ತಪ್ಪು-ಒಪ್ಪುಗಳ ಕಪ್ಪು ಹಂಚುವ ಮುನ್ನ...




"ನೀನು ಗುಡ್ ಗರ್ಲ್ ಅಲ್ವಾ ಪುಟ್ಟಿ, ಒಳ್ಳೆ ಮಾರ್ಕ್ಸ್ ತಗೋಬೇಕು"

"ಏಯ್ ಪುಟ್ಟ, ಯಾಕೋ ಹುಡುಗಿಯರ ತರ ಅಳ್ತಾ ಇದ್ದೀಯ? ಹುಡುಗರು ಹಾಗೆಲ್ಲ ಅಳೋದಿಲ್ಲ"




ಹೀಗೆ ಇದು ಸರಿ, ಇದು ತಪ್ಪು ಎಂದು ಎಲ್ಲಾ ಕೆಲಸಗಳನ್ನು ವಿಶ್ಲೇಷಿಸಿ ವಿಂಗಡಿಸುವ ಮನೋಧರ್ಮ ಎಳವೆಯೆಂದಲೇ ನಮ್ಮೊಳಗೆ ಬೆಳೆಯುತ್ತದೆ. ಈ ಮನೋಧರ್ಮ ನಾವಿರುವಷ್ಟು ದಿನ ನಮ್ಮ ಜೊತೆಗೇ ಬದುಕುತ್ತದೆ. ಎಲ್ಲಾ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವ ಮುನ್ನ ಅದು  ನ್ಯಾಯಯುತವಾಗಿದ್ದು, 'ಸರಿ' ಎಂಬ ಅರ್ಹತೆಯನ್ನು ಪಡೆದುಕೊಳ್ಳಲೇಬೇಕು. ಹಾಗಿಲ್ಲದಿದ್ದರೆ ಆ ಯೋಚನೆ ಜನರೆದುರು ಬಿತ್ತರಗೊಳ್ಳಲು ನಾಲಯಕ್ಕು ಎಂಬುದು ನಮ್ಮ ಸಹಜ ಮನಸ್ಥಿತಿ. ಅಪ್ಪಿ-ತಪ್ಪಿ ಬುದ್ಧಿ ತಪ್ಪು ಎಂದುಕೊಂಡ ಕೆಲಸಕ್ಕೆ ಕೈ ಹಾಕಿದರೆ, ಅಪರಾಧಿ ಭಾವದ ಕೊರಗು ಕಾಡಲು ಶುರುವಾಗುತ್ತದೆ.



ಈ ಯೋಚನೆಗೆ ಹೊರತಾದವರು ಯಾರಿಲ್ಲವಾದರೂ ತಪ್ಪುಗಳು, ಅಪರಾಧಗಳು 'ಇಲ್ಲ'ದಾಗುವುದಿಲ್ಲ ಎಂಬುವುದು ವಿಶಿಷ್ಟವಾದ ವಿಚಿತ್ರ ಸತ್ಯ...   ನೋಡಿದ್ದು, ಕೇಳಿದ್ದು ಎಲ್ಲವನ್ನೂ ನಮ್ಮೊಳಗೇ ಇರುವ ತಕ್ಕಡಿಯಲ್ಲಿ ತೂಗಿ ಈ ಎರಡರಲ್ಲಿ ಒಂದು ಪಟ್ಟಿಗೆ ಸೇರಿಸುತ್ತೇವೆ. ಹೀಗೆ ಮೊದಲೇ ನಮ್ಮೊಳಗೆ ತುಂಬಿಕೊಂಡಿರುವ ಮನಸ್ಥಿತಿಯಿಂದಾಗಿಯೇ ಹಲವಾರು ಬಾರಿ, ನಮ್ಮಿಂದ ಸರಿಪಡಿಸಲಾಗದಂತಹ ತಪ್ಪುಗಳಾದದ್ದನ್ನು ಅಲ್ಲಗಳೆಯಲಾಗದು. ಒಂದು ನಾಣ್ಯಕ್ಕೆ ಇರುವ ಇನ್ನೊಂದು ಮುಖವನ್ನು ಕಾಣುವ ಪ್ರಯತ್ನಕ್ಕೆ ನಾವ್ಯಾರೂ ಕೈ ಹಾಕುವುದೇ ಇಲ್ಲ.

ಸಣ್ಣವರಿದ್ದಾಗ ಅವರಿವರು ಹೇಳಿದ್ದು ಸರಿ-ತಪ್ಪುಗಳಿಗೆ ರೂಪುರೇಷೆಯನ್ನು ಕೊಟ್ಟರೆ, ಬೆಳೆಯುತ್ತಾ ಹೋದಂತೆ ಬಹಳಷ್ಟು ಜನರಲ್ಲಿ, ಈ ಚೌಕಟ್ಟು ಇನ್ನಷ್ಟು ಕಿರಿದಾಗುತ್ತದೆ. ನಮ್ಮ ಮೂಗಿನ ನೇರಕ್ಕೆ ಜಗತ್ತನ್ನು ನೋಡಿ, ನಾನಂದದಕ್ಕೆ ಸರಿ ಎನ್ನುವವರು ಮಾತ್ರ ಸರಿ, ಉಳಿದವರೆಲ್ಲಾ ತಪ್ಪು ಎನ್ನುವ ಭಾವ ನಮ್ಮೊಳಗೇ ನಮಗರಿವಿಲ್ಲದಂತೆ ಬೆಳೆಯುತ್ತದೆ. ಹೀಗೆ ನಮ್ಮದೊಂದು ಜಗತ್ತನ್ನು ಕಟ್ಟಿಕೊಂಡು ಅಲ್ಲೇ ಬಂಧಿಯಾಗಿ ಬಿಡುತ್ತೇವೆ.  ಆ ಜಗತ್ತಿನಲ್ಲಿ ಅಹಂಭಾವದ ಮಂಜನ್ನು ಹೊರತುಪಡಿಸಿ ಮತ್ತೇನೂ ಉಳಿದಿರುವುದಿಲ್ಲ, ಬೆಳೆಯುವುದೂ ಇಲ್ಲ. ಆ ಮಂಜು ಅದೆಷ್ಟು ದಟ್ಟವಾಗಿ ನಮ್ಮ ಕಣ್ಣ ಮುಂದೆ ಆವರಿಸಿಕೊಳ್ಳುತ್ತದೆಯೆಂದರೆ ಅಲ್ಲಿ ನಾವಿಡುವ ಹೆಜ್ಜೆಯೇ ಸ್ಪಷ್ಟವಾಗಿ ಕಾಣದು!



ಯಾರು ಏನಂದರೂ ತಪ್ಪು- ಸರಿಗಳೆಂಬ ಗೊಂದಲದಲ್ಲಿ ಪ್ರತಿಯೊಂದು ಬದುಕು ತನ್ನದೇ ಅನನ್ಯ ರೂಪನ್ನು ಸೃಷ್ಟಿಸಿಕೊಳ್ಳುತ್ತದೆ. ಒಬ್ಬರಿಗೆ ಸರಿಯೆಂದದ್ದು ಮತ್ತೊಬ್ಬನಿಗೆ ಅಪರಾಧವೆನಿಸಬಹುದು, ಬದುಕಿನುದ್ದಕ್ಕೂ ಈ ಕೆಲಸ ತಪ್ಪು ಅಂದುಕೊಂಡದ್ದು ಅನಿವಾರ್ಯ ಸಂದರ್ಭಗಳ ಸತ್ಯವಾಗುತ್ತದೆ. ಯಾವುದೇ ಕಾರ್ಯವನ್ನು ಸರಿ- ತಪ್ಪಿನ ಬೇಲಿಯೊಳಗೆ ಕಟ್ಟಿಹಾಕುವ ಸಾಮರ್ಥ್ಯ ಹುಲು ಮಾನವನಿಗಿಲ್ಲವಾದರೂ, ನಮಗೆ ಸತ್ಯವೆನಿಸಿದ್ದರ ಮೇರೆಗೆ ತಪ್ಪು-ಒಪ್ಪುಗಳ ಕಪ್ಪು ಹಂಚುವುದರಲ್ಲಿ ಯಾರೂ ಹಿಂದುಳಿಯುವುದಿಲ್ಲ. 

ವೈಯಕ್ತಿಕ ನೆಲೆಗಟ್ಟಿನಲ್ಲಿ ನೋಡಿದಾಗ ಪ್ರತಿಯೊಬ್ಬನೂ ತನ್ನ ವಿವೇಚನೆಗೆ ಸರಿಯೆನಿಸಿದ ಕೆಲಸಗಳನ್ನೇ ಆಯ್ದುಕೊಳ್ಳುತ್ತಾನೆ. ಆ ಆಯ್ಕೆಗೆ ತನ್ನಿಂದ ಸಾಧ್ಯವಾಗುವ ನ್ಯಾಯವನ್ನು ಒದಗಿಸುತ್ತಾ ಹೆಜ್ಜೆ-ಹೆಜ್ಜೆಗೂ ನವ ಹುರುಪನ್ನು, ಆತ್ಮವಿಶ್ವಾಸವನ್ನು  ಸೃಜಿಸಿಕೊಂಡು ಬೆಳೆಯುತ್ತಾನೆ. ಆ ಹೊತ್ತಿನಲ್ಲಿ ಹಿಂದೆ ಸರಿಯೆನಿಸಿದ್ದು ಈಗ ಅವಿವೇಕದ ಕೆಲಸ ಎಂದರಿವಾದರೂ ಪ್ರಸ್ತುತ ಹೊತ್ತಿನ ಸರಿಯನ್ನು ಎದೆ ಹಿಗ್ಗಿಸಿ ತನ್ನ ಮುಂದೆ ತೆರೆದುಕೊಂಡು ತನ್ನ ಆತ್ಮಗೌರವದ ಪ್ರಭೆಯಿಂದಲೇ ಬೆಳಕು ಕಾಣುತ್ತಾನೆ. ಆದರೆ, ಅರಿವಿನ ಪರಿಧಿಗೆ ತಪ್ಪೆನಿಸಿದ ಆಯ್ಕೆಯನ್ನು ಒಪ್ಪಿದರೆ, ಬದುಕು ಹೆಪ್ಪು ಹಾಕಿದ ಹಾಲಿನಂತೆ ಕ್ಷಣ-ಕ್ಷಣಕ್ಕೂ ಹುಳಿಯಾಗಿ ಕೊನೆಗೆ ಕಹಿಯೆನಿಸತೊಡಗುತ್ತದೆ. ಆಗ ಎಲ್ಲಾ ವಿವೇಕ-ವಿಶ್ಲೇಷಣೆಗಳು ಅರ್ಥಹೀನವೆನಿಸುತ್ತವೆ. 



ಒಟ್ಟಿನಲ್ಲಿ ಆ ಹೊತ್ತಿನ ಸತ್ಯವನ್ನು ಇದ್ದ ಹಾಗೆ ಒಪ್ಪಿಕೊಳ್ಳುವುದು ಸುಲಭ, ಆ ಹೊತ್ತಿಗೆ ಸರಿಯೆನಿಸಿದ್ದನ್ನು ಮನಸಿನಲ್ಲಿ ಗಟ್ಟಿ ಮಾಡಿಕೊಳ್ಳುವುದೂ ಸರಳವೇ ಹೌದು. ಒಮ್ಮೊಮ್ಮೆ ಹೆಚ್ಚು ತಲೆಕೆಡಿಸಿಕೊಳ್ಳದೆ ಕಡಿಮೆ ಆಯ್ಕೆಗಳನ್ನು ನಮ್ಮೆದುರು ತೆರೆದಿಟ್ಟರೆ ಒಂದನ್ನು ಆಯ್ದುಕೊಳ್ಳುವುದು ಸರಾಗವಾಗುತ್ತದೆ. ಮುಂದೆ ಇದಕ್ಕಿಂತ ಇನ್ನೊಂದು ಚೆನ್ನಿತ್ತು ಎನಿಸುವ ಕೊರಗಿನಿಂದಲೂ ಬಿಡುಗಡೆ ದೊರಕುತ್ತದೆ. ಹಾಗೆಂದು ಯೋಚನೆಯೇ ಇಲ್ಲದ ಬದುಕು ಸರಿಯೇ? ಅದೇನಿದ್ದರೂ ನಮ್ಮಲ್ಲಿರುವ  ಸರಿ-ತಪ್ಪುಗಳ ಕಪ್ಪು ನಮಗೆ ಮಾತ್ರ ಸೀಮಿತವಾದರೆ ಅದರ ಜವಾಬುದಾರಿಯೂ ನಮ್ಮದೇ, ಅದರ ಪ್ರತಿಫಲವೂ ನಮ್ಮದೇ...



-ಪಲ್ಲವಿ ಕಬ್ಬಿನಹಿತ್ಲು

Comments

  1. Sorry mam. I copied your post in my blog. I did it only to spread your msg. Because i thought I am never going get the profit from it. But my viewers are also going to get knowledge from you. But as you suggested I removed it. Not to worry

    ReplyDelete
    Replies
    1. Problem is not that you shared this post in your blog, but you didn't ask permission to share it without my name, or you could have mentioned the name or redirect your viewers to this blog...
      Please consider these things with every post you share from other blogs...

      Delete
  2. Selected Pictures and qoutes are special impact nimma barahagalli.

    ReplyDelete

Post a Comment

Popular posts from this blog

ನೀನೊಂದು ಮಾತು ಹೇಳಿದ್ದಿದ್ರೆ?!

ಬೆಳೆಯುತಿದ್ದೇವೆ ಎಂದರೆ ಅಳಿಯುತ್ತಿರುವುದಲ್ಲವೇ?!

ಮುಖವಾಡಗಳು