ಕಳವಳವ ಕಳೆದುಕೊಂಡಾಗ...


ಕಳೆದುಕೊಳ್ಳುವ ಭಯ ನನಗಿಲ್ಲ,

ಕಳೆದುಕೊಳ್ಳುವಂತಹದ್ದೇನೂ

ನನ್ನಲ್ಲಿ ಉಳಿದಿಲ್ಲ!

ಕೆಸರಿನೊಳಗೇ ಬೆಳೆದಿದ್ದ ಪುಷ್ಪ ನಾನು;

ತೊಳೆದಾಗಿದೆ ಇಂದು,

ಮತ್ತೆ ಮೆತ್ತಿಕೊಳ್ಳೆನು

ನಿನ್ನೆ ನನ್ನ ಬಗಲಲ್ಲಿದ್ದ

ರಾಡಿಯ ಭಾರವನ್ನು!

ಹಾಗೆಂದು ಅಲ್ಲಿ ಕಳೆದ ಕಾಲವೆಲ್ಲ,

ಕೊಳೆಯಾಗಲಿಲ್ಲ ಬದುಕಿಗೆ;

ಕಳೆಯಾಗಿ ಬೆಳೆದಿದ್ದುದನೆಲ್ಲ

ಕಿತ್ತೆಸೆದಾಗ ಕಳೆದದ್ದೆಲ್ಲಾ

ಇಂದಿನ ಹೊಳಪಿನೊಳಗೆ, ‘ಕಳೆ’ಯಾಯಿತು...


 


ಈಗ ಜೀವನದ ಕೊಳದೊಳಗೆ


ಕೆಸರಿಲ್ಲವೆಂದರೆ ಸುಳ್ಳು;


ತಳದಲ್ಲಿ ಕುಳಿತುಕೊಂಡಿದೆ ಇನ್ನೂ ಒಂದಷ್ಟು.


ಬೇಸರವಿಲ್ಲ ನನಗೆ,


ಆಸೆ ಮೊಳೆದುಕೊಂಡಿದೆ ಈಗಷ್ಟೇ,


ಇದರೊಳಗಿಂದ ಮತ್ತೊಂದು ತಾವರೆ ಹುಟ್ಟಿಕೊಂಡೀತೆಂದು!

ಈ ಆಸೆಗಿಲ್ಲ ಕಳೆದುಕೊಳ್ಳುವ ಅರಿವು,

ಏನಿದ್ದರೂ ಬೆಳೆಯುವದರಲ್ಲಿ ಮಾತ್ರ ಇದಕೆ ಒಲವು...

ಬದುಕು ಕಳೆದುಕೊಳ್ಳುವ ಕಳವಳವ ಕಳೆದುಕೊಂಡಾಗ,

ಮನದೊಳಗೆ ಉಳಿದುಕೊಂಡಿತು,

ಉಳಿದು ಬೆಳೆಯುವ ಆಸೆ...




-ಪಲ್ಲವಿ ಕಬ್ಬಿನಹಿತ್ಲು

                        


Comments

Post a Comment

Popular posts from this blog

THE LONGING…

One-sided!

Winter Inside!