ಬೆಳಕೆಂಬ ಭರವಸೆ ಬದುಕಿನೆಡೆಗೆ...



ಈ ಬಾರಿ ದೀಪಾವಳಿಯ ಸಂಜೆ ಹಣತೆ ಹಚ್ಚಿದಾಗ ಅದು ಕತ್ತಲನ್ನು ಹೇಗೆ ತನ್ನೊಳಗೆ ನುಂಗಿಕೊಳ್ಳುತ್ತದೆ ಎಂಬ ಪ್ರಶ್ನೆ ಸುಳಿದು ಮರೆಯಾಯಿತು... ಈ ಕತ್ತಲು-ಬೆಳಕಿನ ಕಣ್ಣು ಮುಚ್ಚಾಲೆಯಾಟವನ್ನು ಎಷ್ಟು ಬಾರಿ ಕಂಡರೂ ಅದು ನನ್ನನ್ನು ಹೊಸ-ಹೊಸ ರೂಪದೊಂದಿಗೆ-ರೀತಿಯೊಂದಿಗೆ ಬೆರಗುಗೊಳಿಸುವುದರಲ್ಲಿ ಹಿಂದುಳಿಯದು.

ಅದಕ್ಕೇ ಇರಬೇಕು, ದೀಪಾವಳಿ, ಎಂದಿದ್ದರೂ ನನಗೆ ಎಲ್ಲದಕ್ಕಿಂತಲೂ ಆಪ್ತವೆನಿಸುವ, ವಿಶೇಷವೆನಿಸುವ, ಎಲ್ಲದಕ್ಕಿಂತಲೂ ಹೆಚ್ಚಾಗಿ ನನ್ನದೆನಿಸುವ ಹಬ್ಬ... ಇದಕ್ಕೆ ಇನ್ನೊಂದು ಕಾರಣ, ಈ ಬೆಳಕಿನ ಹಬ್ಬದಲ್ಲಿ ಒಂದೆಡೆ ಕತ್ತಲನ್ನು ಸೀಳುವ ಬೆಳಕು ಆಕರ್ಷಕವಾಗಿ ಕಂಡರೆ, ಮತ್ತೊಂದೆಡೆ ಆ ಬೆಳಕಿಗೆ ಕರಗುವ ಕತ್ತಲು ಹೆಚ್ಚು ಆಕರ್ಷಕ ಎಂದೆನಿಸುವ ದ್ವಂದ್ವ ಕಾಡುವುದಿರಬೇಕು. ಇಷ್ಟಲ್ಲದೆ ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ  ಜ್ಞಾನದೆಡೆಗೆ ಎಂದು ಕೂಗಾಡುವ ನಮಗೆ, ಈ ಹಬ್ಬವು ನಮ್ಮೊಳಗೇ ಇರುವ ಕತ್ತಲನ್ನೂ ಅಜ್ಞಾನವನ್ನೂ ಒಪ್ಪಿಕೊಳ್ಳುವ ಛಾತಿಯನ್ನು ಕೊಡುತ್ತದೆ ಎಂದು ನನಗನಿಸುತ್ತದೆ. ಅಹಂಕಾರವನ್ನು ಸದ್ದಿಲ್ಲದೆ ಸುಡುವ ಜ್ಯೋತಿ, ನಮಗೆ ಸಾತ್ವಿಕತೆಯ ಬೆಳಕಿನ ರುಚಿಯನುಣಿಸುತ್ತದೆ. 

ಆದರೆ ಈ ಬಾರಿ ಕೊರೆದ ಯೋಚನೆಯೆಂದರೆ, ಬದುಕಿನಲ್ಲಿ ಬೆಳಕಿರಬೇಕು ಎಂಬುವುದು ಒಪ್ಪುವ ಮಾತಾದರೂ ಬದುಕೇ ಬೆಳಕಾಗಬಾರದೇಕೆ? ಎಂಬುವುದು. 

ಒಳಗೆಲ್ಲ ಕತ್ತಲನ್ನು ತುಂಬಿಕೊಂಡು ಅಲ್ಲೊಂದು ಇಲ್ಲೊಂದು ದೀಪವನ್ನು ಹಚ್ಚಿ ಬೆಳಕು ತುಂಬಿಕೊಳ್ಳುವುದು ತಪ್ಪಲ್ಲವಾದರೂ ಈ ಬೆಳಕು ಎಷ್ಟು ದಿನ ನಮ್ಮೊಳಗೆ ಉಳಿದೀತು ಎಂಬುವುದು ನನ್ನ ಪ್ರಶ್ನೆ. ಈ ಹವ್ಯಾಸ ಹೇಗೆಂದರೆ, ಒಂದಷ್ಟು ಪುಸ್ತಕ ಓದಿ, ವಿಡಿಯೋಗಳನ್ನು ನೋಡಿ ನಮ್ಮೊಳಗೆ ಸ್ಪೂರ್ತಿ ಹುಟ್ಟಿಸಿದಂತೆಯೇ... ಹೆಚ್ಚೆಂದರೆ ಒಂದೋ ಎರಡೋ ದಿನ ಆ ಮನಸ್ಥಿತಿ ಉಳಿದುಕೊಳ್ಳುತ್ತದಷ್ಟೇ, ಮತ್ತೆ ನಾಯಿ ಬಾಲ ಎಂದಿದ್ದರೂ ಡೊಂಕು ಎನ್ನುವುದೇ ಪರಮಸತ್ಯವಾಗುತ್ತದೆ. ಆದರೆ ಆ ಸ್ಪೂರ್ತಿ ನಮ್ಮೊಳಗೇ ಹುಟ್ಟಿಕೊಂಡಿತೆಂದರೆ?? ಹತ್ತು ಹಣತೆಯನ್ನು ಹಚ್ಚುವ ಬದಲು ನಮ್ಮೊಳಗೆ ಸ್ವಂತಿಕೆಯ ಬೆಳಕಿದ್ದರೆ?

ಈಗೇನಿದ್ದರೂ ನಮ್ಮೊಳಗೆ ಉರಿಯುತ್ತಿರುವ ಹಣತೆಗಳಲ್ಲಿ ತಮ್ಮ-ತಮ್ಮ ಅನುಕೂಲತೆಗಳಿಗೆ ಅನುಗುಣವಾಗಿ ಅವರಿವರು ಹಚ್ಚಿದ ಹಣತೆಗಳದ್ದೇ ಮೇಲುಗೈ! ರಾಜಕೀಯಕ್ಕೊಂದು, ಸ್ತ್ರೀ-ಪುರುಷ ಸಮಾನತೆಯ ಹೆಸರಿನಲ್ಲಿ ಇನ್ನೊಂದು, ಮಾನವತಾವಾದಕ್ಕೆ ಮತ್ತೊಂದು, ಜಾತಿವಾದ, ಸತ್ಯ-ಮಿಥ್ಯಗಳದ್ದು, ಸೌಂದರ್ಯದ್ದು, ದೌಲತ್ತಿನದ್ದು, ಅಂತಸ್ತಿನದ್ದು, ಮೇಲು-ಕೀಳು, ತಪ್ಪು-ಒಪ್ಪುಗಳದ್ದು, ವಿಚಾರಗಳದ್ದು ಹೀಗೆ ಹತ್ತಾರು ಹಣತೆಗಳೇ ತುಂಬಿಹೋಗಿದೆ ನಮ್ಮೊಳಗಲ್ಲಿ! ಈ ಅಂಗೈಯೊಳಗೆ ಜಗತ್ತನ್ನು ಹಿಡಿದಿಡುವ ಕಾಲಘಟ್ಟದಲ್ಲಿ ಇಂತಹ ಹತ್ತಾರು ಹಣತೆಗಳನ್ನು ಹಚ್ಚುವುದು ಕಷ್ಟದ ಕೆಲಸವಲ್ಲ. ಒಂದು ಕ್ಲಿಕ್ ನಲ್ಲಿ ಏನನ್ನೂ ಉಳಿಸುವ-ಅಳಿಸುವ ಶಕ್ತಿಶಾಲಿ ಯಂತ್ರಗಳ ಸಹಾಯದಿಂದ ಹಣದ ಹೊಳಪನ್ನು ಕಂಡವರು ನಮ್ಮನ್ನು, ನಮ್ಮ ಯೋಚನೆಗಳನ್ನು, ನಮ್ಮ ಬದುಕನ್ನು ಕೈಗೊಂಬೆಯಾಗಿಸುತ್ತಿದ್ದಾರೆ ಎನ್ನುವುದು ಕಟು ಸತ್ಯ. ಅವರು ಹಚ್ಚಿದ ಹಣತೆಗಳಿಗೆ ಒಂದರೆಕ್ಷಣವೂ ಅಂತರವಿಲ್ಲದೆ ತೈಲವನ್ನು ತೊಟ್ಟು-ತೊಟ್ಟಾಗಿ ಸುರಿಯುತ್ತಲೇ ಇರುತ್ತಾರೆ. ಆ ಹಣತೆ ತಾನಾಗಿ ನಂದಿ ಹೋಗದು, ನಾವು ನಂದಿಸುವವರೆಗೆ...

ಇದೀಗ ಚರ್ಚಿಸಲೇಬೇಕಾದ ವಿಚಾರವೇ ಹೌದು. ಇತ್ತೀಚೆಗೆ ಹುಡುಗಿಯೊಬ್ಬಳು ತಾಯಿ ಕೆಲಸ ಮಾಡಿಲ್ಲವೆಂದು ಆಕ್ಷೇಪಿಸಿದ್ದಕ್ಕೆ ತನ್ನ ಬದುಕನ್ನೇ ಕೊನೆಗೊಳಿಸಿದ ವಿಚಾರ ನಿಮಗೆ ತಿಳಿದಿರಬಹುದು, ಅಲ್ಲದೆ ಸಿನೆಮಾ ತಾರೆಗಳ ಬದುಕಿನ ಶೈಲಿಯ ಕಡೆಗಿನ ಅಂಧ ಮೋಹಕ್ಕೆ ಮರುಳಾಗಿ ಹೊಸ ಬದುಕಿಗೆ ಕಾಲಿಡಬೇಕಾದ ಜೋಡಿ ಜೀವ ಕಳೆದುಕೊಂಡದ್ದೂ ಹೊಸ ವಿಚಾರವೇನಲ್ಲ... ಇದಕ್ಕೆಲ್ಲ ಕಾರಣವಾದರೂ ಏನೆಂಬುದನ್ನು ಚಿಂತಿಸಿದಾಗ ನನ್ನ ತಿಳುವಳಿಕೆಗೆ ನಿಲುಕಿದ್ದು ಆಘಾತಕಾರಿ ಎನಿಸಿತು;  ಮನಸ್ಸು ತೆರೆದುಕೊಂಡಾಗ ಬದುಕು, ಜಗತ್ತು ನಿಮ್ಮೆಡೆಗೆ ತೆರೆದುಕೊಳ್ಳುತ್ತದೆ ಎನ್ನುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ಕಂಪೆನಿಗಳ ಉತ್ಪನ್ನಗಳು ನಿಜ ಜೀವನದಲ್ಲಿ ಅಸಾಧ್ಯವಾದ ತೋರಿಕೆಯ ಬದುಕನ್ನು ನಮ್ಮ ಮುಂದಿರಿಸಿ ಅವರ ಗಳಿಕೆಯ ಜಾಡಿಯೊಳಗೆ ನಮ್ಮನ್ನು ಇಂಚಿಂಚಾಗಿ ಇಳಿಸಿಕೊಳ್ಳುತ್ತಾರೆ. 



ಇದು ಹದಿನೈದು ವರ್ಷಗಳ ಹಿಂದೆ ಇವುಗಳಿಲ್ಲದೆ ಬದುಕಿದ ಜನರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿರುವಾಗ, ಇದರೊಳಗೇ ಬದುಕು ಎಂಬ ಕಾಲಘಟ್ಟದಲ್ಲಿ ಅರಿವು ಪಡೆದ ಇಂದಿನ ತಲೆಮಾರಿನ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಬಲ್ಲದು ಎಂಬುವುದನ್ನು ಊಹಿಸಿಕೊಳ್ಳಬಹುದು. ಎರಡು ವರ್ಷಗಳ ಹಿಂದೆ ಸ್ತ್ರೀ ಶೋಷಣೆ-ಸಬಲೀಕರಣದಂತಹ ಹೆಸರಲ್ಲಿ ನಾನು ಸಹ ಗಂಡಸರೆಲ್ಲಾ ಕೆಟ್ಟವರು ಎಂಬ ಭಾವನೆಯನ್ನು ಬೆಳೆಸಿಕೊಳ್ಳತೊಡಗಿದ್ದೆ... ಹೊರ ಜಗತ್ತಿನ ಪರಿಚಯ ಅಷ್ಟಿಷ್ಟಾದ ಮೇಲೆಯೇ ಇಂತಹ ಸ್ತ್ರೀವಾದದ ಕನ್ನಡಕವನ್ನು ತೆಗೆದಿಟ್ಟದ್ದು. ಇಂತಹ ಪ್ರಭಾವಶಾಲಿ ಪ್ರಭಾವಗಳ (ದುಷ್)ಪರಿಣಾಮಗಳ ಕಾರಣದಿಂದ ಹುಟ್ಟಿಕೊಳ್ಳುವ ಮನೋರೋಗಗಳಾದ ಖಿನ್ನತೆ, ಕೀಳರಿಮೆಯಂತಹ ಖಾಯಿಲೆಗಳು ಯುವ ಮನಸುಗಳನ್ನು ಗೆದ್ದಲಿನಂತೆ ಟೊಳ್ಳಾಗಿಸುತ್ತದೆ.ಇಂತಹ ಸಂದರ್ಭಗಳನ್ನು ನೋಡಿಯೂ ಸಹ ನಮ್ಮ ಕಾಲದಲ್ಲಿ ಡಿಪ್ರೆಶನ್‍ನಂತಹ ಖಾಯಿಲೆಗಳು ಇದ್ದಿರಲಿಲ್ಲ, ಇಂತಹ ಖಾಯಿಲೆಗಳಿಗೆ ಅಸ್ತಿತ್ವವೇ ಇಲ್ಲ ಎನ್ನುವವರಿಗೆ ಏನನ್ನೋಣ?!



ಈ ‘ಇಂಟರ್‍ನೆಟ್’ ಇಲ್ಲದ ಸಾಮಾನ್ಯ ಬದುಕಿನಲ್ಲಿ ಕಲ್ಪನೆಗೂ ನಿಲುಕದಷ್ಟು ಜನರನ್ನು, ಸಾಮಾಜಿಕ ಜಾಲತಾಣಗಳು ನಮ್ಮ ಮುಂದಿಟ್ಟು ಅಷ್ಟು ಜನರೊಂದಿಗೆ, ಅವರ ಯೋಚನೆಗಳೊಂದಿಗೆ, ನಮ್ಮನ್ನು ನಾವು ಹೋಲಿಸಿಕೊಂಡು ನಮ್ಮ ಬಗೆಗೆ ಕೀಳರಿಮೆ ಬೆಳೆಸಿಕೊಳ್ಳುವುದಕ್ಕೆ ಸದ್ದಿಲ್ಲದೆ ಒಪ್ಪಿಸಿಕೊಳ್ಳುತ್ತಿದೆ. ಗಾಜಿಗಿಂತಲೂ ನಾಜೂಕು ಮನೋಧರ್ಮವನ್ನು ಈ ತಲೆಮಾರಿನಲ್ಲಿ ಹುಟ್ಟುಹಾಕಿದೆ. ಆತ್ಮಗೌರವ ಮತ್ತು ಅಹಂಕಾರದ ನಡುವಿನ ತೆಳು ಗೆರೆ ಅಳಿಸಿಹಾಕುತ್ತಿದೆ. ಹೊಂದಿಕೊಂಡು ಬಾಳುವ ಬದುಕೆಂದರೆ ನಾನು ‘ನನ್ನತನ’ವನ್ನು ಕಳೆದುಕೊಂಡ ಹಾಗೆ ಎಂಬ ಭಾವನೆ ಬೇರೂರುವುದಕ್ಕೆ ಶುರುವಾಗಿದೆ. ಈಗೀಗ ಹಬ್ಬದ ಶುಭಾಶಯಗಳು ಸಹ ನಿಮಗೆ ಈ ಇಂಟರ್‍ನೆಟ್‍ನಲ್ಲಿ ಉಳಿಸಿದ್ದ ಫೋಟೊಗಳಿಂದಲೇ ಸಿಕ್ಕಿದ್ದು ಹೆಚ್ಚು ಎನ್ನುವುದನ್ನು ನಾನು ಹೇಳಬೇಕಿಲ್ಲ. 

ಹಾಗೆಂದು ಎಲ್ಲದರಿಂದ ದೂರವಿದ್ದು ಸನ್ಯಾಸ ಸ್ವೀಕರಿಸುವುದು ಸರಿಯೆಂದು ನಾನು ಹೇಳುತ್ತಿಲ್ಲ. ನಮ್ಮ ಆಯ್ಕೆಯ ಸಮಯವನ್ನಷ್ಟೇ ಇಲ್ಲಿ ಕಳೆಯುತ್ತೇವೆ ಎನ್ನುವಷ್ಟಿರುವವರೆಗೆ ಎಲ್ಲವೂ ಸರಿಯೇ, ಅದು ಅತಿಯಾದಾಗಲೇ ವಿಷವಾಗುವುದು. 



ಸೆಲ್ ಫೋನ್ ನ ಸೆಲ್ ಒಳಗಡೆ ಬಂಧಿಯಾಗಿ ಮಾನವನ ಬದುಕಿಗೆ ಫ್ಲಾಶ್‍ಲೈಟ್‍ಗಳೇ ಬೆಳಕು ತೋರುವ ಹಂತ ಬರುವ ಮುನ್ನ ಒಂದಷ್ಟು ಬದಲಾವಣೆಗಳೊಂದಿಗೆ ಈ ಬಾರಿ ನಮ್ಮೊಳಗಿನ ಬೆಳಕನ್ನು ಹುಡುಕಬೇಕಾಗಿದೆ. ಬದುಕಿನಲ್ಲಿ ಬೆಳಕಿರಬೇಕೆಂಬುವುದಕ್ಕೆ ಕಟ್ಟುಬೀಳದೆ ನಮ್ಮೊಳಗಿನ ಬೆಳಕಿನಿಂದ ಬೆಳಗುವುದನ್ನು ಕಲಿಯೋಣ... ಪರಿಚಯದ ಮುಖಗಳು ಕಂಡಾಗ ಮನ ಬಿಚ್ಚಿ ನಗೋಣ, ನೂರು ವರ್ಚುವಲ್ ಗೆಳೆಯರಿಗಿಂತ ಬದುಕಿಗೆ ಜೊತೆಯಾಗುವ ಒಂದಷ್ಟು ಮಿತ್ರರನ್ನು ಸಂಪಾದಿಸೋಣ, ಹೊಸತನ್ನು ಕಂಡಾಗ ಅದರ ಅನುಭೂತಿಯನ್ನು ಅಪ್ಪಿಕೊಳ್ಳೋಣ, ಒಂದಷ್ಟು ಹೊತ್ತು ಈ ಭ್ರಮೆಯ ಆತ್ಮೀಯತೆಯನ್ನು ಬದಿಗಿಟ್ಟು ನಮ್ಮನ್ನು, ನಮ್ಮತನವನ್ನು ಅಪ್ಪಿಕೊಳ್ಳೋಣ...

ನಾನೂ ಸಹ ಅಲ್ಲಲ್ಲಿ ಕೆಲವರು ಹಚ್ಚಿದ್ದ ಹಣತೆಗಳ ಬೆಳಕನ್ನು ನನ್ನೊಳಗೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವಾಗಲೇ ಈ ರೀತಿಯಲ್ಲಿ ನನ್ನ ಅನಿಸಿಕೆಗಳನ್ನು ನಿಮ್ಮ ಮುಂದಿರಿಸಿರುವುದು. ಒಂದರ್ಥದಲ್ಲಿ ಇದೂ ಒಂದು ಹಣತೆಯೇ, ನನಗೆ ಸರಿಯೆನಿಸಿದ್ದನ್ನು ನಿಮಗೂ ಸರಿಯೆನಿಸಬೇಕು ಎಂಬ ವಾದವನ್ನು ಸಾಧ್ಯವಾದ ಮಟ್ಟಿಗೆ ನಿಮ್ಮ ಮುಂದಿಟ್ಟಿದ್ದೇನೆ. ಆದರೆ ಚಿಂತಿಸದೆ, ತರ್ಕಿಸದೆ ಈ ಹಣತೆಗೂ ನಿಮ್ಮೊಳಗೆ ಜಾಗವಿಲ್ಲ ಎಂಬುವುದಕ್ಕೆ ಸೈ ಎನ್ನಬೇಕೋ ಬೇಡವೋ ಎಂಬುವುದು ನಿಮ್ಮ ಆಯ್ಕೆ... 

ಆದರೂ ಕೊನೆಗೊಂದು ಮಾತು, ಈ ಬಾರಿ ದೀಪಾವಳಿಗೆ ಭ್ರಮಾಲೋಕದ ಕತ್ತಲನ್ನು ಕರಗಿಸುವ, ಭರವಸೆಯ ದೀಪವನ್ನು ಸಹಜ ನಾಳೆಗಳಿಗಾಗಿ ಹಚ್ಚೋಣ... 

-ಪಲ್ಲವಿ ಕಬ್ಬಿನಹಿತ್ಲು

WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM

👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE..

-KADUGUSUMA

(ವಿಶೇಷ ಪ್ರಕಟಣೆ:

ಇದೇ ಪ್ರಯತ್ನದಲ್ಲಿ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇವೆ. ನಮ್ಮ ಬ್ಲಾಗ್ ಓದುಗರಲ್ಲಿ ಬರೆಯುವವರೂ ಇದ್ದಾರೆ. ಅವರಿಗಾಗಿಯೇ ಒಂದು ದಿನದ ಪ್ರಕಟಣೆಯನ್ನು ಮೀಸಲಿಡುವ ಪ್ರಯತ್ನ. ಆಸಕ್ತಿ ಉಳ್ಳವರು ತಮ್ಮ ಕನ್ನಡ ಬರಹವನ್ನು 

kadugusumaofficial@gmail.com 

ಗೆ E-Mail   ಮಾಡಬಹುದು. ಆಯ್ದ ಬರಹಗಳನ್ನು ಪ್ರತಿ ಭಾನುವಾರ 'ಓದುಗರ ಕಾಲಂ' ನಲ್ಲಿ ಪ್ರಕಟಿಸುತ್ತೇವೆ.

ಧನ್ಯವಾದಗಳೊಂದಿಗೆ,

-ಕಾಡುಗುಸುಮ)


Comments

  1. 👏👏🙏🙏 superb.. . Akka 🥳🥳

    ReplyDelete
  2. Uttamavad vichar mattu uttam srujanatmaka baravanige.

    ReplyDelete
  3. Tumba chennagide.wish you happy Deepawali.

    ReplyDelete
    Replies
    1. ಧನ್ಯವಾದಗಳು, ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು

      Delete
  4. ಸಮಾಜದ ಸಮಸ್ಯೆ.. ಚಂದದ ವಿಶ್ಲೇಷಣೆ.... ಚೆನ್ನಾಗಿದೆ ಪುಟ್ಟು.....
    ಬೆಳಕಿನ ಹಬ್ಬದ ಶುಭಾಶಯಗಳು...

    ReplyDelete
    Replies
    1. ಧನ್ಯವಾದಗಳು ಅಣ್ಣಾ...ತಮಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು

      Delete

Post a Comment

Popular posts from this blog

DREAMS…

ಕಾಫಿಯ ಕಪ್ಪು

ಬಿಳಿ ಬದುಕು...