ಖಾಲಿಯಾಗೋ ಚಾಳಿ
ಖಾಲಿ ಮನಸಿನೊಳಗೆ ತುಂಬುತ್ತಾ ಹೋದೆ,
ಹೆಜ್ಜೆ ಹೆಜ್ಜೆಗೂ ಸಿಕ್ಕ ಪಾಠಗಳನೆಲ್ಲಾ
ಕಲಿತಷ್ಟು ಭಯ ಹೆಚ್ಚಾಯಿತು!!
ಎಡವಿ ಬೀಳಬಹುದೆಂಬ ಅರಿವಿನ ಇರುವು
ಅಲ್ಲಲ್ಲಿ ಹೆಜ್ಜೆ ಮುಂದಿಡುವುದಕ್ಕೂ ಬಿಡಲಿಲ್ಲ;
ನಗು ಮುಖದ ಹಿಂದಿರುವ ವ್ಯಂಗ್ಯದ ಸುಳಿವು
ರೆಕ್ಕೆ ಬಿಚ್ಚಿ ಹಾರಾಡುವಾಗ ಹೆದರಿಸದಿರಲಿಲ್ಲ;
ದಾರಿಯುದ್ದಕ್ಕೂ ಇರುವ ತಿರುವುಗಳು ಹಲವು,
ಅವುಗಳೆಡೆಯಲ್ಲಿ ಅವಿತಿರುವ ನೋವು,
ಆಗಬಹುದೆಂಬ ಅವಮಾನಗಳ ಕಾವು,
ಎಲ್ಲದಕ್ಕಿಂತ ಹೆಚ್ಚಾಗಿ ನರಳಿಸುವ ಹೊಟ್ಟೆಯ ಹಸಿವು,
ಇವೆಲ್ಲದರ ಇರುವಿನ ತಿಳಿವು,
ತುಂಬುತ್ತಿತ್ತು ಖಾಲಿ ಮನಸಿನಲಿ...
ನಡೆಯುತ್ತಿದ್ದಂತೆ ಮನಸು ಭಾರವಾಗುತ್ತಲೇ ಇತ್ತು;
ಎಳೆದೆಳೆದು ಹೆಜ್ಜೆ ಇಟ್ಟೆ ಮುಂದೆ
ಕಡೆಗೆ ಸೋತೇ ಹೋದೆ!
ಒಂದರೆಕ್ಷಣ ಅಲ್ಲೇ ನಿಂತೆ,
ಅಲ್ಲೇ ಉಳಿದೆ;
ಭಯದ ಕರಿ ನೆರಳಿನೊಳಗೆ,
ಅಲ್ಲೇ ಉಳಿದರೆ ಬೀಳಲಾರೆನೆಂಬ ಬಂಗಾರದ ಸರಳುಗಳೊಳಗೆ,
ಅಲ್ಲೇ ಉಳಿದೆ...
ಆದರೆ?!
ಮತ್ತೆ ಭಯವಾಯಿತು!
ನಿಂತಲ್ಲೇ ಕಳೆದುಹೋಗುತ್ತೇನೆಂದು,
ನಿಂತಲ್ಲೇ ಕೊಳೆತುಹೋಗುತ್ತೇನೆಂದು,
ನಿಂತಲ್ಲೇ ಅಳಿಸಿಹೋಗುತ್ತೇನೆಂದು,
ಮತ್ತೆ ಭಯವಾಯಿತು!
ಈಗ?!
ಹೆಜ್ಜೆ ಹಾಕಲೇಬೇಕಿದೆ ಮುಂದೆ,
ಉಳಿದು ಬೆಳೆಯುವುದಕ್ಕೆ,
ಬೆಳೆದು ಬೆಳಗುವುದಕ್ಕೆ!
ತುಂಬಿಕೊಂಡ ಪಾಠಗಳಲ್ಲಿರಬಹುದೇ ಉತ್ತರ?
ತಡಕಾಡಿದೆ ಒಂದೊಂದೇ ಪಾಠಗಳನು,
ಭಯವನೋಡಿಸುವ ಪಾಠಗಳು ಚೆಲ್ಲಿ ಹೋಗಿದ್ದವೇನೋ,
ಒಂದೂ ಸಿಗಲಿಲ್ಲ ನನ್ನ ಕೈಗೆ...
ಎಲ್ಲಾ ನಿರುಪಯುಕ್ತ ಎನಿಸಿತು,
ಒಂದೊಂದಾಗಿ ಅಳೆದೆ; ಎಸೆದೆ...
ಮನಸಿನಲಿ ತುಂಬಿಟ್ಟಿದ್ದ ವ್ಯರ್ಥ ಪಾಠಗಳೆಲ್ಲಾ ಬರಿದಾದವು;
ಮನಸು ಹಗುರಾಯಿತು,
ಹೆಜ್ಜೆ ಮುಂದಿಡುವುದು ಸರಳವೆನಿಸಿತು!
ಈಗ ಕಲಿತ ಖಾಲಿಯಾಗುವ ಪಾಠದಲಿ ಭಯವಿಲ್ಲ...
-ಪಲ್ಲವಿ ಕಬ್ಬಿನಹಿತ್ಲು
ಹೌದೂ ನಿಜ....🙏
ReplyDelete🙏🙏
Delete👌👌
ReplyDelete🙏🙏
Delete