Posts

Showing posts from 2022

ಸಾಗರದಂತವಳು

Image
ಸಮುದ್ರ ತೀರದ ಉಸುಕಿನ ಮೇಲೆ ಶೂನ್ಯಕ್ಕೆ ದೃಷ್ಟಿ ನೆಟ್ಟು ಸೋತವರಂತೆ ಮೈಚಾಚಿ ಮಲಗಿರುವ ಅವಳೊಳಗೂ ಉಪ್ಪು ನೀರಿನ ಕಡಲೊಂದಿದೆ... ಅಲ್ಲಿ, ಎಡೆಬಿಡದೆ ಎದೆ ಚುಚ್ಚುವ ನೋವಿಗೆ ಕರಗಿದ ಕಂಬನಿಯ ಬಿಂದುಗಳಿವೆ, ಕಟ್ಟೆಯಿಲ್ಲದೆ ಹರಿದ ಸಂತಸದ ಹೊಳೆಯ ಸಿಹಿ ನೀರೂ ಸೇರುವುದು ಅದೇ ಕಡಲಿಗೆ! ಬಿಸಿಲು-ಮಳೆ ಎನ್ನದೆ ದುಡಿದಾಗ ಸುರಿದ ಬೆವರೂ ಬೆರೆತದ್ದೂ ಅದೇ ಕಡಲ ನೀರಿಗೆ ! ಅವಳ ಬದುಕಿನ ಕ್ಷಣ - ಕ್ಷಣವೂ ಹನಿ - ಹನಿಯಾಗಿ ಸೇರಿಕೊಂಡದ್ದೂ ಅದೇ ಕಡಲಿಗೆ; ಅಲ್ಲಿರುವುದು ಅವಳ ಸರ್ವಸ್ವ. ಅಲ್ಲಿರುವುದು ಅವಳ ಸರ್ವಸ್ವವೆಂಬುದು ದಿಟವಾದರೂ ಆಗಾಗ ಆ ಉಪ್ಪು ನೀರಿನ ಕಡಲು ಅವಳಿಗೆ ಭಾರವೆನಿಸುತ್ತದೆ!! ಆಗ ಎಲ್ಲಾ ಒಳಗಿಳಿಯದೆ ಚೂರು - ಚೂರು ಸೋರಿ ಕಳೆದುಹೋಗುತ್ತಿದ್ದರೆ ಚೆನ್ನಿತ್ತು ಎಂದುಕೊಳ್ಳುತ್ತಾಳೆ... ಕೂಡಲೇ ತಲೆ ಕೊಡವಿ, ಹಾಗಿರದಿದ್ದರೇನಾಯಿತು? ಕಡಲೆಂದರೆ ಬಲು ಪ್ರೀತಿ ನನಗೆ ಎನ್ನುತ್ತಾ ಕಡಲ ದಡದ ಮರಳಲ್ಲಿ ಮೈ ಚೆಲ್ಲುತ್ತಾಳೆ, ತನ್ನೊಳಗಿನ ಕಡಲಿ ಭೋರ್ಗರೆತದ ಸದ್ದು ಹೊರಗಿರುವ ಸಮದ್ರದ ಅಲೆಗಳ ಗರ್ಜನೆಗೆ ಹೆದರಿ ಸುಮ್ಮನಾಗುವವರೆಗೂ ಅಲ್ಲೇ ಬಿದ್ದುಕೊಳ್ಳುತ್ತಾಳೆ... ಏಳುವಾಗ ಮೊಗದ ಮೇಲೊಂದು ನಗು,  ಒಡಲೊಳಗೆ ಶಾಂತ ಸಾಗರದ ಛಾಯೆಯನ್ನು ಚಿಮ್ಮುತ್ತಾಳೆ; ಅವಳು ಮತ್ತೆ ಬದುಕುತ್ತಾಳೆ... - ಪಲ್ಲವಿ ಕಬ್ಬಿನಹಿತ್ಲು

ಮಿನುಗು ತಾರೆ

Image
 ಬಯಕೆಗಳನ್ನೆಲ್ಲಾ ಮುರಿದು ಬೀಳುವ  ತಾರೆಗಳ ಬೆನ್ನಿಗೆ ನೇತು ಹಾಕಿದ್ದೇನೆ... ಹೊಳೆವ ತಾರೆಗಳಷ್ಟು ಆಸೆಗಳು  ಇನ್ನೂ ಒಳಗೊಳಗೇ ಮಿನುಗುತ್ತವೆ, ತಾರೆಗಳು ಉದುರಿದ ಹಾಗೆಯೇ  ಆಸೆಗಳು ಪೂರೈಸುತ್ತವೆ ಎಂಬ ಆಸೆ ನನಗೆ! ಆಗಸದಲ್ಲಿ ಹೊಳೆಯುವ ನಕ್ಷತ್ರಗಳ ನೋಡಲು ಕತ್ತಲಾಗುವುದಕ್ಕೆ ಕಾದು ಕುಳಿತುಕೊಳ್ಳುತ್ತೇನೆ... ಅವು ಒಂದೊಂದಾಗಿ ಮಿನುಗಲು ಶುರು ಹಚ್ಚಿಕೊಂಡಾಗ ಅಡ್ಡಲಾಗಿ ಮಲಗಿ ಕಣ್ಣು ತಲುಪಿದಷ್ಟೂ ದೂರ ದೃಷ್ಟಿ ಹಾಯಿಸಿ ನಕ್ಷತ್ರಗಳನ್ನು ಎಣಿಸುತ್ತೇನೆ, ಒಂದೊಂದಾಗಿ ಬಯಕೆಗಳನ್ನು ಹೆಣೆದು ಎಣಿಸಿದ ಪ್ರತೀ ನಕ್ಷತ್ರಕ್ಕೂ ತೊಡಿಸುತ್ತೇನೆ... ಆಗಾಗ ಕಣ್ಣುಗಳು ಕೈ ಕೊಡುತ್ತವೆ, ಆಗ ಎಣಿಸಿದ ತಾರೆ-ಎಣಿಸದ ತಾರೆಗಳಿಗೆ  ವ್ಯತ್ಯಾಸವೇ ಇಲ್ಲದಂತಾಗುತ್ತದೆ; ಆದರೂ ಎಣಿಕೆ ‌ಸಾಗುತ್ತಲೇ ಇರುತ್ತದೆ! ನನಗೂ ಎಲ್ಲೋ ಒಂದು ಕಡೆ ಅರಿವಿದೆ,  ಮುರಿದು ಬೀಳುವುದು ತಾರೆಗಳಲ್ಲವೆಂದು ಆದರೂ ಒಪ್ಪಿಕೊಳ್ಳುವ ಮನ‌ಸಿಲ್ಲ ನನಗೆ,  ಮುಗಿಲೆತ್ತರಕ್ಕೆ ಹಬ್ಬಿರುವ ಆಸೆಗಳು  ಪೂರೈಸುತ್ತವೆ ಎಂಬ ನಂಬಿಕೆ ಉಳಿಸಿಕೊಳ್ಳಬೇಕೆಂಬ ಹುಚ್ಚು ಹಂಬಲ ಎದೆಯೊಳಗೆ! ಬೆಳಕು ಹರಿದಾಗಲೂ  ಅಲ್ಲಲ್ಲಿ, ಸಂದು-ಗೊಂದುಗಳಲ್ಲಿ ಕತ್ತಲು ಅಡಗಿ ಕುಳಿತುಕೊಳ್ಳುತ್ತದೆ, ಆ ನಿಶೆಯಲ್ಲಿ ಮನಸು ಕನಸುಗಳ ಹೊಲಿಯುತ್ತಲಿರುತ್ತದೆ, ಹೊತ್ತೇರಿದ ಹಾಗೆ ಬಿಸಿಲಿನ ಝಳ ಬಯಕೆಗಳ ಸುಡದಿರಲೆಂದು ಮತ್ತಷ್ಟು ಮೂಲೆಯಲ್ಲಿ ಅಡಗಿಕೊಳ್ಳುತ್ತದೆ... ರಾತ್ರಿಯಾದಾಗ ಕತ್ತಲಲ್ಲಿ ಬೆತ್ತಲಾಗಿ ಬಿದ್ದ ಕನಸುಗಳು ನಕ್ಷತ್ರಗಳ ಉ