ಕಾಫಿಯ ಕಪ್ಪು


ಕಾಫಿಯ ಕಪ್ಪು ಖಾಲಿಯಾಗಿದೆ,

ಆದರೆ ಮಾತು ಶುರುವಾಗಲೇ ಇಲ್ಲ!



ಅವಳು ಅವನೆದುರು ತಂದಿಟ್ಟದ್ದು 

ಹಬೆಯಾಡುವ ಬಿಸಿ ಕಾಫಿಯ ಕಪ್ಪು

ಅದು ಅವನಿಗಿಷ್ಟವಾದದ್ದು...

ಬಂಧ ಬಂಧನವಾಗಿ ಕೊಂಡಿ ಕಳಚಿದ ಮೇಲೆ

ಮಾತು ಕಿರಿಕಿರಿಯೆನಿಸಿದರೆ

ಮೌನ ಅಸಹನೀಯ!



ತಿಂಗಳುಗಳು ಕಳೆದರೂ ಅವನ ಕಂಡಾಗ

ಅವಳ ನಿಟ್ಟುಸಿರ ದಟ್ಟತೆ ಕದಡಿ ಹೋದಂತಿಲ್ಲ:

ಅವಳೆದುರು ಬಂದಾಗ ಅವನ

ಹುಬ್ಬುಗಳು ಗಂಟಾಗದೆ ಉಳಿಯುವುದೇ ಇಲ್ಲ!

ಸಪ್ತಪದಿ ತುಳಿದವರ ಹಾದಿ ಬೇರೆಯಾದಾಗ 

ನಡುವೆ ಉಳಿದುಕೊಳ್ಳುವುದು ಕಂದಕ ಮಾತ್ರ!!



ಮೌನದೊಳಗೆ ಹೂತು ಹಾಕಿದ್ದ ಮಾತುಗಳು

ಮಾತಾಗದೆ ವ್ಯಾಜ್ಯಗಳಾಗಿದ್ದವು 

ಕಗ್ಗಂಟಿನ ಗಂಟುಗಳ ಸಡಿಲಿಸಲು ಕ್ಷಮೆಗಾಗಿ ಇಂದಿನ ಭೇಟಿ!

ಆ ಹೊತ್ತಿಗೆ ಜೊತೆಯಾಗಿ ನಕ್ಕ ಕ್ಷಣಗಳೆಲ್ಲಾ

ಹೃದಯದ ಮೆದು ಪದರವನ್ನು ಚುಚ್ಚಿಕೊಂಡವು...



ಕಣ್ಣಲ್ಲಿ ನೀರಾಡಿತು, ಆದರೆ ಮಾತು

ಶುರುವಾಗಲೇ ಇಲ್ಲ;

ಖಾಲಿ ಕಪ್ಪಿನ ತಳದಲ್ಲಿ ಒಂದಷ್ಟು

ಕಪ್ಪು ಕರಿ ಉಳಿದುಕೊಂಡಿತ್ತು!!



-ಪಲ್ಲವಿ ಕಬ್ಬಿನಹಿತ್ಲು

Comments

Post a Comment

Popular posts from this blog

THE LONGING…

One-sided!

Winter Inside!