ಹೂ-ನ(ಡಿ)ಗೆ

 ಹೂ-ನ(ಡಿ)ಗೆ


ನಡೆದಾಡುತ್ತಿರುತ್ತೇನೆ ಆಗಾಗ

ಹೂದೋಟದ ನಡುವೆ,

ಹೂಗಳು, ಕಂಡಾಗಲೆಲ್ಲಾ ನಗುತಿರುತ್ತವೆ

ನಾನು ನಗದಿದ್ದರೂ ಸಹ!!

ನನ್ನ ಕಂಡಾಗ ಆತ್ಮೀಯತೆ ತೋರುವುದೋ;

ಅಸಹಾಯಕತೆಯ ಹೊದೆದು ನಿಂತದ್ದಕ್ಕೆ ವ್ಯಂಗ್ಯವಾಡುವುದೋ;

ಎಲ್ಲಾ ಸರಿ ಹೋಗುತ್ತದೆಯೆಂದು ಭರವಸೆ ತುಂಬುವುದೋ,

ನನಗರಿವಿಲ್ಲ;

ಒಂದರ್ಥದಲ್ಲಿ ಅದರ ಪರಿವೆಯೂ ಇಲ್ಲ,

ಒಟ್ಟಿನಲ್ಲಿ ನಾನು ನಗದಿದ್ದರೂ

ಹೂಗಳು, ಕಂಡಾಗಲೆಲ್ಲಾ ನಗುತಿರುತ್ತವೆ...



ರವಿ ಕಿರಣಗಳ ಚುಂಬನಕ್ಕೆ ನಾಚಿ ಪರಿಮಳವಾದ ಕುಸುಮಗಳು,

ಅದೇ ಕಿರಣಗಳು ತಾಪವಾದದ್ದನ್ನೂ ಸಹಿಸಿಕೊಳ್ಳುತ್ತವೆ ಸದ್ದಿಲ್ಲದೆ!

ಮುಂಜಾವಿನಲ್ಲರಳಿ ದಿನದೊಡನೆ ಮರೆಯಾಗುವ ಕಹಿ ನುಂಗಿ

ದುಂಬಿಗಳಿಗೆಂದು ಮಧುವಿನ ಸಿಹಿಯನು ಹಂಚುತ್ತವೆ,



ಅದಕ್ಕೇ ಇರಬೇಕು, ನನ್ನ ಚೇತನ ಮುದುಡಿದಂತೆಲ್ಲಾ

ನಡೆದಾಡುತ್ತೇನೆ ನಗುವ ಹೂಗಳ ಹೂದೋಟದಲ್ಲಿ,

ಅವುಗಳೊಂದಿಗೆ ನಾನು ನಗುವಾಗುವವರೆಗೆ;

ಅವುಗಳೂ ನಗುತ್ತಲೇ ಇರುತ್ತವೆ, 

ನನಗೆ ನಗುವ ಪಾಠ ಕಲಿಸುವವರೆಗೆ....

ಇದು ಹೂ ನಗೆ ಕಲಿವ ನಡಿಗೆ!



-ಪಲ್ಲವಿ ಕಬ್ಬಿನಹಿತ್ಲು


Comments

Post a Comment

Popular posts from this blog

THE LONGING…

One-sided!

Winter Inside!