ಸಾಗರದಂತವಳು



ಸಮುದ್ರ ತೀರದ ಉಸುಕಿನ ಮೇಲೆ

ಶೂನ್ಯಕ್ಕೆ ದೃಷ್ಟಿ ನೆಟ್ಟು ಸೋತವರಂತೆ

ಮೈಚಾಚಿ ಮಲಗಿರುವ ಅವಳೊಳಗೂ

ಉಪ್ಪು ನೀರಿನ ಕಡಲೊಂದಿದೆ...

ಅಲ್ಲಿ, ಎಡೆಬಿಡದೆ ಎದೆ ಚುಚ್ಚುವ ನೋವಿಗೆ

ಕರಗಿದ ಕಂಬನಿಯ ಬಿಂದುಗಳಿವೆ,

ಕಟ್ಟೆಯಿಲ್ಲದೆ ಹರಿದ ಸಂತಸದ ಹೊಳೆಯ

ಸಿಹಿ ನೀರೂ ಸೇರುವುದು ಅದೇ ಕಡಲಿಗೆ!

ಬಿಸಿಲು-ಮಳೆ ಎನ್ನದೆ ದುಡಿದಾಗ ಸುರಿದ ಬೆವರೂ

ಬೆರೆತದ್ದೂ ಅದೇ ಕಡಲ ನೀರಿಗೆ !



ಅವಳ ಬದುಕಿನ ಕ್ಷಣ - ಕ್ಷಣವೂ ಹನಿ - ಹನಿಯಾಗಿ

ಸೇರಿಕೊಂಡದ್ದೂ ಅದೇ ಕಡಲಿಗೆ;

ಅಲ್ಲಿರುವುದು ಅವಳ ಸರ್ವಸ್ವ.



ಅಲ್ಲಿರುವುದು ಅವಳ ಸರ್ವಸ್ವವೆಂಬುದು ದಿಟವಾದರೂ

ಆಗಾಗ ಆ ಉಪ್ಪು ನೀರಿನ ಕಡಲು ಅವಳಿಗೆ

ಭಾರವೆನಿಸುತ್ತದೆ!!



ಆಗ ಎಲ್ಲಾ ಒಳಗಿಳಿಯದೆ ಚೂರು - ಚೂರು

ಸೋರಿ ಕಳೆದುಹೋಗುತ್ತಿದ್ದರೆ ಚೆನ್ನಿತ್ತು ಎಂದುಕೊಳ್ಳುತ್ತಾಳೆ...

ಕೂಡಲೇ ತಲೆ ಕೊಡವಿ, ಹಾಗಿರದಿದ್ದರೇನಾಯಿತು?

ಕಡಲೆಂದರೆ ಬಲು ಪ್ರೀತಿ ನನಗೆ ಎನ್ನುತ್ತಾ

ಕಡಲ ದಡದ ಮರಳಲ್ಲಿ ಮೈ ಚೆಲ್ಲುತ್ತಾಳೆ,

ತನ್ನೊಳಗಿನ ಕಡಲಿ ಭೋರ್ಗರೆತದ ಸದ್ದು

ಹೊರಗಿರುವ ಸಮದ್ರದ ಅಲೆಗಳ ಗರ್ಜನೆಗೆ

ಹೆದರಿ ಸುಮ್ಮನಾಗುವವರೆಗೂ

ಅಲ್ಲೇ ಬಿದ್ದುಕೊಳ್ಳುತ್ತಾಳೆ...



ಏಳುವಾಗ ಮೊಗದ ಮೇಲೊಂದು ನಗು, 

ಒಡಲೊಳಗೆ ಶಾಂತ ಸಾಗರದ ಛಾಯೆಯನ್ನು ಚಿಮ್ಮುತ್ತಾಳೆ;

ಅವಳು ಮತ್ತೆ ಬದುಕುತ್ತಾಳೆ...


- ಪಲ್ಲವಿ ಕಬ್ಬಿನಹಿತ್ಲು

Comments

  1. Wow.... Amazing....
    ಹೊರಗಿನ ಕಡಲ ಬೋರ್ಗರೆತದ ಸದ್ದಿನಲೇ ಪೈಪೋಟಿ ನಡೆಸಿ ಅಡಗುತಿರುವ ಅವಳೊಳಗಿನ ಕಡಲ ತೀವ್ರತೆ.. ಕೊನೆಗೊಂದು ಶಾಂತ ಛಾಯೆ...... 👌👌👌👌🔥

    ReplyDelete

Post a Comment

Popular posts from this blog

THE LONGING…

One-sided!

Winter Inside!