ನೆನಪುಗಳ ದಿಬ್ಬಣ


ನೆನಪುಗಳಿಗೆ ನೆನಪುಗಳು ನೆನಪಾದೀತೆ? ಅರ್ಥವಿಲ್ಲದ ಪ್ರಶ್ನೆ! ಈ ಹುಚ್ಚು ಯೋಚನೆಯ ಕೊಡುಗೆ ನನ್ನಲ್ಲಿ ಉಳಿದಿರುವ ಖಾಲಿ ಹೊತ್ತಿನದ್ದು, ಕೆಲಸವಿಲ್ಲದ ಖಾಲಿ ತಲೆಯದ್ದು... ಕೈಗೆ, ಮನಸಿಗೆ, ಬುದ್ಢಿಗೆ ಕೆಲಸವಿಲ್ಲದಿದ್ದರೆ ಕುಳಿತಲ್ಲಿಯೇ ನೂರು ಯೋಚನೆಗಳು ಕಾಡುತ್ತವೆ, ಅದರಲ್ಲಿ ಶೇಕಡ ತೊಂಬತ್ತರಷ್ಟು ನೆನಪುಗಳದ್ದೇ ಸಾಮ್ರಾಜ್ಯ. ಅಲ್ಲಿಯವರೆಗೆ ಕಾಣದ ಹಾಗೆ ಅವಿತು ಕುಳಿತಿದ್ದ ಈ ನೆನಪುಗಳು ಅದೆಲ್ಲಿಂದ ಸಮಯ ಸಾಧಿಸಿಕೊಂಡು ಕಣ್ಣೆದುರು ಮೆಲ್ಲನೆ ಜಗತ್ತೊಂದನ್ನು ತೆರೆಯುತ್ತದೆಯೋ ಅದು ಅಚ್ಚರಿಯಲ್ಲವೇ!!



ಅದೆಲ್ಲೋ ಓದಿದ ನೆನಪು, ಬದುಕಲ್ಲಿ ನಡೆದದ್ದೆಲ್ಲವೂ ನೆನಪಿದ್ದರೆ ಒಳ್ಳೆಯದೋ ಕೆಟ್ಟದೋ ಎಂಬುವುದಕ್ಕೆ ನೀಡಿದ್ದ ಪ್ರತ್ಯುತ್ತರ ಹೆಚ್ಚು-ಕಡಿಮೆ ಹೀಗಿತ್ತು: ನೆನಪುಗಳು ಮತ್ತೆ-ಮತ್ತೆ ಕಾಡುತ್ತವೆಂದರೆ ನಾವಿನ್ನೂ ಅದೇ ಹೊತ್ತಲ್ಲಿ ಉಳಿದುಕೊಂಡಿದ್ದೇವೆ, ಅಲ್ಲಿಂದ ಮುಂದೆ ಹೆಜ್ಜೆ ಇಡಲೇ ಇಲ್ಲ ಎಂದು!! ಸತ್ತ 'ಹೊತ್ತಿನಲ್ಲೇ' ಉಳಿದುಕೊಳ್ಳುವುದು ಸರಿಯೇನು?! ಬದುಕು ಅಲ್ಲೇ ಸಿಲುಕಿಕೊಂಡಾಗ ಮುಂದೆ ಹೆಜ್ಜೆ ಹಾಕುವುದು ಕಷ್ಟವಲ್ಲವೇ? 



ಹಾಗೆಂದು ನೆನಪುಗಳೆಲ್ಲ ಅಳಿಸಿಹೋಗುತ್ತದೆಂದರೆ, ಈ ಹೊತ್ತಿನ ನಗು, ಅಳು, ನಮ್ಮವರೊಂದಿಗೆ ಕುಳಿತು ಕಳೆಯುವ ಕ್ಷಣ, ಒಮ್ಮೆ ಕಾಡಿ ಮರೆಯಾಗುವ ಅವಮಾನ, ಅಭಿಮಾನ, ಕೋಪ-ತಾಪಗಳಿಗೆ ಅರ್ಥವೇ ಉಳಿಯುವುದಿಲ್ಲ. ಈ ಮಾನವೀಯ ಸಂಬಂಧಗಳು, ಪರಿವಾರ, ಗೆಳೆತನ, ಬಾಂಧವ್ಯ, ಪ್ರೀತಿ, ಪ್ರೇಮ ಯಾವುದಕ್ಕೂ ಅಸ್ತಿತ್ವವೇ ಇಲ್ಲ!!


ಯಾರು ಏನೆಂದರೂ ನೆನಪುಗಳ ಬಗೆಯೇ ವಿಶಿಷ್ಟವಾದದ್ದು... ಮುಂಜಾನೆಯ ನೇಸರನಂತೆ ನಿಧಾನವಾಗಿ ಮೇಲಕ್ಕೆದ್ದರೂ ಮಧ್ಯಾಹ್ನದ ಸೂರ್ಯನಂತೆ ಬೆವರಿಳಿಸಿ ಸಂಜೆಯ ರವಿಯಂತೆ ಮರೆಯಾದರೂ, ಬೆಳಗಾಗುತ್ತಲೇ ಮತ್ತೆ ಮನದ ಮೂಲೆಯಲ್ಲಿ ಬೆಳಗತೊಡಗುತ್ತದೆ...


ತಿರು-ತಿರುಗಿ ಸೆರಗ ಹರಡಿ ಕಾಡುವ ನೆನಪುಗಳಲ್ಲಿ ಮೊದಲಾಗುವುದು ಬಾಲ್ಯದ ನೆನಪುಗಳು... ಚಿಣ್ಣಿದಾಂಡು, ಮರಕೋತಿ, ಲಗೋರಿ, ಕುಂಟೆ ಬಿಲ್ಲೆ, ಚೆನ್ನೆಮಣೆ ಹೀಗೆ ಆಟಗಳ ಹೆಸರೇ ಎದೆಯನರಳಿಸುವಾಗ ಆ ಆಟಗಳನ್ನು ಆಡುವವಋಉ ಕಣ್ಣಿಗೆ ಬಿದ್ದಾಗ ನಗುವರಳಿಸದಿರುತ್ತಾರೆಯೇ?!



ಬೆಳದಿಂಗಳ ಮಡಿಲಲ್ಲಿ ಅಮ್ಮನ ಕೈ ತುತ್ತು ಉಂಡು, ಸರದಿಯಲ್ಲಿ ಅಜ್ಜ-ಅಜ್ಜಿಯರ ಬಾಯಿಯಿಂದ ಕಥೆ ಕೇಳುವ ಖುಷಿ ಇನ್ನೆಲ್ಲಿ ಸಿಗುತ್ತದೆ?!



ಅಣ್ಣನ ರೇಗಾಟಕ್ಕೆ ಅತ್ತು, ಚಿಕ್ಕಪ್ಪನ ತೋಳಲ್ಲಿ ತೂಗಿ, ಮಾವನ ಮುಂಗೋಪಕ್ಕೆ ಹೆದರುತ್ತಿದ್ದ ಎಳೆ ಮನಸಿಗೆ ಬೇರೇನು ಸಾಟಿ?!

ಕದ್ದ ಮಾವಿನ ಮಿಡಿಯನು ಉಪ್ಪು ಹಾಕಿ ಹಂಚಿ ತಿನ್ನುವ ಔದಾರ್ಯ, ಆಟದಲ್ಲಿ ಬಿದ್ದು ಮೊಣಕಾಲು ತರಚಿದರೂ ಏನಾಗಿಲ್ಲವೆಂಬ ಜಿದ್ದು, ಕಾಡು-ಗುಡ್ಡೆಯನೆಲ್ಲ ಭಯದ ನೆರಳೇ ಸೋಕದಂತೆ ಸುತ್ತುವ ವೀರತೆ ಎಲ್ಲ ಅಡಗಿಲ್ಲವೇ 'ಬಾಲ್ಯ'ವೆಂಬ ಎರಡಕ್ಷರದ ನೂರು ಭಾವಗಳ ಎಡೆಯಲ್ಲಿ?!




ಹೀಗೆ, ನೆನಪುಗಳಿಗೆ ದಿಬ್ಬಣ ಹೊರಡಲು ಮುಹೂರ್ತ, ಅಲಂಕಾರಗಳ ಶೋಕಿ ಬೇಕಾಗಿಲ್ಲ... ಸ್ವಲ್ಪ ಸಮಯ, ಹಳೆಯ ವಿಷಯ, ಎದೆ ತುಂಬಾ ಪ್ರೀತಿ ಇಷ್ಟಿದ್ದರೆ ಸಾಕು. ಇನ್ನಷ್ಟು ಸೇರಿಸುವ ಆಸೆಯಿದೆಯೆಂದರೆ ಮಳೆ ಸಂಜೆ, ಬಿಸಿ ಕಾಫಿಯ ಸೇರಿಸಿಕೊಂಡು ಮತ್ತೊಮ್ಮೆ ನೆನಪಿನ ದಿಬ್ಬಣವನೇರಬಹುದು.....


-ಪಲ್ಲವಿ ಕಬ್ಬಿನಹಿತ್ಲು


Comments

Post a Comment

Popular posts from this blog

THE LONGING…

One-sided!

Winter Inside!