ಮಶಾಲು ಉರಿಯುತಲಿದೆ...






ಬಿರುಗಾಳಿ, ಮಳೆ-ಚಳಿಗೆ ನಂದದೆ

ಅಂತರಂಗದೊಳಗಿನ ಮಶಾಲು ಉರಿಯುತ್ತಲೇ ಇದೆ!



ಸುತ್ತಲೆಲ್ಲ ಅದೆಷ್ಟು ಕರಿ ನೆರಳುಗಳು ಸುಳಿದರೂ,

ಅವು ಮೈ ಸೋಕದಂತೆ ಹೆದರಿಸುತ್ತಾ ಉರಿಯುತಿದೆ;

ಕಣ್ಣು ಕೋರೈಸುವ ಮಿನುಗುವ ಬದುಕುಗಳ

ಎದೆ ನಡುಗಿಸುವ ಮಂದ ಬೆಳಕನು ಚೆಲ್ಲುತ ಉರಿಯುತಿದೆ;

ತನ್ನೊಳಗೇ ಮುಳುಗಿರುವವರ ಕಣ್ಣು ತೆರೆಸಲು

ಸ್ವಾರ್ಥದ ಪರದೆಯನೇ ನುಂಗುತ್ತಾ ಉರಿಯುತಿದೆ...

ತಣ್ಣಗಿನ ಎದೆಯವರ ಮೇಲೆ ಜ್ವಾಲೆಯು

ಕೆನ್ನಾಲಗೆಯ ಬರೆಯನೆಳೆದೆಳೆದು ಉರಿಯುತಿದೆ;

ಅಂತರಾಳದೊಳಗೆ ಒಂದಷ್ಟು ಶುದ್ಧತೆಯನುಳಿಸುವ,

ಅದರ ದನಿಗೆ ಬೆಳಕಾಗಲು ಮಶಾಲು ಉರಿಯುತ್ತಲೇ ಇದೆ...





ಗುಡ್ಡೆ ಹಾಕುತ್ತಲಿರುತ್ತದೆ ಎಲ್ಲರೊಳಗಿನ ಮಶಾಲು 

ನಮ್ಮ ಕೈಲಾದ ಅನ್ಯಾಯ ಅಪಮಾನಗಳನು ಸದ್ದಿಲ್ಲದೆ...

ಎಗ್ಗಿಲ್ಲದೆ ಆಗಾಗ ಅವುಗಳನು ಮನದ ಮುಂದಿರಿಸಿ 

ಕಾಡಿ-ಕಾಡಿ ದಹಿಸುವುದು ನಮ್ಮೊಳಗನು ಪಶ್ಚಾತಾಪದ ಅಗ್ನಿಯಲಿ;

ಒಂಟಿಯಾದಾಗ ಒಂದೊಂದನೇ ಯೋಚನೆಗಳಾಗಿ

ಕಣ್ಣು ಮುಚ್ಚಿದಾಗ ದಾರುಣ ಕನುಸುಗಳಾಗಿ

ಮದದ ಹೆದೆಯೇರಿಸುವಾಗ ಕರ್ಮಗಳ ಪ್ರತಿಫಲದ ಅಂಜಿಕೆಯಾಗಿ

ಕಾಡಿ-ಕಾಡಿ ದಹಿಸುವುದು ನಮ್ಮೊಳಗನು ಪಶ್ಚಾತಾಪದ ಅಗ್ನಿಯಲಿ

ಎಗ್ಗಿಲ್ಲದೆ ಆಗಾಗ ಅನ್ಯಾಯ ಅಪಮಾನಗಳನು  ಮನದ ಮುಂದಿರಿಸಿ....





ಈ ಮಾನವೀಯತೆಯ ಮಶಾಲು ಉರಿದಷ್ಟು ದಿನ 

ಮಾನವನು ಉಳಿದಾನು ಮಾನವನಾಗಿ,

ಇದನರಿತ ಅಂತರಾತ್ಮದ ಮಶಾಲು ಉರಿಯುತ್ತಲೇ ಇದೆ;

ಎಂತಹ ಬಿರುಗಾಳಿ, ಮಳೆ-ಚಳಿಗೂ ಭಯ ಬೀಳದೆ...


-ಪಲ್ಲವಿ ಕಬ್ಬಿನಹಿತ್ಲು

Comments

Post a Comment

Popular posts from this blog

DREAMS…

ಕಾಫಿಯ ಕಪ್ಪು

ಬಿಳಿ ಬದುಕು...