ಮರು(ರ)ಳು ಪ್ರೇಮಿ


ಕಿನಾರೆಗೆ ಮುತ್ತನಿಡುತ್ತವೆ ಅಲೆಗಳು,

ಸೋಲನೊಪ್ಪದೆ ಮತ್ತೆ-ಮತ್ತೆ...

ಮರಳನು ಚುಂಬಿಸುವ ಮರುಳಿಗೆ

ಮನಸೋಲದಿರಬಹುದೇ ಕಂಗಳು?!



ಲೆಕ್ಕವಿರದಷ್ಟು ಬದುಕುಗಳಡಗಿವೆ ಸಾಗರದಲಿ;

ಆದರೂ, ಉಸಿರಿಲ್ಲದ ಉಸುಕಿನ ಮೇಲೆ

ಅದೆಷ್ಟು ಮೋಹವದಕೆ?!

ತಾನಲ್ಲದೆ ಬೇರಾರೂ ಮರಳ ಮೇಲೆ 

ಗುರುತುಳಿಸಬಾರದೆಂದು,

ಮೂಡಿದ ಗುರುತುಗಳನೆಲ್ಲಾ ಅಳಿಸುವುದನ್ನೂ

ಮರೆಯದು ಮರ(ರು)ಳು ಪ್ರೇಮಿ!



ಜೋಡಿ ಹೆಜ್ಜೆಗಳ, ಅಲ್ಲಲ್ಲಿ ಬರೆಯುವ ಎದೆಯ ಚಿತ್ತಾರಗಳ

ಮೇಲಂತೂ ಇನ್ನಿರದ ಮುನಿಸು;

ತನಗಿಲ್ಲದ ಭಾಗ್ಯದ ಮೇಲೆ ಹೊಟ್ಟೆಕಿಚ್ಚಿರಬೇಕು!!

ಚಂದಿರನಿರಲು ಬೆಳದಿಂಗಳ ಬೆಳಕಲ್ಲಿ;

ಶಶಿಯಿರದಿರಲು ಅವನು ಚೆಲ್ಲುವ ಪ್ರೀತಿಯ ನೆನಪಲ್ಲಿ;

ಭೋರ್ಗರೆದು ಮೈಮೇಲೆ ಬಿದ್ದರೂ,

ಕಿನಾರೆಯು ಕಿನಾರೆಗೇ* ತಳ್ಳುವುದು ಲಹರಿಗಳನು,

ಕಲ್ಲು ಹೃದಯದ ಇನಿಯನಂತೆ!!

ಆದರೇನು, ಸಾಗರದ ಅಲೆಗಳಿಗೆ ಮರುಳು ಪ್ರೀತಿ,

ಕೊರಳ ತುಂಬಾ ಕರೆ-ಕರೆದು, ಚೂರು-ಚೂರೇ

ಮರಳನು ತನ್ನೊಳಗೆ ಸೆಳೆದುಕೊಳ್ಳುತ್ತವೆ,

ಎಂದಾದರೊಮ್ಮೆ ಈ ಅಂತರವೇ 

ಅಳಿಸಿಹೋಗಬಹುದೆಂಬ ಆಸೆಯಲಿ...



[*ಕಿನಾರೆ=ಮೂಲೆ]

-ಪಲ್ಲವಿ ಕಬ್ಬಿನಹಿತ್ಲು



Comments

Post a Comment

Popular posts from this blog

THE LONGING…

One-sided!

Winter Inside!