ಬಿಳಿ ಬದುಕು...

 



 https://youtu.be/_K0NqvceTKk


"EN LEFKO" (=In White)

 Artist: Natassa Bofiliou (Νατάσσα Μποφίλιου)


 ಈ ಹಾಡು ಅದೇಕೋ ಮನ ಮುಟ್ಟಿತು ... ಕನ್ನಡಕ್ಕೆ ಸಾಧ್ಯವಾದರೆ ಭಾವಾನುವಾದ ಮಾಡಬೇಕೆಂದುಕೊಂಡೆ... ಅದರ ಫಲಶ್ರುತಿ ಈ ಕೆಳಗಿನ ಪ್ರಯತ್ನ...



(ಇಲ್ಲಿ "ಬಿಳಿ" ಯನ್ನು ಶೂನ್ಯ, ಬಣ್ಣ ರಹಿತ, ವ್ಯರ್ಥ ಎಂಬರ್ಥದಲ್ಲಿ ಉಪಯೋಗಿಸಿಕೊಳ್ಳಲಾಗಿದೆ)


*ಬಿಳಿ  ಬದುಕು...*




ಓ, ನನ್ನ ಬಿಳಿ ಬದುಕಿನ ಬಿಳಿಯ ಹಣೆಯ ಬರಹವೇ,

ಕತ್ತಲ ನೆರಳಿನ ಮರೆಯಲ್ಲಿ ಅಡಗುವುದೇಕೆ ನೀನು?

ನಿನ್ನ ಕಂಡ ಕ್ಷಣ ಬದುಕು ಪರದೆಯಂತೆ ಕಣ್ಮುಂದೆ ಸುಳಿದು

ನನ್ನ ಬಿಂಬವೇ ನಿನ್ನ ಬಿಳಿಯ ರಂಗೆಂದುಕೊಳ್ಳುತ್ತೇನೆ!

ಅವಿತುಕೊಳ್ಳದಿರು ಎನ್ನುವ ಧೈರ್ಯವಿದ್ದರೆ, 

ಬೇಯಿಸುತ್ತಿರಲಿಲ್ಲ ಅಂತರಂಗವನ್ನು ಅಸಹಾಯಕತೆಯ ತಾಪ...

ಈ ಮರುಳಿನ ನೆರಳು ಬಿಳಿ;

'ಸುಳ್ಳು' ಅದರ ಅಸ್ತಿತ್ವ!


ಗಡಿಯಾರದ ಮುಳ್ಳು ಸಹ ಕುಣಿಯುತ್ತಿರುವುದು,

ನನ್ನ ಬದುಕಿನ ಮೂಕ ಹಾಡಿಗೇ!!

ಸ್ತಬ್ಧ ಬದುಕಿನ ಮೌನದ ಸಾಲುಗಳನ್ನು

ಇರುವಷ್ಟು ಹೊತ್ತು ಅರಸುತ್ತೇನೆ,

ಮೌನವನ್ನೆಲ್ಲಾ ಶಬ್ದಗಳನ್ನಾಗಿಸುತ್ತೇನೆ,

ಆ ಶಬ್ದಗಳೊಳಗಡಗಿದ ಅರ್ಥವನ್ನು ವಿವರಿಸುವ

ಜೀವವೊಂದಕ್ಕೆ ಹಾತೊರೆಯುತ್ತೇನೆ...

ಆ ವ್ಯಕ್ತಿ ಬಂದು ಶಬ್ದಗಳಿಗೆ ವಿವರಣೆಯಾದಾಗ

ಅವರೇ ನನ್ನ ಭವಿಷ್ಯದ ನಾವಿಕರಾಗಲೆಂದು ಹಂಬಲಿಸುತ್ತೇನೆ,

ನೆನಪುಗಳಿಗೆ ಬೇಡಿ ಹಾಕಲೆಂದು ಬಯಸುತ್ತೇನೆ...


ಆದರೇನಾಯಿತು, ಬಿಳಿ ಬದುಕು ನೂಕುತಿದ್ದೇನಷ್ಟೇ,

ಕಾಪಾಡಿಕೊಳ್ಳಲು ಏನೂ ಉಳಿದಿಲ್ಲ!!


ನನ್ನ ಬಳಿ ಬದುಕಿನಲ್ಲಿರುವುದು ಬಿಳಿ ಹಣೆಬರಹ

ಎಂದುಕೊಳ್ಳುವ 'ಉತ್ಪ್ರೇಕ್ಷೆ'ಯೇ ಸಮಸ್ಯೆ ಎನ್ನುವ

'ಬಣ್ಣದ' ಗೆಳೆಯರ ಮಾತು ನಿಜವೇ!

ಈ 'ಇಲ್ಲದ' ಸಮಸ್ಯೆಗಳಿಗೆ ‌ಸ್ಪಂದನೆಯೂ ಇಲ್ಲ!!

ಸಮಸ್ಯೆಯನ್ನು 'ಇಲ್ಲ'ವಾಗಿಸುವ ಕಾರಣಗಳು ಕಣ್ಮುಂದೆ ನಿಲ್ಲುವಂತಹವಾಗಿದ್ದರೆ

ಇಂದು ಅಂತರಂಗ ಬೇಯುತ್ತಿರಲಿಲ್ಲ!

ಈ ಭಯಕ್ಕೊಂದು ದೇಹದಂತೆ ನಾನೇ ಇರಲು

ಅದರ ಬಣ್ಣವೂ ಮತ್ತದೇ ಬಿಳಿ!!




ನಮ್ಮವರೆನಿಸಿಕೊಳ್ಳುವವರು ಪ್ರೀತಿಸುತ್ತಾರೆ ಎಂದಾದರೆ ಮಾತಾಗಿಸಬಾರದೇನು?

ಅವರು ಹೇಳದಿದ್ದರೆ ಅವರಿಂದ ನಮ್ಮ ಪ್ರೇಮದ ಪಾಲನ್ನು ಕಸಿದುಕೊಳ್ಳುವುದನ್ನಾದರು ಕಲಿಯಬೇಕಂತೆ!

ನಿಜದ ನಿಜವನ್ನು ಅರಿಯಬೇಕೆನಿಸಿದರೆ

ಅದರ ಬಿಸಿಯನ್ನು ಸಹಿಸಿಕೊಳ್ಳುವುದ ಕಲಿಯಬೇಕಂತೆ!

ಆಗಲಾದರೂ ನಮ್ಮ ಮೇಲೆ ನಮಗಿರದ ಕರುಣೆ

ಉಳಿದವರಲ್ಲಾದರೂ ಹುಟ್ಟಿಕೊಂಡೀತು!!

ಎಲ್ಲರಿಗೆ ತಿಳಿದಿರದ ನಿಜ ನಮ್ಮೆದೆಯೊಳಗಿದ್ದಾಗ

ಆಗಿನ ಮೂಕರೋದನೆಯ ಅಬ್ಬರದಿಂದ ಸ್ವರ ಸೀಳಿದರೂ ಯಾರಿಗೂ ತಿಳಿಯದೇ

ವರ್ಷಾನುಗಟ್ಟಲೆ ಉಳಿದುಕೊಳ್ಳುತ್ತದೆ!!

ಇರುವುದೆಲ್ಲವನ್ನು ಕಳೆದುಕೊಳ್ಳುವ ಅವಕಾಶವನ್ನೇ ಕೊಡದಿರುವುದು ನನ್ನ ಹಕ್ಕು;

ಉಳಿದವರ ಆಟದ ಕಿಲಾಡಿಯಾಗದೇ ಉಳಿದುಕೊಳ್ಳುವುದೂ ನನ್ನ ಹಕ್ಕು...

ಅವರ ಮಟ್ಟದಲ್ಲಿ ನಾನಿಲ್ಲವೆಂದು ಕಡೆಗಣಿಸಿದ

ಕಣ್ಣೋಟಗಳನ್ನು ಇನ್ನೂ ಮರೆತಿಲ್ಲ ನಾನು!


ನನ್ನ ನೋಟ ಶೂನ್ಯದಲ್ಲಿ ಕೊನೆಗೊಳ್ಳುವುದೇಕೆ ಎಂದು ಕೇಳಿದವರಿಗೆಲ್ಲಾ

ನಾನು ಎಲ್ಲೆಡೆಯೂ ಹೊರಗಿನವಳಾಗೇ ಉಳಿಯಲು

ಇಷ್ಟ ಪಡುವ ಕಾರಣದಿಂದ ಎನ್ನುತ್ತೇನೆ;

ಹೊರಗುಳಿದಿರುವ ಬೆರಗಿನಿಂದ ಕಂಡಾದರೂ

ನನ್ನನ್ನು ಒಂದಿಷ್ಟು ಇಷ್ಟಪಡಲಿ ಎಂದುಕೊಳ್ಳುತ್ತಾ...



ಆದರೇನಾಯಿತು, ಬಿಳಿ ಬದುಕು ನೂಕುತಿದ್ದೇನಷ್ಟೇ,

ಕಾಪಾಡಿಕೊಳ್ಳಲು ಏನೂ ಉಳಿದಿಲ್ಲ!!


ಭಾವಾನುವಾದ:- ಪಲ್ಲವಿ ಕಬ್ಬಿನಹಿತ್ಲು

Comments

  1. ಭಾವಾನುವಾದ ಬಹಳ ಸುಂದರವಾಗಿ ಮೂಡಿಬಂದಿದೆ 👌👏😍👍

    ReplyDelete

Post a Comment

Popular posts from this blog

THE LONGING…

One-sided!

Winter Inside!