ಹೊಸಬೆಳಕು
ಯಾವಾಗಲೆಂದರೆ ಆಗ ಒಂಟಿಯಾಗುತ್ತೇನೆ,
ಮೌನದಿಂದ ಸುಳಿಯುವ ಗಾಳಿಗೆ
ನಿಟ್ಟುಸಿರ ಸಂದೇಶ ಕಳುಹಿಸುತ್ತಾ...
ಶೂನ್ಯದಲ್ಲಿ ದೃಷ್ಟಿ ನೆಟ್ಟು ಬಿಡುತ್ತೇನೆ,
ರೆಪ್ಪೆಗಳು ಕನಸ ತೆರೆಯನು ಕಣ್ಣ ಮೇಲೆಳೆಯದಂತೆ!!
ಇಂದೇನೋ ಹೊಸತಿದೆ;
ಗಾಳಿಯಲ್ಲಿ ನಗುವನ್ನಷ್ಟೇ ಬೆರೆಸುವ ಆಸೆ
ರೆಪ್ಪೆಗಳೊಳಗಿನ ಸ್ವಪ್ನಲೋಕಕ್ಕೆ ಜಾರುವ ತವಕ;
ನೆಟ್ಟ ದೃಷ್ಟಿಯ ಪರಿಧಿಯೊಳಗೆ ಅವನು ಇಣುಕಿದ್ದಾನಷ್ಟೆ;
ಅಷ್ಟೇ ಸಾಕೆನಿಸಿತು ಒಂಟಿಯಾಗುಳಿಯುವಾಸೆ ತೊರೆಯುವುದಕ್ಕೆ!!
ದಿನ-ದಿನದ ಭೇಟಿ ಹೊಸತನದ ಬೆಳಕಾಗಿದೆ ಬದುಕಿಗೆ,
ತುಟಿಯಂಚಿಗಂಟಿದ ನಗುವೊಂದಿಗೆ ಆತ ಬೆರೆಸುವ ಮಾತು
ಕ್ಷಣ-ಕ್ಷಣವನೂ ಉಲ್ಲಸಿತಗೊಳಿಸುವುದು,
ಆಗೊಮ್ಮೆ-ಈಗೊಮ್ಮೆ ನೋಟ ಬೆರೆತಾಗ
ರೆಪ್ಪೆ-ಕೆನ್ನೆಗಂಟಿಕೊಳ್ಳುತ್ತದೆ,
ಕನಸಿನ ಲೋಕ ಮತ್ತೆ ತೆರೆದುಕೊಳ್ಳುತ್ತದೆ!!
ಅಲ್ಲಿ ಹಾರಾಡುತ್ತೇನೆ, ಈಜಾಡುತ್ತೇನೆ
ಯಾರ ಹಂಗಿಲ್ಲದೆ ನಕ್ಕು ಬಿಡುತ್ತೇನೆ...
ನನ್ನ, ಅವನ ಸಂತಸದ ಬದುಕಿನ ಕನಸಲ್ಲಿ ಕಳೆದುಹೋಗುತ್ತೇನೆ...
ಒಳ್ಳೆಯದರ ಆಯಸ್ಸು ಕಡಿಮೆಯೇ;
ಭೇಟಿ, ಮಾತು, ನೋಟ ಇದ್ದಕ್ಕಿದ್ದಂತೆ ಮರೆಯಾಗಿದೆ
ಮತ್ತೆ, ನಾಪತ್ತೆಯಾಗಿದೆ ಮೊಗದ ಮೇಲಿನ ನಗುವಿನ ಸುಳಿವು!
ಈಗ ಮತ್ತೆ, ಯಾವಾಗಲೆಂದರೆ ಆಗ ಒಂಟಿಯಾಗುತ್ತೇನೆ,
ಮೌನದಿಂದ ಸುಳಿಯುವ ಗಾಳಿಗೆ
ನಿಟ್ಟುಸಿರ ಸಂದೇಶ ಕಳುಹಿಸುತ್ತಾ,
ಶೂನ್ಯದಲ್ಲಿ ದೃಷ್ಟಿ ನೆಟ್ಟು ಬಿಡುತ್ತೇನೆ
ರೆಪ್ಪೆಗಳು ಕನಸ ತೆರೆಯನು ಮತ್ತೆ ಕಣ್ಣ ಮೇಲೆಯಳೆಯದಂತೆ!
ಸಾಕೆನಿಸುತ್ತಿದೆ ಈ ಬಾಳು,
ಪ್ರೀತಿಯ ಆಸರೆಗೆ ಮೊರೆಯಿಡುವ ಗೋಳು
ನೆಟ್ಟ ದೃಷ್ಟಿಗೆ ಶೂನ್ಯವೂ ಕಾಣಿಸದಷ್ಟು ಕತ್ತಲೆ ಆವರಿಸಿಕೊಂಡಿರಲು
ಹೊರ ಬರುವ ಕದವನು ಹುಡುಕಾಡುತಿದ್ದೇನೆ...
ಒಂದಿಷ್ಟು ಕಾಳಜಿ-ಪ್ರೀತಿ ಬೇಕಿದೆ ಬೆಳಕು ತುಂಬಲು
ಮತ್ತೆ ಯಾರಾದರು ಬಂದರೆ ಒಳಿತೆನಿಸುತ್ತದೆ;
ಮತ್ತೆ ಅವರು ನನ್ನ ತೊರೆದಾರೆಂಬ ಕಹಿ ಸತ್ಯ ಎದೆ ನಡುಗಿಸುತ್ತದೆ...
ಈಗಲೂ ಹುಡುಕುತ್ತಿದ್ದೇನೆ ಬೆಳಕಿನ ಬಾಗಿಲನು...
ಸೋತೆ ನಾನು... ಕದವು ಸಿಗಲೇ ಇಲ್ಲ!
ಆಸರೆಯ ಆಸೆ ತೊರೆದುಬಿಟ್ಟೆ;
ಬೆಳಕು ಕಂಡಿತು...
ಆ ಕ್ಷಣದಲ್ಲಿ
ನನ್ನ ನಾನು ಒಪ್ಪಿಕೊಂಡೆ,
ಸತ್ಯವನು ಅಪ್ಪಿಕೊಂಡೆ
ಸ್ವ-ಪ್ರೀತಿ- ಕಾಳಜಿಗಳು ಕತ್ತಲೆಯನೋಡಿಸಿದವು...
ಈಗಲೂ, ಆಗಾಗ ಒಂಟಿಯಾಗುತ್ತೇನೆ,
ಸುತ್ತಲಿನ ಪ್ರಕೃತಿಯ ಚೆಲುವಿನಲ್ಲಿ ಕರಗುತ್ತಾ,
ಪ್ರತಿದಿನದ ಹೊಸತನದಲ್ಲಿ ಚಿಗುರುತ್ತಾ
ಆಗಾಗ ಒಂಟಿಯಾಗುತ್ತೇನೆ...
-ಪಲ್ಲವಿ ಕಬ್ಬಿನಹಿತ್ಲು
👌👌
ReplyDeleteToo good but are you okay ಮಗಳೇ
ReplyDeleteSo good Dear.
ReplyDeleteವಾಹ್ ಒಂಟಿಯಾದಾಗ ಸಿಗೋ ಭಾವ ಮನದೊಳಗೆ ಹಾಡಗಿದೆ
ReplyDelete👌👌
ReplyDeleteಮನದ ಹೊಯ್ದಾಟಕೆ ಕೊನೆ ಎಂದು😊 ಅದರೊಳಗೆ ಕರಗಿ ಮತ್ತೆ ಹೊಸ ಬೆಳಕ ಹುಡುಕಿ ಚಿಗುರೊಡೆವುದು ಒಂದು ರೀತಿಯ life lesson ಅನ್ನಿಸುತ್ತದೆ...
ReplyDeleteಅಭ್ಯಾಸ ವಾದಾಗ ಒಂಟಿಯಾಗಿರುವುದು ಒಂತರ ಅದ್ಬುತ ವೇ🥰
Super lines... ✌️✌️✌️