(ಅ)ಪರಿಪೂರ್ಣತೆಯ ಸುಖ



 ಬದುಕಿನಲ್ಲಿ ಅರ್ಧವಾಗಿ ಉಳಿಯುವುದೇ ಖುಷಿಯಲ್ಲವೆ? ಅರೆರೆ, ಇದೇನು ಹುಚ್ಚು ಕಲ್ಪನೆ ಎಂದೆನಿಸಿದರೆ ತಪ್ಪಿಲ್ಲ... ತಪ್ಪು-ಒಪ್ಪುಗಳ ನಡುವೆಯೇ ಬದುಕಿನ ಸೊಗಡು ಅಡಗಿರುವುದು, ಆದರೆ, ಪರಿಪೂರ್ಣತೆಯಲ್ಲಿ ತಪ್ಪುಗಳಿಗೆ ಎಡೆಯಿಲ್ಲ, ಅಲ್ಲಿ ಎಲ್ಲವೂ, ಎಲ್ಲರೂ ಸರಿಯೇ; ಸಂಪೂರ್ಣವೇ! ಆದರೆ ಅರ್ಧವಾಗಿ, ಅಪರಿಪೂರ್ಣ, ಅಪಕ್ವವಾಗಿ ಉಳಿಯುವುದರಲ್ಲಿ ಇವೆಲ್ಲಕ್ಕೂ ಅವಕಾಶವಿದೆ... ಅನುಭವಗಳ ಪಾಠಕ್ಕೆ ಬೆಲೆಯಿದೆ, ಅಲ್ಲಲ್ಲಿ ಎಡೆವಿದರೂ ನಡೆಯುವ ನಿಲುವಿದೆ...



ಪರಿಪೂರ್ಣರಾಗುವ ಕನಸು ಕಾಣುವುದಕ್ಕೂ ಅಪೂರ್ಣರಾಗುವ ಅಗತ್ಯತೆಯಿದೆ. ಸೋಲಿನಿಂದ ಕಲಿತು ಗೆದ್ದವನಿಗೆ ಎಂದಿದ್ದರೂ ಸೋಲಿನ ಬಳಿಕದ ಹಾದಿಯ ಮೇಲೆ ಅಪಾರ ಪ್ರೀತಿ, ಬಾಂಧವ್ಯಗಳಿರುತ್ತದೆ. ಆ ನಂಟು ಗೆಲುವಿನ ಸವಿಗಿಂತಲೂ ದಟ್ಟವಾಗಿರುತ್ತದೆ. ಹಾಗೆಯೇ ಅರ್ಧ ತಿಳಿದುಕೊಂಡು ಪೂರ್ತಿಯನ್ನು ಹುಡುಕುವಾಗಿನ ಕುತೂಹಲ, ಉತ್ಸಾಹ, ಅಲ್ಲಡಗಿರುವ ಗಾಬರಿ, ಆತುರತೆ-ಕಾತುರತೆ ಎಲ್ಲವೂ ಚಂದ... ಅದು ಗೆಲುವಿ(ಅರಿವಿ)ನ ಕ್ಷಣದಲ್ಲೊಮ್ಮೆ ಕಾಡಿ ಹೋದಾಗ ಎದೆ ತುಂಬಿ ಬಂದು ಕಣ್ಣು ತುಂಬಿಕೊಳ್ಳುತ್ತದೆ. 

ಇದೇಕೆ ಹೀಗೆ? ಎಂದರೆ ಇರುವುದೆಲ್ಲವನು ಬಿಟ್ಟು ಇಲ್ಲದುದರೆಡೆಗೆ ತುಡಿವ ಮನಕ್ಕೇನನ್ನೋಣ! ಹುಡುಕಿದ್ದು ಸಿಕ್ಕಿತು ಎನ್ನುವಾಗ ಇನ್ನೊಂದು ಹುಡುಕಾಟಕ್ಕೆ ವಿಷಯವನ್ನು ಮನಸ್ಸು ಹುಡುಕಿಕೊಳ್ಳುತ್ತದೆ, ಅದಕ್ಕೂ ಪೂರ್ಣವಾಗುವುದಕ್ಕೆ ಇಷ್ಟವಿಲ್ಲ! ಅಜ್ಞಾನದ ಖಾಲಿತನದಲ್ಲಿ ಅದು ವಿಹರಿಸುವ ಜಾಗವನ್ನು ಹುಡುಕಿಕೊಳ್ಳುತ್ತದೆ ಎಂದರೂ ನಿಜ, ಅಥವಾ ತಿಳಿದಿರುವುದಕ್ಕಿಂತ ತುಸು ಹೆಚ್ಚನ್ನು ತಿಳಿದುಕೊಳ್ಳುವ ತುಡಿತ ನಮ್ಮೊಳಗಿನ ಖಾಲಿತನವನ್ನು ಹುಡುಕಿಬಿಡುತ್ತದೆ ಅಂದರೂ ಸತ್ಯ. ಈ ಖಾಲಿ ಜಾಗದಲ್ಲಿ ಏನನ್ನೂ ತುಂಬಬಹುದು, ಹೊಸ ಬಣ್ಣಗಳ ರಂಗನ್ನು,  ಹಳತರ ಕಹಿಯನ್ನು- ಸಿಹಿಯನ್ನು, ನಾಳೆಯ ಭಯವನ್ನು-ಅಲ್ಲಿರುವ ಅಚ್ಚರಿಯನ್ನು ಏನನ್ನೂ ತುಂಬಿಕೊಳ್ಳಬಹುದು!!



ಸಣ್ಣವಳಿದ್ದಾಗ ತುಂತುರುವಿನಲ್ಲಿ ಕಥೆಯೊಂದನ್ನು ಓದಿದ್ದೆ; ಅದು ಹೆಚ್ಚೂ-ಕಡಿಮೆ ಹೀಗೆಯೇ ಇದ್ದಿರಬೇಕು: ಒಬ್ಬಾತ ನಗರದಿಂದ ತುಸು ದೂರದಲ್ಲಿ ಅಂದರೆ ನಗರದ ಬಾಗಿಲಿನ ಆಸು-ಪಾಸಿನಲ್ಲಿ ಒಂದು "ಪಂಚತಾರ" ಎಂಬ ಹೋಟೇಲನ್ನು ಇಟ್ಟುಕೊಂಡಿದ್ದ. ಆತನ ಹೋಟೇಲಿನಲ್ಲಿ ಶುಚಿಯಾಗಿ, ರುಚಿಯಾಗಿ ಸ್ವಾದಿಷ್ಟ ಖಾದ್ಯಗಳಿದ್ದರೂ ಅವನ ನಿರೀಕ್ಷೆಯಷ್ಟು ಬೇಡಿಕೆ ಇರಲಿಲ್ಲ. ಒಮ್ಮೆ ಅವನ ಹೋಟೇಲಿಗೆ ಬಂದಿದ್ದ ಪ್ರವಾಸಿಯೋರ್ವ ಆತನ ಹೋಟೇಲಿನ ಸ್ವಾದಿಷ್ಟ ಭೋಜನವನ್ನು ಉಂಡು ಆತನಲ್ಲಿ ಕಡಿಮೆ ಗ್ರಾಹಕರ ಬಗೆಗೆ ಅಚ್ಚರಿಯನ್ನು ವ್ಯಕ್ತಪಡಿಸಿದ. ಆಗ ಹೋಟೇಲಿನ ಮಾಲಿಕನು ಸಹ ತನ್ನ ಅಳಲನ್ನು ತೋಡಿಕೊಂಡ. ಪ್ರವಾಸಿಗ ಒಂದಷ್ಟು ಹೊತ್ತು ಯೋಚಿಸಿ ಹೇಳಿದ, "ನೀನು ನಿನ್ನ ಹೋಟೇಲಿನ ಹೆಸರಿನ ಬೋರ್ಡ್ ನ ಕೆಳಗೆ ನಾಲ್ಕು ನಕ್ಷತ್ರಗಳನ್ನು ತೂಗುಹಾಕು" ಎಂದು. ಮಾಲಿಕನಿಗೋ ವಿಚಿತ್ರ ಎನಿಸಿತು, ಆದರೂ ಆತ ಇದನ್ನೂ ಮಾಡಿ ನೋಡೋಣ ಎಂದುಕೊಂಡು ನಾಲ್ಕು ನಕ್ಷತ್ರಗಳನ್ನು ತೂಗು ಹಾಕಿದ. ಮರುದಿನ ಎಂದಿಗಿಂತ ಹೆಚ್ಚಿನ ಗ್ರಾಹಕರಿದ್ದರು ಆತನ ಹೋಟೇಲಿನಲ್ಲಿ... ಬಂದಿದ್ದ ಪ್ರವಾಸಿ ಜ್ಯೋತಿಷಿ ಎಂದೆಲ್ಲಾ ನೀವು ಭಾವಿಸಿದರೆ ಅದು ತಪ್ಪು... ಅದರ ಹಿಂದಿರುವ ರಹಸ್ಯ ಇಷ್ಟೇ, ಹೆಚ್ಚಿನ ಗ್ರಾಹಕರು ಉಂಡು ಹೋಗುವಾಗ ಮಾಲೀಕನಿಗೆ ಬಿದ್ದು ಹೋಗಿರುವ 'ಒಂದು' ನಕ್ಷತ್ರದ ಬಗೆಗೆ ತಿಳಿಸಿಹೋಗಿದ್ದರು! ಪಂಚತಾರದ ಕೆಳಗಿದ್ದ ನಾಲ್ಕು ತಾರೆಗಳು, ಮಾಲಿಕನ ಭವಿಷ್ಯವನ್ನು ಬದಲಿಸಿದ್ದವು!

ಹೀಗೆ ಅಪೂರ್ಣತೆ ಆಕರ್ಷಕವಾದದ್ದು ಜನರಿಗೆ... ಈ ಆಕರ್ಷಣೆಯನ್ನು ಅರಿತ 'ಸೆಲೆಬ್'ಗಳು ಅದರ ಪೂರ್ಣ ಉಪಯೋಗ ಪಡೆಯುತ್ತಿರುವುದಕ್ಕೆ ಉದಾಹರಣೆ ನಾನು ಕೊಡಬೇಕಿಲ್ಲ!! 



ನಾನು ಅಪೂರ್ಣತೆಯಲ್ಲಿ, ಅಜ್ಞಾನದಲ್ಲಿ ಸುಖವಿದೆ ಎಂದಾಕ್ಷಣ ತಿಳಿದುಕೊಳ್ಳುವುದು, ಸಂಪೂರ್ಣವಾಗುವ ಬಯಕೆ ತಪ್ಪು ಅಥವಾ ಹೀಗಿರುವ ಹಂಬಲದವರು ಮೂಢರು, ಬದುಕಿನ ಸವಿಯನ್ನು ತಿಳಿಯದವರು ಎನ್ನುತ್ತಿಲ್ಲ. ಏಕೆಂದರೆ ಈ ಸುಖವನ್ನು ಅನುಭವಿಸುವವರು ಅವರೇ! ಹೇಗೆಂದು ಕೇಳಿದರೆ, ಅಜ್ಞಾನದ ಬಾವಿಯೊಳಗೆ ಉಳಿಯುವವರಿಗೆ ಅದೇ ಬದುಕು, ಅಲ್ಲಿ ಸರಿ-ತಪ್ಪುಗಳಿಗೆ ಬೇಧವಿಲ್ಲ... 


ಇದ್ದ ಹಾಗೆಯೇ ಉಳಿದವರಿಗೆ ಹಿಂದೆ, ಇಂದು, ಮುಂದು ಎಲ್ಲಾ ಒಂದೇ. ಆದರೆ ತಾನು ಬಾವಿಯೊಳಗಿದ್ದೇನೆ ಅದರಿಂದ ಹೊರಬರಬೇಕು ಎಂಬ ಅರಿವಿರುವವರು ಅಲ್ಲಿಂದ ಹೊರ ಬರುವ ಪ್ರಯತ್ನವನ್ನು ಮಾಡುತ್ತಾರೆ, ಆ ಪ್ರಯತ್ನಗಳಲ್ಲಿ  ಸರಿ-ತಪ್ಪುಗಳನ್ನು ಕಂಡುಕೊಳ್ಳುತ್ತಾರೆ, ಅನುಭವಗಳಿಂದ ಕಲಿತು ಬಾವಿಯಿಂದ ಹೊರ ಬೀಳುತ್ತಾರೆ. ಇಲ್ಲಿಯವರೆಗೆ ಬಾವಿಯಿಂದ ಹೊರಬೀಳುವುದೇ ಪರಿಪೂರ್ಣತೆ ಎಂದುಕೊಂಡವರ ಮುಂದೆ ಇನ್ನಷ್ಟು ವಿಶಾಲವಾದ ಜಗತ್ತು ತೆರೆದುಕೊಳ್ಳುತ್ತದೆ, ಅಲ್ಲಿ ಮತ್ತೊಮ್ಮೆ ಅಪರಿಪೂರ್ಣರಾಗುತ್ತಾರೆ; ಪರಿಪೂರ್ಣತೆಯ ಹಾದಿಯಲ್ಲಿ ಮತ್ತೆ ಹೆಜ್ಜೆ ಹಾಕುತ್ತಾರೆ...

                                                                                                                    -ಪಲ್ಲವಿ ಕಬ್ಬಿನಹಿತ್ಲು


Comments

Post a Comment

Popular posts from this blog

THE LONGING…

One-sided!

Winter Inside!