ಭಾಷೆಗೊಂದು ದಿನ

 



ಇಂದು ನವೆಂಬರ್ 1, ಕನ್ನಡ ಭಾಷೆಗೆಂದು ಮೀಸಲಾದ ದಿವಸ. ಭಾಷೆಯ ಆಧಾರದ ಮೇಲೆ ರಾಜ್ಯಗಳು ವಿಂಗಡಣೆಯಾದ ನಂತರ ನಾವು ಕನ್ನಡಿಗರು ಈ ದಿನವನ್ನು ಆಚರಿಸಿಕೊಂಡು ಬಂದಿದ್ದೇವೆ. ಆದರೆ ಇದು ಕೇವಲ ಆಚರಣೆಯಾಗಿಯೇ ಉಳಿದದ್ದು ವಿಪರ್ಯಾಸ. ಅಲ್ಲದೆ ಇದೇ ಮಾತನ್ನು ಬಂಡವಾಳವಾಗಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವವರಿಗೂ ಕಮ್ಮಿಯಿಲ್ಲ.

ಕನ್ನಡದ ವಿಶಿಷ್ಟತೆಯೆಂದರೆ, ಅದರ ವಿಶಾಲ, ಸಮೃದ್ಧವಾದ ಸಾಹಿತ್ಯ ಹಾಗೂ ಅದರ ಸುಂದರ ದುಂಡಾದ ಅಕ್ಷರಗಳೆಂಬುದು ನನ್ನ ಭಾವನೆ. ಕನ್ನಡ ಅಕ್ಷರಗಳನ್ನು ‘ಲಿಪಿಗಳ ರಾಣಿ’ ಎಂದು ಗುರುತಿಸಲಾಗುತ್ತದೆ. ಅಲ್ಲದೆ ಭಾಷೆಯ ಸೌಂದರ್ಯವನ್ನು ಸುಂದರವಾಗಿ ವರ್ಣಿಸಿರುವ ಸಾಲುಗಳಿಗೂ ಕಡಿಮೆಯೇನಿಲ್ಲ. 






( ಈ ಚಿತ್ರವನ್ನು ಫೇಸ್‍ಬುಕ್‍ನ Alva's DOLLU Kunitha ಪುಟದಿಂದ ಬಳಸಿಕೊಂಡಿದ್ದೇವೆ. ಡೊಳ್ಳು ಕುಣಿತದ ಸುಂದರವಾದ ಇನ್ನಷ್ಟು ಚಿತ್ರಗಳನ್ನು ಈ ಲಿಂಕ್ ಬಳಸಿಕೊಂಡು ನೋಡಬಹುದು:Alva's DOLLU Kunitha)





ಭಾಷೆಯು ಸಂಸ್ಕೃತಿಯ ಅವಿಭಾಜ್ಯ ಅಂಗ. ಭಾಷೆ ಅಳಿದರೆ ಅದರೊಂದಿಗೆ ಸಂಸ್ಕೃತಿಯೂ ಹೇಳ ಹೆಸರಿಲ್ಲದಂತೆ ಮರೆಯಾಗಬಹುದು. ಈಗ ಆಂಗ್ಲ ಭಾಷೆ ಅಥವಾ ಹಿಂದಿ ಭಾಷೆ ಹೇರಿಕೆಯೆಂದು ಬೊಬ್ಬಿಡುವ ಬದಲು ಕನ್ನಡವನ್ನು ತಮ್ಮ ದಿನ ನಿತ್ಯದ ಬದುಕಿನಲ್ಲಿ ಬಳಸಿದರೆ ಸಾಕು ಭಾಷೆಯನ್ನು ಉಳಿಸಲು. ಭಾಷೆಯ ಬಳಕೆಯಿಂದ ಮಾತ್ರ ಅದನ್ನು ಉಳಿಸಲು ಸಾಧ್ಯ. ಹಾಗೆಂದು ಬೇರಾವುದೇ ಭಾಷೆಯನ್ನು ಕಲಿಯಬಾರದು ಎಂದು ನಾನು ಹೇಳುತ್ತಿಲ್ಲ, ಹೆಚ್ಚು-ಹೆಚ್ಚು ಭಾಷೆಗಳನ್ನು ಕಲಿತಷ್ಟೂ ಮಾನವನ ಬೌದ್ಧಿಕ, ಮಾನಸಿಕ ಸಾಮರ್ಥ್ಯದಲ್ಲಿ ವೃದ್ಧಿಯಾಗುತ್ತದೆ, ಸಾಂಸ್ಕೃತಿಕವಾಗಿ ಇನ್ನಷ್ಟು ತಿಳಿದುಕೊಳ್ಳಲು, ಬೇರೆ ಸಂಸ್ಕೃತಿಯಲ್ಲಿನ ಒಳಿತನ್ನು ಪಡೆದುಕೊಳ್ಳಲು ಮಾತ್ರವಲ್ಲದೆ, ಭಾಷೇತರರಿಗೂ ನಮ್ಮ ಸಂಸ್ಕೃತಿಯ ಪರಿಚಯ ಮಾಡಲು ಸಹಾಯವಾಗುತ್ತದೆ. ಒಟ್ಟಿನಲ್ಲಿ ಮಾತೃಭಾಷೆ ಎಂದಿದ್ದರೂ ಮರದ ತಾಯಿಬೇರಿನಂತೆ ಆಳಕ್ಕಿಳಿದರೆ ಮಾತ್ರ, ಉಳಿದ ಭಾಷೆಗಳ ಕೊಂಬೆ ನಳನಳಿಸಲು ಸಾಧ್ಯ. ನಮ್ಮತನವನ್ನು ಬಿಟ್ಟುಕೊಡದೆ, ಎಲ್ಲವನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಭಾವನೆ ಬೆಳೆದಾಗ ಮಾತ್ರ ಇಂತಹ ಆಚರಣೆಗಳಿಗೆ ಸಾರ್ಥಕತೆ ಸಿಗುತ್ತದೆ, ಎಂಬುವುದು ನನ್ನ ಅಭಿಪ್ರಾಯ.



ಇಂದೊಂದು ದಿನ ಮಾತ್ರ, ಕನ್ನಡಿಗರಾಗುವ ಬದಲು, ನಮ್ಮ ದಿನಚರಿಯಲ್ಲಿ ಕನ್ನಡದ ಬಳಕೆ, ಸಾಹಿತ್ಯದ ಅರಿವು ಪಡೆಯುವ ಬಯಕೆಗಳನ್ನು ರೂಢಿಸಿಕೊಳ್ಳುವುದು ಚೆನ್ನ...

ಒಂದಷ್ಟು ಆತ್ಮೀಯರಲ್ಲಿ, ಹಿರಿಯರಲ್ಲಿ, ಗುರುಗಳಲ್ಲಿ ಕನ್ನಡದ ಬಗ್ಗೆ, ಇಂದಿನ ಆಚರಣೆಯ ನೈಜತೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವಿನಂತಿಸಿದ್ದೆ, ಅವುಗಳು ನಿಮ್ಮ ಮುಂದೆ :

 

"ಶ್ರೀಗಂಧದ ಕಂಪು, ಕನ್ನಡದ ಇಂಪು ಹರಡಿರುವ ಕರ್ನಾಟಕ ರಾಜ್ಯದಲ್ಲಿ ಹುಟ್ಟಿ ಬೆಳೆದ ನಾವೇ ಧನ್ಯರು. ಭಾಷೆ ಅಭಿವ್ಯಕ್ತಿಯ ಸಾಧನ. ಕರುನಾಡನ್ನು ಭಾವನಾತ್ಮಕವಾಗಿ ಒಂದುಗೂಡಿಸಿದ ಭಾಷೆ ಕನ್ನಡ. ಇದು ನಮ್ಮ ಉಸಿರು. ಬ್ರಿಟೀಷರಿಂದ ಹರಿದು ಹಂಚಲ್ಪಟ್ಟಿದ್ದ ನಮ್ಮ ಕನ್ನಡ ನಾಡು ಏಕೀಕರಣಗೊಂಡ ದಿನ ನವೆಂಬರ್ ಒಂದು. ಆ ದಿನವೇ ನಮಗೆ ರಾಜ್ಯೋತ್ಸವ. ನಾವು ಕಳೆದುಕೊಂಡದ್ದನ್ನು ಪುನಃ ಪಡೆದುಕೊಂಡ ದಿನ.
ನಾವು ಹೊಸದಾಗಿ ಏನನ್ನಾದರೂ ಪಡೆದುಕೊಂಡಾಗ ಸಿಗುವ ಆನಂದಕ್ಕಿಂತ ಕಳೆದುಕೊಂಡಿದ್ದನ್ನು ಪುನಃ ಪಡೆದುಕೊಂಡಾಗ ಸಿಗುವ ಆನಂದ ಅವರ್ಣನೀಯ. ಅದಕ್ಕಾಗಿಯೇ ನಮ್ಮ ರಾಜ್ಯೋತ್ಸವ ಆಚರಣೆ ಮಹತ್ವ ಪಡೆದುಕೊಂಡಿದೆ. ಇಂದು ನಮ್ಮ ದಿನಾಚರಣೆ ಮಾಸಾಚಾರಣೆಯಾಗಿದೆ, ಇದು ವರ್ಷಾಚರಣೆಯಾಗಬೇಕು. ನಮ್ಮ ಭಾಷೆಯ ಮೇಲಿನ  ಪ್ರೀತಿ ನಮ್ಮ ಪ್ರೌಢಿಮೆಗೆ ಹಿಡಿದ ಕನ್ನಡಿಯಾಗಬೇಕು. ನಮ್ಮ ಸ್ವಾಭಿಮಾನದ ಸಿಹಿಯಾಗಬೇಕು. ಇದೆಂದಿಗೂ ದುರಭಿಮಾನದ ಕಹಿಯಾಗಬಾರದು. ನಮ್ಮ ಭಾಷೆ ಎಲ್ಲ ಕಲ್ಮಶಗಳನ್ನು ತೊಳೆವ ಕಾವೇರಿಯಾಗಬೇಕೆ ಹೊರತು, ಅಂಧಾಭಿಮಾನದಿಂದ ಕಾವೇರುವ ವಾತಾವರಣ ಸೃಷ್ಟಿಯಾಗುವಂತಾಗಬಾರದು. ನಮ್ಮ ಭಾಷೆ ಎಲ್ಲ ಭಾಷೆಗಳ ಸತ್ವವನ್ನು ತನ್ನಲ್ಲಿ ಮೈಗೂಡಿಸಿಕೊಳ್ಳುವ  ಸಾಗರವಾಗಬೇಕೆ ಹೊರತು ಎಲ್ಲರಿಂದ ಬೇರೆ ಉಳಿಯುವ ದ್ವೀಪವಾಗಬಾರದು. ಅನೇಕತೆಯಲ್ಲಿ ಏಕತೆಯನ್ನು ಕಾಣುವ ನಾವು ಮಾತೃಭಾಷೆ, ರಾಷ್ಟ್ರಭಾಷೆ ಹಾಗೂ ದೇವ ಭಾಷೆಯನ್ನು ಪ್ರೀತಿಸೋಣ. ಕನ್ನಡಕ್ಕೆ ಜಯವಾಗಲಿ."  

 

ಪ್ರೊ.ರಾಮಕೃಷ್ಣ ಕೆ. ಎಸ್





"ಕನ್ನಡ ಉಳಿಸಿ ಕನ್ನಡ ಬೆಳೆಸಿ, ಸಿರಿಗನ್ನಡಂ ಗೆಲ್ಗೆ,

ಅಂತೆಲ್ಲಾ ಘೋಷವಾಕ್ಯಗಳನ್ನು ಹಾಕುತ್ತೇವೆ ನಿಜ... ಆದರೆ ನಮ್ಮಲ್ಲಿ ಅದನ್ನು ಬಳಸುವ ಅಭಿರುಚಿ ಇಲ್ಲದೇ ಹೋದಲ್ಲಿ ಉಳಿಯುವುದಾದರೂ ಹೇಗೆ? ಇವತ್ತು ಕನ್ನಡ ರಾಜ್ಯೋತ್ಸವ... ಆದರೆ ಕೆಲವರು ಶುಭಾಶಯ ಕೋರಿದ್ದು ಮಾತ್ರ  wish u happy Kannada rajyothsava...!!! ಅನ್ನುವ ಆಂಗ್ಲ ಶೈಲಿಯಲ್ಲಿ.!

 

"try to speak only in kannada......."   ಅಪ್ಪಟ ಕನ್ನಡಾಭಿಮಾನಿಯೊಬ್ಬರು ಈ ರೀತಿಯಾಗಿ ನಿನ್ನೆ ವಾಟ್ಸಾಪ್ ನಲ್ಲಿ ತಮ್ಮ ಕನ್ನಡಾಭಿಮಾನವನ್ನು ತೋರ್ಪಡಿಸುತ್ತಾ ತಾವು ಉಪದೇಶ ಮಾಡಿದ್ದು ಮಾತ್ರ ಆಂಗ್ಲಭಾಷೆಯಲ್ಲಿ ..!!!!! ಇಂತಹ ತೋರಾಣಿಕೆಯ ಕನ್ನಡಾಭಿಮಾನದಿಂದ ಕನ್ನಡ ಭಾಷೆಯ ಉಳಿವು ಸಾಧ್ಯವೇ? ಕೆಲವರು ಬಳಸುವ ಜಂಗಮವಾಣಿಯಲ್ಲಿ ಕನ್ನಡ ಲಿಪಿಗಳ ಆಯ್ಕೆ ಇಲ್ಲದಿರಬಹುದು, ಆದರೆ ಆಂಗ್ಲಲಿಪಿಯ ಮೂಲಕ ಕನ್ನಡವನ್ನು ಬರೆಯುವ ಆಯ್ಕೆ ಖಂಡಿತವಾಗಿಯೂ ಇದೆಯಲ್ಲವೇ?

ಪ್ರಾಚೀನ ಕಾಲದಲ್ಲಿ ನಮ್ಮ ಕನ್ನಡ ನಾಡಿನ ಕೋಗಿಲೆಗಳ ಕಂಠದಲ್ಲಿ ಕನ್ನಡ ಗಾನ ಮೊಳಗುವ ವೇಳೆ, ಕನ್ನಡ ನಾಡಿನ ಗುಬ್ಬಿಗಳ ಗೂಡಲ್ಲಿ ಕನ್ನಡದ ಚಿಲಿಪಿಲಿ ಕಲರವ ಹೊರಹೊಮ್ಮುವ ವೇಳೆ ಆಂಗ್ಲಭಾಷೆಯಿನ್ನೂ ಭ್ರೂಣಾವಸ್ಥೆಯಲ್ಲಿತ್ತು..!! 

ಪ್ರತಿಷ್ಠೆಯ ಹೆಸರಿನಲ್ಲಿ ಆಂಗ್ಲಭಾಷೆಯ ಅಭಿಮಾನಿಗಳು ವೈಯ್ಯಾರದಿಂದ ಮಾತನಾಡುವ ಆಂಗ್ಲಭಾಷೆಗಿನ್ನೂ ಸ್ವಂತ ಲಿಪಿಯಿಲ್ಲ.. ಅವರು ಬಳಸುತ್ತಿರುವುದು ರೋಮನ್ ಲಿಪಿಯನ್ನು..!! 

ಕನ್ನಡವನ್ನು ಉಳಿಸಿ ಬೆಳೆಸುವುದು ಕೇವಲ ಈ ದಿನದ ಹೇಳಿಕೆಗಳಿಗಷ್ಟೇ ಸೀಮಿತವಾಗದೆ ವ್ಯವಹಾರದಲ್ಲೂ ತೋರ್ಪಡಿಸೋಣ... ಆಂಗ್ಲಭಾಷೆಯನ್ನು ಕಲಿಯೋಣ, ಅದರ ಜ್ಞಾನವಿರಲಿ.. ಆದರೆ ದಿನಚರಿಯ ಬಳಕೆಗೆ, ಭಾವನೆಗಳ ವಿನಿಮಯಕ್ಕೆ ನಮ್ಮ ಅಚ್ಚಗನ್ನಡವಿರಲಿ....!! ನಮ್ಮ ಭಾವನೆಗಳನ್ನು ಇನ್ನೊಬ್ಬರ ಹೃದಯತಟ್ಟುವಂತೆ ಹೊರಹಾಕುವುದು ಮಾತೃಭಾಷೆಯಿಂದ ಮಾತ್ರ ಸಾಧ್ಯ..! ಕನ್ನಡವನ್ನು ಉಚ್ಚರಿಸುವಾಗ ಹೃದಯದಲ್ಲಿ ಅರಳುವ ಭಾವನೆಗಳು ಆಂಗ್ಲ ಭಾಷೆಯನ್ನು ಉಚ್ಚರಿಸುವಾಗ ಅರಳುವುದಿಲ್ಲ.. ಯಾಕೆಂದರೆ ನಮ್ಮ ಹೃದಯದಿಂದ ದೇಹದೊಳಗೆಲ್ಲಾ ಹರಿಯಲ್ಪಡುವ ರಕ್ತದಲ್ಲಿ ಬೆರೆತಿರುವುದು ಭಾರತಮಾತೆಯ  ತನುಜಾತೆಯಾದ ಕನ್ನಡಮ್ಮನ ನೆಲದ ನೀರು, ನಮ್ಮ ಉಸಿರಿನಲ್ಲಿ ಬೆರೆತಿರುವುದು ಕನ್ನಡಮ್ಮನ ಪರಿಶುದ್ಧ ಸುಗಂಧಭರಿತ ಗಾಳಿ..! ಮಾತೃಭಾಷೆಯ ಮೇಲಿನ ಅಭಿಮಾನದ ಜೊತೆಗೆ ನಮ್ಮ ದೇಶೀಯ ಇತರ ಎಲ್ಲಾ ಭಾಷೆಗಳನ್ನೂ ಗೌರವಿಸೋಣ, ಪ್ರೀತಿಸೋಣ. ನಮ್ಮ ನೆಲಜಲದ ಉಸಿರಾಗಿರುವ ಭಾಷೆಗಳನ್ನು ಕೀಳಾಗಿ ಕಾಣುತ್ತಾ ಆಂಗ್ಲಭಾಷೆಯ ಅಂಧಾಭಿಮಾನದಿಂದ ಅದರ ಆರಾಧನೆಯಲ್ಲಿ ಮುಳುಗುತ್ತೇವೆಂದರೆ ಅದು ನಮ್ಮ ಹೆತ್ತತಾಯಿಯನ್ನು ಬೀದಿಗೆ ತಳ್ಳಿದಂತೆ...!!!

 

ಎಲ್ಲರಿಗೂ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು."

 -ಉದಯಭಾಸ್ಕರ್ ಸುಳ್ಯ



 

"ಮೊದಲನೆಯದಾಗಿ ಎಲ್ಲರಿಗೂ ೬೫ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ  ಶುಭಾಶಯಗಳು.  

ಕನ್ನಡ ಎಂದಾಗ ಮೊದಲಿಗೆ  ವಿಶ್ವಮಾನವ ಕುವೆಂಪು ಬರೆದ ಎರಡು ಸಾಲುಗಳು ನನಗೆ ನೆನಪಾಗುತ್ತವೆ.   " ಕನ್ನಡಕೆ ಹೋರಾಡು ಕನ್ನಡದ ಕಂದ, ಕನ್ನಡವ ಕಾಪಾಡು ನನ್ನ ಆನಂದ... " ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಇದೇ ಹಾಡನ್ನು ಸ್ವಲ್ಪ ಬದಲಾವಣೆ ಮಾಡಿ ಹಾಡುವ ಪರಿಸ್ಥಿತಿ ನಮ್ಮದಾಗಿದೆ . " ಕನ್ನಡವ ಕಾಪಾಡು ಕನ್ನಡಿಗರಿಂದ "ಎಂಬುವುದಾಗಿ .

ನಮಗೆ ಅದಾವ ಪರಿಯಾಗಿ ಆಂಗ್ಲ ಭಾಷೆಯ ಮೇಲೆ ಮೋಹ ಉಂಟಾಗಿದೆ ಎಂದರೆ, ಆಂಗ್ಲ ಭಾಷೆಯನ್ನು ಅರಿಯದವನನ್ನು ಏನೂ ಅರಿಯದ ದಡ್ಡನೆನ್ನುವ ರೀತಿಯಲ್ಲಿ ಬಿಂಬಿಸುವ ಪ್ರಯತ್ನಗಳಾಗುತ್ತಿವೆ. 

ಹಾಗಂತ ಆಂಗ್ಲ ವಿರೋಧಿಯೂ ನಾನಲ್ಲ, ಹೊಸ ಭಾಷೆ ಕಲಿಯುವುದು ತಪ್ಪು ಎಂದು ಕೂಡ ನನ್ನ ವಾದವಲ್ಲ. ಹೊಸ ಭಾಷೆಯ ಜೊತೆಗೆ ಹೊಸ ಸಂಸ್ಕೃತಿಯ ಪರಿಚಯವಾಗುವ ಬಗೆಗೆ ನನ್ನ ಸಹಮತವಿದೆ. 

ಜೊತೆಗೆ ಅನ್ಯ ಭಾಷೆಯನ್ನು ಅರಿತು ಅವರಿಗೂ ನಮ್ಮ ಸಂಸ್ಕೃತಿ ಸದ್ವಿಚಾರಗಳನ್ನು ಪರಿಚಯಿಸಿದರೆ ನಮ್ಮ ಭಾಷಾ ಸಂಸ್ಕೃತಿಗೆ ನಾವೊಂದು ಸಣ್ಣ ಕೊಡುಗೆ ನೀಡಿದಂತೆ ಅಲ್ಲವೇ...?!! 

ನವೆಂಬರ್ ಒಂದರಂದು ಒಂದು ದಿನದ ಮಟ್ಟಿಗೆ ಕನ್ನಡದ ಪರವಾಗಿ ಹೋರಾಟ, ಹಾರಾಟ ಮಾಡುವವರಿಂದ ಕನ್ನಡ ಉಳಿಸಲು ಖಂಡಿವಾಗಿಯೂ ಸಾಧ್ಯವಿಲ್ಲ. 

ಹೊಸ ತಲೆಮಾರುಗಳು ಕಲಿತು ಬೆಳೆಸುವುದು ಎಷ್ಟು ಅಗತ್ಯವೋ, ಅದೇ ರೀತಿ ಹಳೆಯ ತಲೆಮಾರುಗಳು ಮರೆಯದೆ ಉಳಿಸುವುದು ಅತ್ಯಗತ್ಯ. 

ಅನ್ಯ ಸಂಸ್ಕೃತಿಯನ್ನು ಆಮದು ಮಾಡಿಕೊಳ್ಳುವ ಅನುಪಾತಕ್ಕೆ ಸಮಾನವಾಗಿ ನಮ್ಮ ಸಂಸ್ಕೃತಿಯನ್ನು ಅನ್ಯರಿಗೆ ರಫ್ತು ಮಾಡಿ ಪರಿಚಯಿಸುವ ಕೆಲಸವನ್ನು ಮಾಡೋಣ.  

ಆಮದು ಒಂದೇ ಅತಿಯಾದರೆ ಸುಂದರವಾದ ಕನ್ನಡ ಭಾಷೆಯು ದಿವಾಳಿಯೆದ್ದು ಹೋಗುವುದು ಖಂಡಿತ.. 

ಎಚ್ಚರಗೊಳ್ಳು ಕನ್ನಡಿಗ

ಕನ್ನಡ ಮೆಲ್ಲಗೆ ಕರಗಿ ಹೋದೀತು...

ನಾಳೆ ನಿನ್ನ ಮನೆಗೆ ನೀ ಹೋಗಲು,

ನಿನಗೆ ಪಾಸ್ ಪೋರ್ಟ್ ಬೇಕಾದೀತು.....!!!!

   - ನವನೀತ 

 


"ಕರುನಾಡಿನ ಉದ್ದಗಲಕ್ಕೂ ಮೈ ಚಾಚಿರುವ ಕನ್ನಡ, ಕನಾ೯ಟಕದ ಕಲ್ಪತರು. ಕಳೆಗುಂದಿರುವ ಕನ್ನಡದ ರಂಗಿಗೆ ಅಭಿಮಾನ, ಅವಲಂಬನೆಯ ಮೂಲಕ ನವ ಚೈತನ್ಯ ನೀಡಬೇಕಿದೆ. ಪರ ಭಾಷೆಯನ್ನು ನೆಚ್ಚಿಕೊಂಡು ಬದುಕುತ್ತಿರುವ ನಮಗೆ ಕನ್ನಡಾಂಬೆಯ ಪಾದ ತೊಳೆಯಲು ಮೈಲಿಗೆಯಾಗುವುದೇಕೆ??? ಕನ್ನಡ ಎಂದೂ ಕನಾ೯ಟಕದ ಕನ್ನಡಿ. ಕನ್ನಡ ಕಣ್ಣಾಗಿರಲಿ, ಕನ್ನಡಕವಲ್ಲ....."

  -ಕಾವ್ಯ ಗೌಡ




"ಎಲ್ಲಾದರೂ ಇರು 

ಎಂತಾದರೂ ಇರು

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡಿಗರ ಹಬ್ಬ ಕರುನಾಡ  ಹಿರಿಮೆಯ ಹಬ್ಬ ಎಂದರೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವ. ನಮ್ಮ ನಾಡು  ಕಲೆಗಳ ಬೀಡು,ಕವಿಗಳ ನಾಡು, ಕಾವ್ಯಗಳ ಕಾಡು. ಕರ್ನಾಟಕದ ಹೆಸರು ಮಹಾಭಾರತದ ಕಾಲದಿಂದ ಇಂದಿನವರೆಗೂ ತನ್ನದೇ ಆದ ವಿಶೇಷತೆಗಳಿಂದ ಇತಿಹಾಸದ ಪುಟಗಳಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಭಾರತ   ಜನನಿಯ ತನುಜಾತೆಯಾದ ಕರ್ನಾಟಕ ಮಾತೆ, ಇಂದು ಭಾರತದ ಭೂಪಟದಲ್ಲಿ ತನ್ನದೇ ಆದ ವೈಶಿಷ್ಟತೆಯಿಂದ ರಾರಾಜಿಸುತ್ತಿದ್ದಾಳೆ ಎಂದರೆ ಕರ್ನಾಟಕ, ಕನ್ನಡದ ಶ್ರೀಮಂತಿಕೆ ಏನು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ.ಕನ್ನಡ ವರ್ಣಮಾಲೆ ವೈಜ್ಞಾನಿಕ ದೃಷ್ಟಿಕೋನದಿಂದ ರಚಿತವಾಗಿದೆ.2000 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ 400-500 ವರ್ಷಗಳ ಹಿಂದೆ ಭಾರತಕ್ಕೆ ಬಂದಿರುವ ಇಂಗ್ಲಿಷ್ ಭಾಷೆ ಸವಾಲನ್ನು ಹಾಕುತ್ತಿದೆ. ಕನ್ನಡಿಗರಾದ ನಾವು ಈ ಸವಾಲನ್ನು ಎದುರಿಸಬೇಕು. ಕನ್ನಡತನವನ್ನು ಉಳಿಸಿ ಬೆಳೆಸುವಂತಹ ಕೆಲಸ ಕೇವಲ ಕೆಲವು ದಿನಗಳದ್ದಲ್ಲ ಒಂದು ದಿನಕ್ಕೆ ಮಾತ್ರ ಕನ್ನಡಿಗರಾಗಿರದೆ ಪ್ರತಿಯೊಬ್ಬನ ಕಣಕಣದಲ್ಲೂ ಕನ್ನಡ ಉಸಿರಾಗಿರಲಿ.

 ಕನ್ನಡವೇ ಸತ್ಯ ಕನ್ನಡವೇ ನಿತ್ಯ"

-ಅರ್ಷಿಯಾ ಖಾನಂ

                                                                                 



"ನಮ್ಮ ಮಾತೃಭಾಷೆ‌ಗೆ ಈ ಒಂದು ದಿನ ಮಾತ್ರ ಮೀಸಲಾಗಿ ಬಿಟ್ಟಿದೆ ಎಂದು ನನಗನಿಸದು! ಈ ದಿನದಂದು ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಕಾಣುವ ಭಾಷಾಭಿಮಾನ ನಾಳೆ ನಾಪತ್ತೆಯಾಗಿ ಬಿಡುತ್ತಿದೆ ಎನ್ನುವ ಕಾರಣ ಈ ದಿನವೊಂದಷ್ಟೇ ಮೀಸಲೇ ಎಂದೆನಿಸಬಹುದು! ಆದರೆ ತಿರುಗಿ ನೋಡಿದಾಗ ಈ ದಿನದ ಆಚರಣೆಯ ಕಾರಣ ಇತ್ತೀಚೆಗೆ (೧೯೭೩) ಭಾಷೆಯನ್ನು ಆಧಾರ‌ವಾಗಿಟ್ಟು ಕೊಂಡು ಕರ್ನಾಟಕ ರಾಜ್ಯ‌ವೆಂದು ನಾಮಾಂಕಿತವಾದ ದಿನ. ನಮ್ಮ ಜನ್ಮದಿನದ ಆಚರಣೆ‌ಯಂತೆ ಈ ದಿನ ಎನ್ನುವುದು ನನ್ನ ಅನಿಸಿಕೆ. 

ಆದರೆ ಕನ್ನಡದ ಮೇಲಾಗುತ್ತಿರುವ ಪ್ರಹಾರ‌ಗಳನ್ನು ಇಲ್ಲವೆನ್ನಲಾರೆ! ಅದಕ್ಕೆ ಬೀದಿಗಿಳಿದು ಹೋರಾಟ‌, ಕೂಗಾಟ ಮದ್ದಲ್ಲ. ಇವುಗಳು ನಾವೇ ಮಾಡುತ್ತಿರುವ ಪ್ರಹಾರ! ಈ ರೀತಿಯ ಒತ್ತಡ‌ದಿಂದ ಎಲ್ಲವೂ ಸಾಧ್ಯವಾಗುವುದಿಲ್ಲ. ಕನ್ನಡ‌ವನ್ನು ವ್ಯಾಪಕವಾಗಿ ಪಸರಿಸುವ ಕೆಲಸವನ್ನು ಕನ್ನಡಿಗರಾಗಿ ನಾವೆಲ್ಲರೂ ಮಾಡಬೇಕು. ಹೇಗೆ ರಾಮಾಯಣ, ಮಹಾಭಾರತದ‌ಂತಹ ಐತಿಹಾಸಿಕ ಕಥೆಗಳು ಜನಜನಿತವಾಗಿರುವುದೋ ಹಾಗೇ ಕನ್ನಡನಾಡಿನ ಇತಿಹಾಸ‌ವೂ ಜನಜನಿತವಾಗಬೇಕು! ಪರರ ನಿಂದನೆಯಿಂದ ಕ್ಷುದ್ರನಾಗಿ ಕನ್ನಡಿಗರ ಸಾಮ್ರಾಜ್ಯ ಕಟ್ಟಿದ ಮಯೂರ ಶರ್ಮ, ಮಗನಿಗೇ ಮರಣದಂಡನೆ ಶಿಕ್ಷೆ‌ವಿಧಿಸಿದ ಅಮೋಘವರ್ಷ ನೃಪತುಂಗ, ಹೆಣ್ಣಿನ ಘನತೆಗೆ ಸಾಕ್ಷಿ‌ಯಾಗಿದ್ದ ಅಕ್ಕಾದೇವಿ,ಶಾಂತಲೆ, ತುಘಲಕ್‌ಗೇ ಎರಡು ಬಾರಿ ಸೋಲಿನ ರುಚಿ ತೋರಿದ ಕುಮಾರರಾಮ.. ಹೀಗೆ ಅದೆಷ್ಟೋ ಅದ್ಭುತವಾದ ಗೆಲುವು, ಸಾಂಸ್ಕೃತಿಕ, ಕಲೆ, ಧಾರ್ಮಿಕ, ನ್ಯಾಯಿಕ, ಸಮಾನತೆಯ ವಿಚಾರಗಳ ಮೇಲೆ ನಿಂತಿರುವುದು ನಮ್ಮ ಕನ್ನಡ ನಾಡು. ಇದು ಯಾವ ಪರಂಪರೆಗಿಂತ ಕಡಿಮೆಯಾಗಿರುದು.!? ನಮ್ಮ ಇತಿಹಾಸ‌ ಪುಸ್ತಕ, ಪಠ್ಯ‌ಗಳಲ್ಲಿ ಸೋಲುಗಳನ್ನು ವೈಭವೀಕರಿಸಿ ನಮಗೆ ಪ್ರೇರಣೆ‌ಯಾಗಬಲ್ಲ ವಿಚಾರಗಳನ್ನು ಮರೆಮಾಚಲಾಗಿದೆ ಕಾರಣ ಇತಿಹಾಸಕಾರರ ಓರೆಗಣ್ಣಾಗಿರಬಹುದು! ನಮ್ಮ ವೈಭವದ ಇತಿಹಾಸ ಪೀಳಿಗೆಯಿಂದ ಪೀಳಿಗೆಗೆ ಹೆಮ್ಮೆಯಾಗಿ ಹಬ್ಬಬೇಕು..ರಾಷ್ಟ್ರ‌ವು ಪ್ರತಿಯೊಂದು ಕಾರ್ಯದಲ್ಲೂ ನಮ್ಮನ್ನು ನೆನೆಯುವಂತಾಗಬೇಕು! ಹಾಂ ಕೊನೆಯ ಮಾತು ಈ ಕಾರ್ಯವನ್ನು ಮಾಡಬೇಕಿರುವುದು ಬೇರಾರೂ ಅಲ್ಲ ನಾವುಗಳೇ!"

 (ಕಿಶೋರ್ ಬಳ್ಳಡ್ಕ) 

 

   -ಪಲ್ಲವಿ ಕಬ್ಬಿನಹಿತ್ಲು

WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM

👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE..

-KADUGUSUMA

(ವಿಶೇಷ ಪ್ರಕಟಣೆ:

ಇದೇ ಪ್ರಯತ್ನದಲ್ಲಿ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇವೆ. ನಮ್ಮ ಬ್ಲಾಗ್ ಓದುಗರಲ್ಲಿ ಬರೆಯುವವರೂ ಇದ್ದಾರೆ. ಅವರಿಗಾಗಿಯೇ ಒಂದು ದಿನದ ಪ್ರಕಟಣೆಯನ್ನು ಮೀಸಲಿಡುವ ಪ್ರಯತ್ನ. ಆಸಕ್ತಿ ಉಳ್ಳವರು ತಮ್ಮ ಕನ್ನಡ ಬರಹವನ್ನು 

kadugusumaofficial@gmail.com 

ಗೆ E-Mail   ಮಾಡಬಹುದು. ಆಯ್ದ ಬರಹಗಳನ್ನು ಪ್ರತಿ ಭಾನುವಾರ 'ಓದುಗರ ಕಾಲಂ' ನಲ್ಲಿ ಪ್ರಕಟಿಸುತ್ತೇವೆ.

ಧನ್ಯವಾದಗಳೊಂದಿಗೆ,

-ಕಾಡುಗುಸುಮ)

Comments

  1. ತುಂಬಾ ಸೊಗಸಾಗಿ ಮೂಡಿ ಬಂದಿದೆ

    ReplyDelete
  2. Great work, kannada Rajyotsava da shubhashayagalu.

    ReplyDelete
    Replies
    1. ಧನ್ಯವಾದಗಳು...ನಿಮಗೂ ಸಹ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

      Delete
  3. ನಮ್ಮ ಕನ್ನಡ ನಮ್ಮ ಹೆಮ್ಮೆ.👍👍👍

    ReplyDelete
  4. ಕರ್ನಾಟಕ ರಾಜ್ಯೋತ್ಸವ ಶುಭಾಶಯಗಳು
    😍

    ReplyDelete
  5. ಒಳ್ಳೆಯ ಪ್ರಯತ್ನ. ಒಂದಷ್ಟು ಮಂದಿಯನ್ನು ಸಂಪರ್ಕಿಸಿ ಅವರ ಅಭಿಪ್ರಾಯಗಳನ್ನು ತೆಗೆದುಕೊಂಡಿರುವುದು ಉತ್ತಮ ಕೆಲಸ.

    ReplyDelete
  6. Replies
    1. ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು

      Delete
  7. ಮನಸಿಗೆ ಹಿತವಾದ ಮಾತು.....
    Awesome......
    From Adishree BK
    Freind of your sister.

    ReplyDelete

Post a Comment

Popular posts from this blog

THE LONGING…

One-sided!

Winter Inside!