ಹುಚ್ಚುಕೋಡಿ ಮನಸು, ಅದು ಹದಿನಾರರ ವಯಸು.... (ನೆನಪುಗಳಿವೆ ಹಲವು)

 


"ಹುಚ್ಚುಕೋಡಿ ಮನಸು, ಅದು ಹದಿನಾರರ ವಯಸು"

ಎಷ್ಟು ವಾಸ್ತವವಾದ ಸಾಲುಗಳು... ಆ ವಯಸ್ಸಿನಲ್ಲಿ ಭಾವನೆಗಳು, ಗೊಂದಲಗಳು ಬೆಳೆದಂತೆ ಬದಲಾಗುತ್ತಲೇ ಇರುತ್ತವೆ... ಒಂದು ಕ್ಷಣದ ಭಾವ ಇನ್ನೊಂದು ಕ್ಷಣದಲ್ಲಿ ಸುಳ್ಳೆನಿಸುತ್ತದೆ. ಆ ಬೆಳವಣಿಗೆಯ ವಯಸ್ಸೇ ಹಾಗಿರಬೇಕು, ನಾನಂದದ್ದೇ ಸರಿ, ಅದಕ್ಕಿಂತ ಹೊರಗಿನ ಜಗತ್ತೇ ಸುಳ್ಳು ಎಂಬ ಭ್ರಮೆಯೊಳಗಿನ ಬದುಕು! ಹೊತ್ತು ಸರಿದ ಹಾಗೆ ಭ್ರಮೆಯ ಮಂಜು ಕರಗಿ ಅರಿವಿನ ಕಿರಣಗಳು ಕಾಣಿಸತೊಡಗುತ್ತವೆ. ಒಂದಷ್ಟು ವಿಚಾರಗಳು ಬಹಳಷ್ಟು ಪ್ರಭಾವಶಾಲಿಯಾಗಿ ನಮ್ಮ ಬದುಕನ್ನು ಕಟ್ಟಿಕೊಳ್ಳುವಲ್ಲಿಯೂ ಸಹ ತನ್ನ ಕೊಡುಗೆಯನ್ನು ನೀಡುತ್ತದೆ.

ನಾನು ಹೈಸ್ಕೂಲಿನಲ್ಲಿದ್ದಾಗ ದೇವರು ಇದ್ದಾನೋ-ಇಲ್ಲವೋ ಎಂದು ಚರ್ಚೆಯ ಹೆಸರಲ್ಲಿ ವಾಗ್ವಾದಗಳಾಗುತಿದ್ದದ್ದು ಈಗ ತಮಾಷೆ ಎನಿಸುವುದರಲ್ಲಿ ಅಚ್ಚರಿಯಿಲ್ಲ, ಆಗ ನನ್ನ ವಿಚಾರಗಳನ್ನು ಎಲ್ಲರೂ ಒಪ್ಪಬೇಕೆಂಬ ಮಹದಾಶೆಯ ಎದುರಿಗೆ ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯೇ ನನ್ನನ್ನು ಕಾಡುತ್ತಿರಲಿಲ್ಲ,  ನನಗೆ ಆ ಹೊತ್ತಿಗೆ ಈ ವಿಚಾರದ (ವ್ಯಕ್ತಿಸ್ವಾತಂತ್ರ್ಯದ)  ಬಗ್ಗೆ ತಿಳಿದಿರಲಿಲ್ಲವೆಂಬುದು ಸಹ ನಿಜವೇ.

ಇದು ೨೦೧೫ರಲ್ಲಿ ಬರೆದಿದ್ದ ಕವನ,  ನನ್ನ ಈ ಬರವಣಿಗೆ ಬಾಲಿಶ ಎಂದೆನಿಸಿದರೂ ಸರಿಯೇ, ಆ ಹೊತ್ತಿಗೆ ಲೇಖನಿಯ ಅಲಗು ಜಗತ್ತಿನ ವಿಚಾರಗಳನ್ನೆಲ್ಲಾ ಬುಡಮೇಲು ಮಾಡಿಬಿಡುತ್ತದೆ ಎಂಬ ಭಂಢ ಧೈರ್ಯವೂ ಜೊತೆಗಿತ್ತು, ಮನಸಿಗೆ ತೋಚಿದ ವಿಚಾರ, ತೋಚಿದ ರೀತಿಯಲ್ಲಿ ಗೀಚಿದ್ದು... ಇದರ ಜೊತೆಗೊಂದು ಸಂಗತಿಯೂ ಇದೆ, ಆಗ ಕವನಕ್ಕೆ ಶೀರ್ಷಿಕೆಗಳನ್ನು ಕೊಡುವುದೇ ನನ್ನ ಬುದ್ಧಿಗೆ ತಿಳಿಯದ ವಿಚಾರ, ಒಂದಷ್ಟು ಸಾಲುಗಳನ್ನು ಬರೆದು ನಮ್ಮ ಕನ್ನಡ ಸರ್ (ರಾಧಾಕೃಷ್ಣ ಸರ್) ಗೆ ತೋರಿಸಿ ಕವನಕ್ಕೆ ನಾಮಕರಣ ಶಾಸ್ತ್ರವಾಗುತ್ತಿದ್ದದ್ದು. ಆ ಹುಚ್ಚುತನವನ್ನು ಮನ್ನಿಸಿ ನನ್ನ ತಲೆಬುಡವಿಲ್ಲದ ಬರಹಗಳಿಗೆ ತಲೆಬರಹ ಕೊಟ್ಟು ಅವರು ಪ್ರೋತ್ಸಾಹಿಸುತ್ತಿದ್ದ ರೀತಿಗೆ ನಾನು ಸದಾ ಋಣಿ. ಈ ಕವನಕ್ಕೂ ಅವರೇ ಹೆಸರಿಟ್ಟದ್ದು. ಇದನ್ನು ಹಂಚಿಕೊಳ್ಳಬೇಕೆನಿಸಿದ್ದಕ್ಕೆ ಇನ್ನೊಂದು ಕಾರಣವೂ ಇದೆ, ಹೆಚ್ಚಾಗಿ ಪ್ರಾರಂಭಗಳೇ ವಿಶೇಷವಾದ ಸ್ಪೂರ್ತಿಗೆ ಕಾರಣವಾಗುತ್ತದೆ, ಇಂದು ಮತ್ತೊಮ್ಮೆ ಈ ಹಾದಿಯ ಪಯಣದ ಮೊದಲ ಕೆಲವು ಹೆಜ್ಜೆಗಳು ಮತ್ತಿನದ್ದಕ್ಕಿಂತ ಹೆಚ್ಚು ಆಪ್ಯಾಯಮಾನವಾಗಿ ತೋರುತ್ತದೆ, ಅಲ್ಲಿ ಬಹಳಷ್ಟು ಅಜ್ಞಾನವಿದೆ, ಬಹಳಷ್ಟು ಮುಗ್ಧತೆಯಿದೆ, ಕೆಲವಷ್ಟೇ ವಿಚಾರಗಳನ್ನು ಬಗೆ-ಬಗೆಯಾಗಿ ನೋಡುವ ದೃಷ್ಟಿಕೋನವಿದೆ... ಆಗಾಗ ಹಿಂದಿರುಗಿ ನೋಡುತಿದ್ದರೆ ಸಾಗುವ ದಾರಿ ಸರಿಯಾಗಿಯೇ ಇರುತ್ತದೆಂಬ ನಂಬಿಕೆ.


ಓ ಮನುಜ




ಅಂಜುವೆಯಾ ಮನುಜ

ಸಾವಿಗೆ,

ನಿನ್ನದಲ್ಲವಲ್ಲ ಈ ಜೀವ

ಕೊಟ್ಟವನೇ ಅದರ ಕಾವ

ಮುಕ್ತಿಗಾಗಿ ಕೊಡುವ ಸಾವ


ದುಃಖಿಸುವೆಯಾ ಮನುಜ

ನಷ್ಟಕ್ಕಾಗಿ,

ಕಳೆದುಹೋದುದು ನಿನ್ನದೆಂದೇ?

ನಿನ್ನಲ್ಲಿದ್ದರೂ ಅದು ಅವನದ್ದೇ

ನಿನ್ನಲ್ಲಿದ್ದರೂ ಅವನಲ್ಲಿದ್ದರೂ ಅದು ಒಂದೇ


ಶೋಷಿಸುವೆಯಾ ಮನುಜ

ದುರ್ಬಲರ,

ನಿನಗೆಲ್ಲಿಯ ಹಕ್ಕು

ಅದು ನಿನ್ನ ಅಹಂಭಾವದ ಸೊಕ್ಕು

ಬದುಕು, ಅವನ ಮನ ಹೊಕ್ಕು


ಹುಡುಕುವೆಯಾ ಮನುಜ 

ಅವನಿಗಾಗಿ,

ಹಾಗಾದರೆ ಅವನ ಪಡೆಯಲಾರೆ

ಶೋಧಿಸುವುದರ ಮರೆ

ಇಣುಕು ನಿನ್ನೊಳಗೇ ಅರಿಯಲಾರೆಯೇನು?


ತೊರೆಯುವೆಯಾ ಮನುಜ

ಪರಿವಾರವ,

ಜಪ-ತಪಕೆಂದು ತೆರಳಿ ಕಾಡಿಗೆ

ಹಿಂದಿನಿಂದ ನಡೆದು ಬಂದ ರೂಢಿಗೆ

ತಲೆಬಾಗಿ, ತಡಕಾಡುವೆಯಾ ಮುಕ್ತಿಗೆ?


ಹಲವು ನಾಮಗಳ ನೀಡುವೆಯಾ ಮನುಜ

ಅವನಿಗೆ,

ನೂರಾರು ಹೆಸರು ಏಕಶಕ್ತಿ

ನಿನ್ನೊಳಿರಲಿ ಅವನ ಭಕ್ತಿ,

ಅದುವೇ ಅವನನೊಲಿಸುವ ಯುಕ್ತಿ


ಕಟ್ಟುವೆಯಾ ಮನುಜ

ಗೋಡೆಗಳ,

ತಾ ಮೇಲು ನೀ ಕೀಳು

ಬಿಡು ಈ ಎಲ್ಲ ಗೋಳು

ಅವನಾವ ಜಾತಿ ಹೇಳು?


ಬಯಸುವೆಯಾ ಮನುಜ

ಅವನ ಸಂಗ,

ನಿನ್ನೊಳಗೇ ಹುಡುಕು,

ಭಾವನೆಗಳ ತಡಕು,

ಅಲ್ಲಿ ಅವನ ಇಣುಕು


ಪಡೆಯಲಿಲ್ಲವೇ ನೀನವನನು?

ಅವನೇ ನೀನು, ನೀನೇ ಅವನು

ಪಡೆ ಅವನಂತರಂಗದಲಿ ಸ್ಥಾನವನು

ಮುಗಿಸು ಈ ಅನಂತದ ಹುಡುಕಾಟವನು...

-ಪಲ್ಲವಿ ಕಬ್ಬಿನಹಿತ್ಲು

Comments

  1. ಮೊದಲ ಪೀಠಿಕೆ ಇದೆಯಲ್ಲಾ.. .. ತುಂಬಾ funny ಆಗಿದೆ. ನನ್ನ ಆಲೋಚನೆಗಳು ಹಾಗೇಯೇ ಇದ್ದವು.
    ಓದಿ,ನನ್ನಲ್ಲೂ ಕಿರುನಗೆ ಮೂಡಿದ್ದು ಸುಳ್ಳಲ್ಲ 😁😁💐💐💐💐💐💐🤩

    ReplyDelete

Post a Comment

Popular posts from this blog

THE LONGING…

One-sided!

Winter Inside!