ಕಿಸೆ ತುಂಬುವ ಕನಸುಗಳು



ನನ್ನ ಖಾಲಿ ಕಿಸೆಗಳಲ್ಲಿ ಆಗಾಗ ತುಂಬುತ್ತೇನೆ
ಒಂದಷ್ಟು ನಾಣ್ಯಗಳ ಜೊತೆಗೆ,
ಬಣ್ಣದ-ಬೆಳಕಿನ ಬದುಕಿನ ಕನಸುಗಳನು...
ಅವು ಹರಿದ ಕಿಸೆಯಲಿರುವ ಸೆರೆಯಿಂದ
ಹನಿ-ಹನಿಯಾಗಿ ಸೋರಿಕೊಳ್ಳುತ್ತವೆ,
ಚೂರು-ಪಾರು ಗಾಳಿಯಲಿ ಕರಗಿಬಿಡುತ್ತವೆ;
ನಾಣ್ಯಗಳ ತೂಕದಡಿಯಲಿ ಹೊಸಕಿ ಹೋಗುತ್ತವೆ!!
ಅಲ್ಲದಿದ್ದರೇನು?!
ನೋಟು ತುಂಬುವ ಕಿಸೆಯಾದರೆ,
ಸೋರುವ ಸೆರೆಯಿಲ್ಲ;
ತುಳಿದುಬಿಡುವ ಭಾರವಿಲ್ಲ!!
ಬದಲಾಗಿ ಹಗುರ ನೋಟುಗಳು ರೆಕ್ಕೆಗಳಾಗುವವು;
ನಾಣ್ಯಗಳ ಹಾಗೆ ಕಡಿವಾಣ ಹಾಕಲಾರವು,
ಎತ್ತರೆತ್ತರಕ್ಕೆ ಹಾರುವುದಕ್ಕೆ; ಏರುವುದಕ್ಕೆ!!


ಕಿಸೆಯಲಿರುವುದು ಬರೀ ನಾಣ್ಯಗಳೆಂದು ಅತ್ತೆನೆಂದರೆ,
ನನ್ನೆದೆಯ ನೋವಿನ ಬಿಸಿ
ಅವುಗಳಿಗೆ ಗರಿ-ಗರಿಯಾಗುವುದನು ಕಲಿಸಬಲ್ಲುದೇ?!
ಕಣ್ಣೀರ ಬಿಂದುಗಳು ಅವುಗಳೊಳಗನ್ನು ತೋಯಿಸಬಲ್ಲವೇ?!
ಆ ಕಾವು ಸುಡುವುದು ಕಿಸೆಗೆ ತುಂಬಿದ್ದ ಕನಸುಗಳನ್ನಷ್ಟೇ!!
ಆ ಕನಸುಗಳನು ತುಂಬಿದ ಕೈಗಳ ಹಿಡಿದ ಮನಸುಗಳಷ್ಟೇ!!
ಅರಿವಿನ ಪರಿಧಿಯನು ನಿಲುಕಿ,
ಅಸಹಾಯಕತೆಯ ಇನ್ನಷ್ಟು ಕಲಕುವ ನಿಜವೆಂದರೆ,
ಆ ನಾಣ್ಯಗಳನು ಕಳೆದುಕೊಂಡರೆ ಕಿಸೆ ಬರಿದಾಗುತ್ತದೆ;
ನಂತರ ಕನಸುಗಳೂ ಕಿಸೆಗಿಳಿಯವು!!


ಸೋರಿ-ಕರಗಿ ಉಳಿದು ನಾಣ್ಯಗಳಿಗಂಟಿದ
 ಕನ‌ಸುಗಳು ಕಿಸೆಯನು ತುಂಬುತ್ತವೆ!!
-ಪಲ್ಲವಿ ಕಬ್ಬಿನಹಿತ್ಲು

Comments

Post a Comment

Popular posts from this blog

THE LONGING…

One-sided!

Winter Inside!