ಬೆಳೆಯುತಿದ್ದೇವೆ ಎಂದರೆ ಅಳಿಯುತ್ತಿರುವುದಲ್ಲವೇ?!


ಮಾನವನಿಗೆ ಬದುಕಿನ ಪಾಠ ಹೇಳಿಕೊಡುವುದರಲ್ಲಿ ಪ್ರಕೃತಿಯ ಸರಿಸಮಾನರು ಯಾರೂ ಇಲ್ಲ. ಚಳಿಗಾಲದಲ್ಲಿ ಹೊಸ ಚಿಗುರಿನ ಹುಟ್ಟಿಗೆ ಅವಕಾಶ ನೀಡಬೇಕೆಂದು ಹಳೆ ಎಲೆಗಳಲ್ಲಾ ಉದುರುತ್ತವೆ. ಮರ ಬದಲಾಗಲಿಲ್ಲ ಎಂದುಕೊಂಡರೂ ಎಲೆಗಳೆಲ್ಲಾ ಬದಲಾಗುತ್ತವೆ; ಎಲೆಗಳು ಹೀರುವ ಬಿಸಿಲು, ಗಾಳಿಯೂ ಬದಲಾಗುತ್ತದೆ. ಆಗ ನೆರಳೂ ಹೊಸತು, ಅದರ ತಂಪೂ ಹೊಸತು. ಒಂದಿಷ್ಟನ್ನು ಕಳೆದುಕೊಂಡು, ಮತ್ತೊಂದಿಷ್ಟನ್ನು ಪಡೆದುಕೊಂಡು ಬದಲಾಗುವುದೇ ಬದುಕಲ್ಲವೇನು?


ಬದಲಾವಣೆ ಬಾಳುತಿದ್ದೇವೆ ಎನ್ನುವುದರ ಸಂಕೇತ. ಉಸಿರೆಳೆದಷ್ಟು ಬಾರಿ ಮನುಜ ಬದಲಾಗಿದ್ದಾನೆ ಎನ್ನುವ ವಿಷಯ ಅದೆಷ್ಟು ಸಹಜ ಸತ್ಯವೇ ಆದರೂ ಅಚ್ಚರಿಯುಂಟು ಮಾಡದಿರದು. ಒಂದೊಂದು ಕ್ಷಣ ಕೈ ಜಾರಿದಂತೆ 'ನಾನಿರುವುದೇ ಹೀಗೆ' ಎನ್ನುವುದರಲ್ಲಿನ  'ಹೀಗೆ'ಯ ವ್ಯಾಖ್ಯಾನ ಬದಲಾಗುತ್ತದೆ. ಇದೇ ಬೆಳವಣಿಗೆ ಅಲ್ವೇ?!

'ಕಲಿಯುವ ಮನಸಿದ್ದರೆ ನಿಮಗೆ ಕಲಿಸುವುದು ಕಲ್ಲಿನ ಗೊಂಬೆ '. ಇದು ಒಂದೆರಡು ವರ್ಷಗಳ ಹಿಂದೆ ಹಿರಿಯರೊಬ್ಬರು ಹೇಳಿದ ಮಾತು. ಇದು ನನ್ನ ಮೇಲೆ ಬೀರಿದ ಪ್ರಭಾವ ಅಗಾಧ. ಇದು ನನ್ನಿಂದ ಅಸಾಧ್ಯ ಎಂಬ ಭಾವ ಕಾಡಿದಾಗಲೆಲ್ಲಾ ಈ ಕಿವಿಮಾತು ಕೈ ಹಿಡಿದು ನಡೆಸಿದ್ದದ್ದುಂಟು. ಹೀಗೆ ಮುಂದೆ ನಡೆದದ್ದರಿಂದ ನಾನೇ ಅಚ್ಚರಿಪಡುವಂತೆ ಬೆಳೆದದ್ದುಂಟು! ಇಂತಹ ಬೆಳೆವು ಅದೆಷ್ಟು ಸಂತಸಕ್ಕೆ ಕಾರಣವಾದರೂ ಅದರಲ್ಲಿ ನಾನಂದುಕೊಂಡ 'ನನ್ನತನ' ಚೂರು ಚೂರೇ ಅಳಿಯುವ ನೋವು ಕೆಣಕದೆ ಉಳಿಯುವುದಿಲ್ಲ.

ಈ ಅಸ್ತಿತ್ವದ ಹುಡುಕಾಟ ನಿರಂತರವಾದದ್ದು. ಎಳವೆಯ ಅರಿವೆ ಜಾರಿದ ಹಾಗೆ ಹಿರಿತನದ ಉಡುಗೆ ಮೈಯನ್ನೇರುವುದು, ಮಗು ಮುಗ್ಧತೆಯನ್ನು ಕಳೆದುಕೊಳ್ಳುತ್ತಾ ಬದುಕನ್ನು ಕಲಿಯುವಂತೆ!! ಬೆಚ್ಚಗಿನ ಹಾಲಿಗೆ ಕಾಫಿ ಪುಡಿಯನ್ನು ಬೆರೆಸಿ ಕಾಫಿಯ ಆಸೆಗೆ ಹಾಲನ್ನು ಕಳೆದುಕೊಳ್ಳುವುದೇ ಬದುಕು, ಹಾಲಿನ ಮೇಲಿನ ಒಲವು ಹೆಚ್ಚಾಗಿ ಅಲ್ಲೇ ಇರಿಸಿದರೆ ಕೆಟ್ಟು ಹೋದೀತು! ನಾವು ಸಹ ನಿಂತರೆ ಕೆಟ್ಟು ಹೋದೇವು ಎಂದುಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡು ಅತ್ಯುತ್ತಮಗಳ ಹಿಂದೆ ದೌಡಾಯಿಸುತ್ತೇವೆ. ಈ ಓಟದಲ್ಲಿ ನೆನ್ನೆ ಕಣ್ಣೊಳಗೆ ನೇಯ್ದಿಟ್ಟ ಕನಸುಗಳ ಚಾದರದ ಬಿಸುಪು ಎಲ್ಲೋ ಕೈ ಜಾರುತ್ತದೆ, ಅಕ್ಕರೆಯಿಂದ ಎತ್ತಿಟ್ಟ ನಿರೀಕ್ಷೆಗಳೆಲ್ಲಾ ಸುಳಿವೇ ಸಿಗದ ಹಾಗೆ ಕಾಣದಾಗುತ್ತವೆ. ಅದೇ ಹೊತ್ತಿಗೆ ಖಾಲಿಯಾದ ಜೋಳಿಗೆಯಲ್ಲಿ ಅನುಭವದ ಕೂಸು ಬೆಳೆಯತೊಡಗುತ್ತದೆ, ಬದುಕಲು ಕಲಿಸುತ್ತದೆ. ಈ ಹೊತ್ತಲ್ಲಿ ಹೊಸ-ಹೊಸ ಕನಸುಗಳು, ಆಸೆಗಳು, ಆಸರೆಗಳು ಎದೆಗೆ ಲಗ್ಗೆಯಿಡುತ್ತವೆ, ಅವುಗಳಲ್ಲಿ ಒಂದಷ್ಟು ಬದುಕಾದರೆ, ಮತ್ತೊಂದಿಷ್ಟು ಬವಣೆಯಾಗುತ್ತದೆ, ಉಳಿದದ್ದು ಮರೆವಾಗುತ್ತದೆ!


ದಿನಾ-ದಿನಾ ನೇಸರನೆದ್ದಾಗ ಹೊಸಬರಾಗಿ ಏಳುವ ನಾವು ನಿನ್ನೆಯ ಸೀರೆ ಬದಿಗಿರಿಸಿ, ಇಂದಿಗೆ ಒಪ್ಪುವ ದಿರಿಸನ್ನು ತೊಟ್ಟುಕೊಳ್ಳುವಾಗ ನಿನ್ನೆಯ ಸೀರೆಯನ್ನು ಇಷ್ಟ ಪಟ್ಟ ನಾನು ಅಳಿದುಹೋಗಿಲ್ಲವೇ? ಪ್ರೇಮ ಪತ್ರಗಳ ಓದಿ ಎದೆಯೆಲ್ಲಾ ಗುಲಾಬಿಯಾಗಿಸಿಕೊಂಡವಳು ಇಂದು ಕಂಬನಿ ಚೆಲ್ಲುವಾಗ ಗುಲಾಬಿ ಹೃದಯವನ್ನು ಕಳೆದುಕೊಳ್ಳಲಿಲ್ಲವೇ? ಬೆಚ್ಚಗಿನ ಸಂಗಾತಿಯ ಎದೆಗೊರಗುವಾಗ ತವರಿಗೆ ಮಗಳು ದೂರವಾಗಲಿಲ್ಲವೇ? ಆಸೆಗಳ ಬದಿಗೊತ್ತಿ ಮಗನ ಹೆಗಲಿಗೇರಿಸಿದಾಗ ಅಪ್ಪನ ಕನಸು ಕಳೆದು ಹಗಲಾಗಲಿಲ್ಲವೇ? ಗಂಡನ ಕೆಲಸ ಕೈ ಕೊಟ್ಟಾಗ ಮಡದಿಯೂ ಬದುಕ ಬಂಡಿಗೆ ಹೆಗಲಾದಾಗ ಅಂಗೈಯ ಮೃದುತ್ವ ಮರೆಯಾಗಲಿಲ್ಲವೇ? ಕಳೆವೆರಡು ಜೊತೆಯಾದಾಗ ಕೂಡಬೇಕಂತೆ, ಹಸಿವು ಕಳೆದುಕೊಂಡ ಮಗು ಮೊಗದಲ್ಲಿ ಕಣ್ಣೀರು ಕಳೆದು ಮುಗುಳ್ನಗು ಕೂಡುವ ಹಾಗೆ, ನಿದ್ದೆ ಕಣ್ಸೇರುವ ಹಾಗೆ! ಬೆವರು ಸುರಿಸಿ ದುಡಿವ ಜೀವಕ್ಕೆ ಹಸಿವು ಕಳೆದಾಗ ಸಂತೃಪ್ತಿ ಕೂಡುವ ಹಾಗೆ! ಅಮಾವಾಸ್ಯೆಯ ರಾತ್ರಿ ಕಳೆದ ಮೇಲೆ ಆಗಸ ದಿನ ಕಳೆದ ಹಾಗೆ ಒಂದೊಂದಾಗಿ ಚಂದ್ರನ  ಚೂರನ್ನು ತನ್ನ ಮೇಲೆ ಸೇರಿಸಿಕೊಳ್ಳುವ ಹಾಗೆ! ಸುಡು ಬಿಸಿಲ ನಡು ಮಧ್ಯಾಹ್ನ ಕಳೆದಾಗ ತಾಪ ಇಳಿದು ತಂಪು ಸಂಜೆ ತೂರಿಕೊಳ್ಳುವ ಹಾಗೆ!


ಅಳಿದು ಹೋದ ಪಾಲು ಅಷ್ಟೇ ತೂಕದ ಇನ್ನೇನೋ ಒಂದಷ್ಟನ್ನು ಬಡ್ಡಿಯ ಜೊತೆಗೆ ಸೇರಿಸಿಕೊಂಡು ಬೆಳೆಯುತ್ತದೆ.  ನೆನ್ನೆ  ನಾನಿದ್ದೇನೆ ಎಂದ 'ನಾನು' ಇಂದು ಹೇಳ ಹೆಸರಿಲ್ಲದ ಹಾಗೆ ಮರೆಯಾಗುತ್ತದೆ. ಅದರ ಜಾಗದಲ್ಲಿ ಹೃದಯ  ಇನ್ನೇನನ್ನೋ ಹುಡುಕಿಕೊಂಡು ಮನಸಿಗೊಪ್ಪಿದ ಅಂಶಗಳನ್ನೆಲ್ಲಾ ಗುಡ್ಡೆ ಹಾಕಿ ಹೊಸ 'ನಾನನ್ನು' ಸೃಷ್ಟಿಸಿಕೊಳ್ಳುತ್ತದೆ. ಇಷ್ಟಪಟ್ಟು ಹೊಸ ಅಸ್ತಿತ್ವವನ್ನು ಹುಡುಕಿಕೊಂಡ ಮೇಲೂ ಮನಸ್ಸಿಗೆ ಹಿಂದಿನ ಉಳಿವುಗಳ ಮೇಲೆ ವಿಶೇಷ ವ್ಯಾಮೋಹ. ಆಗಾಗ ಉಳಿಕೆಗಳನ್ನು ರಾಶಿ ಹಾಕಿ ಇನ್ನು ಕಳೆದುಹೋಗದಿರಲೆಂದು ಒಲವಿನಿಂದ ಬದಿಗೆತ್ತಿಡುತ್ತದೆ!! ಕೊನೆಗೆ ಉಳಿಕೆಗಳೆಲ್ಲಾ ಸೇರಿಕೊಂಡು ನಾವು ನಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವೊಂದನ್ನು ರೂಪಿಸಿಕೊಳ್ಳುತ್ತೇವೆ. ಹೊಸತು  ಸೇರಿಕೊಂಡದ್ದರಲ್ಲಿ ಅಳಿದು ಹೋದದ್ದೆಲ್ಲಾ ಬೆಳವಣಿಗೆ ಅಲ್ವೇ?


ಖಾಲಿ ಹಾಳೆಯ ಮೇಲೆ ಬರೆದ ಚಿತ್ರದ ಗೆರೆಗಳನ್ನು ಕಲಾವಿದನಾಗುವ ಹಾದಿಯಲ್ಲಿ ಅದೆಷ್ಟೋ ಬಾರಿ ಅಳಿಸಿ ಮತ್ತೆ -ಮತ್ತೆ ಬರೆಯುತ್ತಾನೆ.ಸಮಯ ಕಳೆದಂತೆಲ್ಲಾ ಅಳಿಸಿಹೋಗುವಂತಹ ಗೆರೆಗಳನ್ನು ಚಿತ್ರಕಾರ ಬರೆಯುವುದೇ ಇಲ್ಲ! ಅನುಭವಗಳು ಹೆಚ್ಚುತ್ತಾ ಹೋದಂತೆ ಅಳಿಸಬೇಕಾದ ಅಥವಾ ಅಳಿಸಬೇಕೆನ್ನುವ ಗೆರೆಗಳು ಕಲಾವಿದನ ಕುಂಚದಿಂದ ಹಾಳೆಯ ಮೇಲೆ ಮೂಡುವುದೇ ಇಲ್ಲ. ಹಾಗೇನಾದರು ಮೂಡೀತೆಂದರೂ ಕಲಾವಿದ ಅದನ್ನು ತನ್ನ ಚಿತ್ರದ ಭಾಗವನ್ನಾಗಿಸುವ ಕಲೆಯನ್ನು ಸಿದ್ಧಿಸಿಕೊಳ್ಳುತ್ತಾನೆ. ಬದುಕೂ ಹೀಗೆಯೇ, ನಾವು ಬೆಳೆದಂತೆ ಅಳಿಸಬೇಕೆಂಬ ಘಟನೆಗಳು ನಗಣ್ಯವೆನಿಸತೊಡಗುತ್ತವೆ. ಅನುಭವದ ಹೊದಿಕೆಯ ಮೇಲೆ ' ಈ' ಅಳಿಸಬೇಕಾದದ್ದು-ಉಳಿಸಬೇಕಾದದ್ದು; ಎಲ್ಲವೂ ಚಿತ್ತಾರವಾಗಿ ರಾರಾಜಿಸುತ್ತವೆ.

ಇತ್ತೀಚೆಗೆ ನೋಡಿದ 'ರೀಲ್' ಒಂದರಲ್ಲಿ ಆಗ ತಾನೆ ಜನ್ಮದಿನ ಆಚರಿಸಿದ ಹುಡುಗಿಯೊಬ್ಬಳು ಹೇಳುತ್ತಾಳೆ, ವರುಷ ಹೆಚ್ಚಿತೆಂದು ಅನಿಸುವುದೇ ಇಲ್ಲ, ನಾನು ನಿನ್ನೆಯಂತೆಯೇಇಂದೂ ಇರುವೆನಲ್ಲಾ ಎಂದು. ಹಾಗೆನ್ನುತ್ತಾ ಅದಕ್ಕೊಂದು ಕಾರಣವನ್ನೂ ಹೇಳುತ್ತಾಳೆ, ಇಂದಿಗೆ ಇಪ್ಪತ್ಮೂರಾದರೂ ನಿನ್ನೆಯ ಇಪ್ಪತ್ತೆರಡರ ತರುಣಿ ಇನ್ನೂ  ನನ್ನೊಳಗಿದ್ದಾಳೆ, ಅಂದಿನ ಎಂಟರ ಪೋರಿಯೂ ನನ್ನೊಳಗೇ ಇದ್ದಾಳೆ. ಕಳೆದ ಎಲ್ಲಾ ವರುಷಗಳನ್ನು ನಾನು ಕಳೆದುಕೊಂಡದ್ದಲ್ಲ, ನನ್ನೊಳಗೆ ಎಳೆದುಕೊಂಡದ್ದು ಎನ್ನುತ್ತಾಳೆ. ಇದನ್ನು ಕೇಳಿದಾಗ ಪ್ರಶ್ನೆಯೊಂದು ಕಾಡಿತು, ಹಾಗಾದರೆ ಬೆಳೆದನು ಎನ್ನುವಾಗ ಉಳಿಕೆಗಳನ್ನು ಗುಡ್ಡೆ ಹಾಕಿದಂತಾಯಿತೇ, ಅಥವಾ  ನಮ್ಮ ಬದುಕಿನ ಪ್ರತಿ ಘಳಿಗೆಯನ್ನೂ ನಮ್ಮೊಳಗೆ ಸೇರಿಸಿ ಕೂಡಿಹಾಕಿದಂತಾಯಿತೇ?!

ಉತ್ತರ ನಮ್ಮೊಳಗೇ ಉಂಟಲ್ವಾ? ಪ್ರತಿಯೊಂದನ್ನು ನಮ್ಮೊಳಗೆ ಉಳಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ಆಗಾಗ ಒಂದಿಷ್ಟು ನೆನಪನ್ನು- ಬದುಕನ್ನು ನಮ್ಮ ಎದೆಯೊಳಗೆ ಕೂಡಿಹಾಕುತ್ತೇವೆ. ಅದರಲ್ಲಿ ಚೂರು ಹೇಳಹೆಸರಿಲ್ಲದಂತೆ ಮರೆಯಾದರೆ ಮತ್ತೊಂದು ಚೂರು ಒಪ್ಪವಾಗಿ ವ್ಯಕ್ತಿತ್ವದ ಅಲಂಕಾರವಾಗುತ್ತದೆ.

ಬೆಳೆದೆನು ಎನ್ನುವಾಗ, ಕೆಲವೊಮ್ಮೆ ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳುವ ಮನೋಭಾವ ನಮ್ಮೊಳಗೆ ಹುಟ್ಟಿಕೊಳ್ಳುತ್ತದೆ ಎಂದರೆ ತಪ್ಪಾಗಲಾರದು. ಬದುಕಿನ ಹಾದಿಯಲ್ಲಿರುವ ಮುಳ್ಳುಗಳನ್ನು ಹಾಗೂ ಅದರ ಗಾಯಗಳನ್ನು ಸಹಜವೇ ಎನ್ನುತ್ತಾ ಸ್ವೀಕರಿಸಿದಾಗ, ಹಾಗಾಯಿತು- ಹೀಗಾಯಿತು ಎನ್ನುತ್ತಾ ಹಲುಬುವ ಬದಲು ಇನ್ನೇನು ಮಾಡಿದರೆ ಈ ಪರಿಸ್ಥಿತಿಯಿಂದ ನಾನು ಹೊರಬಂದೇನು ಎಂದು ಯೋಚಿಸಲು ಪ್ರಾರಂಭಿಸುತ್ತೇವೆ. ಜನರು ಹೀಗಿದ್ದರೆ ಚೆನ್ನ ಎನ್ನುವ ಮನೋಭಾವ ಕಳೆದುಹೋಗಿ ಜನರೂ ಹೇಗಿದ್ದರೂ ನಾನು ಹೀಗಿರಬೇಕು ಎನ್ನುತ್ತಾ ಒಂದಿಷ್ಟು ಮೌಲ್ಯಗಳನ್ನು ಬದುಕಿಗೆ ತೂಗು ಹಾಕಿದರೆ ಅಲ್ಲಿರುವುದು ನೆಮ್ಮದಿಯ ಬಾಳ್ವೆ. ಹೀಗಿರುವ ವ್ಯಕ್ತಿತ್ವವನ್ನು ರೂಢಿಸಿಕೊಂಡರೆ ವೃದ್ಧರೂ ಜನರ ಕಣ್ಣಲ್ಲಿ ವಿಶಾಲ ಹಾಗೂ ಔದಾರ್ಯ ವ್ಯಕ್ತಿಯಾಗಿ ಗೌರವಾನ್ವಿತ ವ್ಯಕ್ತಿ ಎನಿಸಿಕೊಳ್ಳುತ್ತಾರೆ. 

ಕ್ಷಣ ಕ್ಷಣಕ್ಕೂ ಬೆಳೆಯುವ ಪರಿ ಸೂರ್ಯನ ಸುತ್ತು ಹಾಕುವ ಭೂಮಿಯ ಪರಿಭ್ರಮಣೆಯ ಹಾಗೆ. ಯಾರಿಗೂ ತಿಳಿಯದಂತೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. 

ಖಾಲಿಯಾದರೂ ಎಲ್ಲವನ್ನೂ ತನ್ನಲ್ಲಿರಿಸಿಕೊಳ್ಳುವ ಆಕಾಶದ ಹಾಗೆ ಬೆಳವಣಿಗೆ!! ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತಿನಂತೆ ಹೆಚ್ಚು ಹೆಚ್ಚು ಪಡೆದಂತೆಲ್ಲಾ ಅಷ್ಟು ಖಾಲಿಯಾಗಿದ್ದೇವೆ ಎಂದರ್ಥ. ಆಧ್ಯಾತ್ಮಿಕವಾಗಿಯೂ ಮಾನವ ಪರಿಪೂರ್ಣನಾಗುವುದು ಖಾಲಿಯಾದಾಗ ಅಲ್ಲವೇ?!



ಉಳಿದುಕೊಳ್ಳಬೇಕೆಂಬ ತವಕದಿಂದ ಪ್ರತಿಕ್ಷಣವೂ ಹೋರಾಡುವ ನಾವು ಬೆಳೆಯುವ ಪ್ರತಿ ಘಳಿಗೆಯಲ್ಲೂ ಅಳಿಯುತ್ತಿರುವುದು ನಮ್ಮ ಕಳವಳವಾಗುವುದೇ ಇಲ್ಲ. ಆದರೂ ಕೊಳೆಯುವುದಕ್ಕಿಂತ ಅಳಿದು ಬೆಳೆಯುವುದೇ ಚೆನ್ನಲ್ಲವೇ? ಶೂನ್ಯದ(೦) ಹಾಗೆ ಸಂಪೂರ್ಣವಾಗುವುದು ಸೊಗಸಲ್ಲವೇ?!


bodhivrukshaepaper.com

-ಪಲ್ಲವಿ ಕಬ್ಬಿನಹಿತ್ಲು

Comments

Popular posts from this blog

DREAMS…

ಕಾಫಿಯ ಕಪ್ಪು

ಬಿಳಿ ಬದುಕು...