ ಸ್ಪಷ್ಟತೆಯನ್ನು ಬಿಂಬಿಸುತ್ತದೆ. ಅದೆಷ್ಟೋ ಬಾರಿ ಸೌಂದರ್ಯದ ಅಳತೆಯ ಮಾಪಕವೂ ಬಿಳಿಯೇ ಆದದ್ದುಂಟು.
ಭಾಷೆಯ ಬಣ್ಣ ಭಾವನೆಗಳಿಂದಲೂ ನಿರ್ಧಾರಗೊಳ್ಳುತ್ತದಲ್ಲವೇ? ಭಾಷೆ-ಬದುಕು-ಭಾವಗಳ ನಂಟು ಮಾನವ ಬಾಳಲು ಹೊರಟ ಸಮಯದಷ್ಟು ಹಳತಾದದ್ದು. ಹಳತಾದರೂ ಇನ್ನೂ ಹೊಳಿತಾ ಇರುವುದು ನಮ್ಮಿರುವಿನಷ್ಟೇ ನಿಜವಾದದ್ದು. ಮಾತನಾಡುವ ಜನ ಹೆಚ್ಚಿದಷ್ಟು ಭಾವನೆಗಳೂ ಹೆಚ್ಚಿ ಭಾಷೆಯ ಬಣ್ಣದ ವ್ಯಾಪ್ತಿಯೂ ಹರಡಿಕೊಳ್ಳುತ್ತಾ ಹೋಗುತ್ತದೆ. ಹರಡಿದ ಬಣ್ಣಗಳು ಒಂದರಲ್ಲಿನ್ನೊಂದು ಸೇರಿಕೊಂಡು ಹೊಸತೇನನ್ನೋ ಹುಟ್ಟಿ ಹಾಕುತ್ತದೆ. ಹೊಸತು ಹಳತು ರಂಗುಗಳೆಲ್ಲಾ ಸೇರಿಕೊಂಡು ಬಣ್ಣ ಮತ್ತೆ ಬಿಳುಪಾಗುತ್ತದೆ!
ಕನ್ನಡದ ಕಪ್ಪು-ಬಿಳುಪಿನ ಲತೆಯೂ ಹಬ್ಬಿದಲ್ಲೆಲ್ಲಾ ವಿಧ-ವಿಧ ರಂಗು-ರೂಪದ ಕುಸುಮಗಳನ್ನರಳಿಸುತ್ತದೆ. ಎಲ್ಲಾ ಹೂವುಗಳೂ ತನ್ನದೇ ಆದ ಕಂಪು ಚೆಲ್ಲುತ್ತಾ ಮನಗೆಲ್ಲುತ್ತದೆ.
ಕುಂದಾಪುರದ ಕನ್ನಡ, ಮಂಗಳೂರಿನ ಕನ್ನಡ, ಬೆಂಗಳೂರಿನ ಕನ್ನಡ, ಉತ್ತರ ಕನ್ನಡಿಗರ ಕನ್ನಡ ಹೀಗೆ ಎಲ್ಲವೂ ಚೆಂದವೇ!
ಭಾಷೆಗೆ ಬಣ್ಣ ಹಚ್ಚಿದ್ದು ಆಡಿಕೊಳ್ಳುವ ವಿಚಾರವಲ್ಲದಿದ್ದರೂ, ನನ್ನ ಹುಚ್ಚು ಯೋಚನೆಗಳನ್ನು ಬಿಳಿ ಹಾಳೆಯ ಮೇಲೆ ಕಪ್ಪು ಶಾಯಿಯಲ್ಲಿ ಸ್ಪಷ್ಟವಾಗಿ ಬರೆಯಲು ಸಾಧ್ಯವಾಗುವುದು ಮಾತೃಭಾಷೆ ಕನ್ನಡದಲ್ಲಿ ಮಾತ್ರ ಸಾಧ್ಯ. ಅದಕ್ಕೆ ನನ್ನೆದೆಯಲ್ಲಿ ಕನ್ನಡದ ರಂಗು ಕಪ್ಪು-ಬಿಳುಪು ಎಂದದ್ದು.ಅಷ್ಟೇ ಅಲ್ಲದೆ ನೆನಪುಗಳ ರಂಗು ಕೂಡ ಕಪ್ಪು-ಬಿಳುಪಲ್ಲವೇ?
ಕಪ್ಪಿನ ಗಾಢತೆಯೂ ಬಿಳುಪಿನ ತಿಳಿಯೂ ಸೇರಿ ಭಾಷೆಯಾಗುತ್ತದೆ, ಭಾಷೆ ಬದುಕಾಗುತ್ತದೆ, ಬದುಕು ಬಣ್ಣವಾಗುತ್ತದೆ, ಬಣ್ಣ ಮತ್ತೆ ಭಾಷೆಯಾಗುತ್ತದೆ! ಭಾಷೆಯ ಕಪ್ಪು-ಬಿಳುಪಿನ ಬಣ್ಣದ ಮೇಲೆ ಚಿತ್ತಾರಗಳನ್ನು ಬಿಡಿಸುವ ಸ್ವಾತಂತ್ರ್ಯವಿರುವುದು ಅದನ್ನು ಬಳಸುವ, ಬಳಸುತ್ತಾ ಬೆಳೆಯುವ ಜನರಿಗೆ. ನಾವು ಎಷ್ಟು ಪ್ರೀತಿಯಿಂದ ಕುಂಚ ಹಿಡಿಯುತ್ತೇವೆಯೋ, ಭಾಷೆ ಅಷ್ಟೇ ಪ್ರೇಮದಿಂದ ನಮ್ಮನ್ನು ಅಪ್ಪಿಕೊಳ್ಳುತ್ತದೆ. ನಾವು ಬಿಡಿಸುವ ಚಿತ್ತಾರಗಳೆಲ್ಲಾ ನಮ್ಮ ವ್ಯಕ್ತಿತ್ವದ ಮೇಲೂ ಹರಡಿ ಕೊನೆಗೆ 'ನಮ್ಮತನ'ವಾಗುತ್ತದೆ. ಹೀಗೆ ಭಾಷೆಗೂ ಬದುಕಿನ ಬಣ್ಣ ಉಂಟಂತೆ...
-ಪಲ್ಲವಿ ಕಬ್ಬಿನಹಿತ್ಲು
ಸೊಗಸಾದ, ಅರ್ಥಪೂರ್ಣ ಲೇಖನ..
ReplyDelete👍👍
ReplyDelete👌👌
ReplyDelete