ಮಿನುಗು ತಾರೆ



 ಬಯಕೆಗಳನ್ನೆಲ್ಲಾ ಮುರಿದು ಬೀಳುವ 

ತಾರೆಗಳ ಬೆನ್ನಿಗೆ ನೇತು ಹಾಕಿದ್ದೇನೆ...

ಹೊಳೆವ ತಾರೆಗಳಷ್ಟು ಆಸೆಗಳು 

ಇನ್ನೂ ಒಳಗೊಳಗೇ ಮಿನುಗುತ್ತವೆ,

ತಾರೆಗಳು ಉದುರಿದ ಹಾಗೆಯೇ 

ಆಸೆಗಳು ಪೂರೈಸುತ್ತವೆ ಎಂಬ ಆಸೆ ನನಗೆ!

ಆಗಸದಲ್ಲಿ ಹೊಳೆಯುವ ನಕ್ಷತ್ರಗಳ ನೋಡಲು

ಕತ್ತಲಾಗುವುದಕ್ಕೆ ಕಾದು ಕುಳಿತುಕೊಳ್ಳುತ್ತೇನೆ...

ಅವು ಒಂದೊಂದಾಗಿ

ಮಿನುಗಲು ಶುರು ಹಚ್ಚಿಕೊಂಡಾಗ

ಅಡ್ಡಲಾಗಿ ಮಲಗಿ

ಕಣ್ಣು ತಲುಪಿದಷ್ಟೂ ದೂರ ದೃಷ್ಟಿ ಹಾಯಿಸಿ

ನಕ್ಷತ್ರಗಳನ್ನು ಎಣಿಸುತ್ತೇನೆ,

ಒಂದೊಂದಾಗಿ ಬಯಕೆಗಳನ್ನು ಹೆಣೆದು

ಎಣಿಸಿದ ಪ್ರತೀ ನಕ್ಷತ್ರಕ್ಕೂ ತೊಡಿಸುತ್ತೇನೆ...

ಆಗಾಗ ಕಣ್ಣುಗಳು ಕೈ ಕೊಡುತ್ತವೆ,

ಆಗ ಎಣಿಸಿದ ತಾರೆ-ಎಣಿಸದ ತಾರೆಗಳಿಗೆ 

ವ್ಯತ್ಯಾಸವೇ ಇಲ್ಲದಂತಾಗುತ್ತದೆ;

ಆದರೂ ಎಣಿಕೆ ‌ಸಾಗುತ್ತಲೇ ಇರುತ್ತದೆ!



ನನಗೂ ಎಲ್ಲೋ ಒಂದು ಕಡೆ ಅರಿವಿದೆ, 

ಮುರಿದು ಬೀಳುವುದು ತಾರೆಗಳಲ್ಲವೆಂದು

ಆದರೂ ಒಪ್ಪಿಕೊಳ್ಳುವ ಮನ‌ಸಿಲ್ಲ ನನಗೆ, 

ಮುಗಿಲೆತ್ತರಕ್ಕೆ ಹಬ್ಬಿರುವ ಆಸೆಗಳು 

ಪೂರೈಸುತ್ತವೆ ಎಂಬ ನಂಬಿಕೆ ಉಳಿಸಿಕೊಳ್ಳಬೇಕೆಂಬ

ಹುಚ್ಚು ಹಂಬಲ ಎದೆಯೊಳಗೆ!



ಬೆಳಕು ಹರಿದಾಗಲೂ 

ಅಲ್ಲಲ್ಲಿ, ಸಂದು-ಗೊಂದುಗಳಲ್ಲಿ

ಕತ್ತಲು ಅಡಗಿ ಕುಳಿತುಕೊಳ್ಳುತ್ತದೆ,

ಆ ನಿಶೆಯಲ್ಲಿ ಮನಸು ಕನಸುಗಳ ಹೊಲಿಯುತ್ತಲಿರುತ್ತದೆ,

ಹೊತ್ತೇರಿದ ಹಾಗೆ ಬಿಸಿಲಿನ ಝಳ ಬಯಕೆಗಳ ಸುಡದಿರಲೆಂದು

ಮತ್ತಷ್ಟು ಮೂಲೆಯಲ್ಲಿ ಅಡಗಿಕೊಳ್ಳುತ್ತದೆ...

ರಾತ್ರಿಯಾದಾಗ ಕತ್ತಲಲ್ಲಿ ಬೆತ್ತಲಾಗಿ ಬಿದ್ದ

ಕನಸುಗಳು ನಕ್ಷತ್ರಗಳ ಉಡುಪುಗಳಾಗಿ

ನಕ್ಷತ್ರಗಳು ಉದುರಿದಾಗ ನನ್ನ ಜೋಳಿಗೆಗೆ ಬೀಳುತ್ತವೆ...

ಮಿನುಗುವ ಕನಸುಗಳು ಬೆಳಗುತ್ತವೆ

ಆ ಬೆಳಕು ನನ್ನೊಳಗನ್ನೆಲ್ಲಾ ಆವರಿಸಿ

ನಾನೂ ಬೆಳಕಾಗುತ್ತೇನೆ

ಎಂದುಕೊಳ್ಳುತ್ತಾ ಬಯಕೆಗಳನ್ನೆಲ್ಲಾ

ಮುರಿದು ಬೀಳುವ ತಾರೆಗಳ ಬೆನ್ನಿಗೆ

ನೇತು ಹಾಕುತ್ತೇನೆ...



ನಕ್ಷತ್ರಗಳು ಮುರಿದಾಗ ಆಸೆಗಳು

ಪೂರೈಸುತ್ತವೆ ಎಂಬ ಆಸೆ ನನಗೆ....


-ಪಲ್ಲವಿ ಕಬ್ಬಿನಹಿತ್ಲು

Comments

  1. Shabda ಜೋಡಣೆ ಅದ್ಭುತ

    ReplyDelete
  2. 👌👌ಆಯ್ದು ಬರದ್ದು, ತುಂಬಾ ಸಮಯ ಆತಲ್ದ ಪೋಸ್ಟ್ ಹಾಕದ್ದೆ, ಹೀಂಗೆ ಮುಂದುವರಿಯಲಿ 💐

    ReplyDelete
  3. Nice comparison of dream with shining star... 👌👌🔥hope is like seeing light even being surrounded by darkness.... 😍🔥🔥

    ಪದಪುಂಜಗಳು ಅದ್ಬುತವಾಗಿದೆ

    ReplyDelete

Post a Comment

Popular posts from this blog

THE LONGING…

One-sided!

Winter Inside!