ನಿಶೆಯ ನಶೆಯೂ ಚೆನ್ನ...

 



ಕತ್ತಲಲ್ಲಿ ಕರಗಿ ಮರೆಯಾಗುವ ಬಯಕೆ ಕಾಡದ್ದು ಯಾರಿಗೆ?! ಪುಟಾಣಿಗಳು ಮನೆಕೆಲಸ ಮಾಡದಿದ್ದಾಗ, ಪ್ರೇಮಿಗಳು ಜಗದ ಕಂಗಳಿಂದ ಮರೆಯಾಗ ಬಯಸಿದಾಗ, ಪ್ರೌಢರಿಗೆ ಜೀವನ ಸೋಲಿನ ರುಚಿಯುಣಿಸಿದಾಗ, ಜೀವನದ ಸಂಧ್ಯಾ ಕಾಲದಲ್ಲಿರುವವರೂ ಕತ್ತಲಾಗುವುದಕ್ಕೆ, ಆ ಕತ್ತಲಲ್ಲಿ ಸದ್ದಿಲ್ಲದೆ ಕಳೆದುಹೋಗುವುದಕ್ಕೆ ಕಾಯುವುದಿಲ್ಲವೆ?! ಹಿರಿಯರು-ಕಿರಿಯರೆನ್ನುವ ಭೇದವನ್ನು ಮುರಿದು ಎಲ್ಲರನ್ನೂ ಒಂದಲ್ಲ ಒಂದು ಸಲ ಅಪ್ಪಿಕೊಂಡ ಭಾವವಿದು. 

ಹಳೆತೆಲ್ಲವನ್ನು ಮರೆತು ಹೊಸತು ಶುರುವಾಗಲು ನಿಶೆಯಾಗಮನ ಬೇಡವೇ? ನೇಸರನುದಯಕ್ಕೆ ಕರಿ ಹಾಸಿನ ಕಂಬಳಿಯಿಲ್ಲದಿದ್ದರೆ ಅರ್ಥವಿದ್ದೀತೇ? ಜ್ಞಾನದೀಪದ ಬೆಳಕು ಪಸರಿಸಲು ಅಜ್ಞಾನದ ಕತ್ತಲಾವರಿಸಬೇಡವೇ? ಹಳೆದೇಹವನ್ನು ಕಳಚಿಟ್ಟು ಹೊಸ ದೇಹವೆಂಬ ಅಂಗಿ ಧರಿಸಲು ಬಾಳಸಂಜೆ ಕತ್ತಲೆಡೆಗೆ ಸಾಗುವುದಿಲ್ಲವೇ?

ದಿನವಿಡೀ ದುಡಿದು ಕಂಗಾಲಾಗುವ ಜೀವಗಳಿಗೆ ರಾತ್ರಿ, ವಿಶ್ರಾಂತಿಯ ಆಮಂತ್ರಣವನ್ನು ಹೊತ್ತು ತಂದರೆ, ಕೆಲವೆಡೆ ಯುವ ಮನಸುಗಳಿಗೆ ಇದೇ ಹೊತ್ತಿಗೆ ತಮ್ಮ ದಿನಚರಿಯ ಆರಂಭವಾಗುತ್ತದೆ. ಪ್ರೇಮಿಗಳು ಚಂದ್ರನ ಬಿಂಬದಲ್ಲಿ ತನ್ನ ಪ್ರೇಮದ ಸಂದೇಶವನ್ನು ಸಂಗಾತಿಗೆ ತಲುಪಿಸುವ ಕನಸು ಕಾಣುತ್ತಾರೆ. ಆತ್ಮೀಯರನ್ನು ಅಗಲಿದವರು ತಾರೆಗಳೆಡೆಯಲ್ಲಿ ಅವರನ್ನು ಅರಸತೊಡಗುತ್ತಾರೆ. ರಾತ್ರಿಯ ಏಕಾಂತದಲ್ಲಿ ನೆನಪುಗಳು ಒಮ್ಮೊಮ್ಮೆ ತಂಗಾಳಿಯಾಗಿ, ಇನ್ನು ಕೆಲವೊಮ್ಮೆ ಬಿರುಗಾಳಿಯಾಗಿ ಬೀಸಿ ಒಂದರೆ ಘಳಿಗೆ ನಮ್ಮನ್ನು ತನ್ನೊಳಗೆ ಸೆಳೆದುಕೊಳ್ಳುತ್ತವೆ... ಹೀಗೆ ರಾತ್ರಿ ಒಬ್ಬೊಬ್ಬರಲ್ಲೊಂದೊಂದು ಭಾವ ತುಂಬಿ ನಾಗಾಲೋಟದ ಬದುಕಿಗೊಂದು ‘ಬ್ರೇಕ್’ ಹಾಕುತ್ತದೆ ಎಂದರೆ ಸುಳ್ಳಲ್ಲ.

ಹಾಗಾದರೆ ರಾತ್ರಿಯ ಜೊತೆಯಾಗುವ ಕತ್ತಲೆ ಎಂದರೇನು? ವೈಜ್ಞಾನಿಕ ನೆಲೆಯಲ್ಲಿ ಕತ್ತಲಿಗೆ ಅಸ್ತಿತ್ವವೇ ಇಲ್ಲ, ಬೆಳಕಿಲ್ಲದ ಸ್ಥಿತಿಯಷ್ಟೆ! ತಾತ್ವಿಕವಾಗಿ ಚಿಂತಿಸಹೊರಟರೆ, ಅಜ್ಞಾನ, ನಿರಾಶೆ-ಹತಾಶೆಗಳು, ನಕಾರಾತ್ಮಕತೆಯ ಸಮಾನಾರ್ಥಕವೇ ಕತ್ತಲೆಂದೆನಿಸುತ್ತದೆ... ಆದರೆ ಕತ್ತಲೆಯು ಇವೆಲ್ಲವನ್ನೂ ಮೀರಿದ ನಿಗೂಢತೆಯನ್ನು ತನ್ನಲ್ಲಿ ಬಚ್ಚಿಟ್ಟುಕೊಳ್ಳುತ್ತದೆ... ನಿಶೆಯ ನಶೆಯೇರಿದಾಗ ಶಶಿಯ ಚೆಲುವು ನಲಿಯತೊಡಗುತ್ತದೆ...

ನಕಾರಾತ್ಮಕತೆಗೆ ಕತ್ತಲೆಂದು ನಾವೆಷ್ಟು ಕರೆದರೂ ಕತ್ತಲಿಲ್ಲದೆ ಬೆಳಕಿಗೆ ಬೆಲೆಯಿಲ್ಲ ಎಂಬುದು ನಮಗೆಲ್ಲ ತಿಳಿದೇ ಇದೆ. ಎಷ್ಟೋ ಜೀವಿಗಳಿಗೆ ಕತ್ತಲಿನಲ್ಲೇ ಬದುಕಿನ ಆರಂಭ. ಸೂರ್ಯನ ಕಿರಣಗಳು ಭುವಿಗೆ ಮುತ್ತನಿಡುವಾಗ ಹಕ್ಕಿಗಳ ಚಿಲಿಪಿಲಿ ರಾಗ ಹಾಡಿದರೆ, ಸಂಜೆಯ ನಡುವಲ್ಲಿ ನುಸುಳಿಕೊಂಡು ಕಾಡು-ನಾಡೆನ್ನದೆ ಎಲ್ಲವನ್ನು ತನ್ನೊಳಗೆ ನುಂಗಿಕೊಳ್ಳುವ ಕತ್ತಲಿನ ಸ್ವಾಗತಕ್ಕೆ ಸಂಗೀತ ಹಾಡುವ ಕೀಟಗಳಿಲ್ಲವೇ? ಆಗಸದಲ್ಲಿ ಹೊಳೆಯುವ ನಕ್ಷತ್ರಗಳಿಗಿಂತ ನಾವೇನು ಕಮ್ಮಿಯಿಲ್ಲವೆಂದು ಮಿನುಗುವ ಮಿಣುಕು ಹುಳಗಳು ಕಣ್ಣಿಗೆ ಹಬ್ಬವಾಗುತ್ತವೆ. ಅದೇ ಹೊತ್ತಿಗೆ ಮರಗಳು ಸಹ ಕುಳಿರ್ಗಾಳಿಯ ಜೊತೆಗೆ ಬಾಗುತ್ತಾ-ಬಳುಕುತ್ತಾ ರೂಪವನ್ನು ಬದಲಿಸಿದಂತೆ ತೋರುತ್ತದೆ. 


ಮೋಡಗಳೆಡೆಯಲಿ ಅಡಗುತ್ತಾ ಕಣ್ಣ ಮುಚ್ಚಾಲೆಯಾಡುವ ಚಂದಮಾಮನನ್ನು ತೋರಿಸಿ ಕಂದಮ್ಮನಿಗೆ ಉಣಿಸಿದ ತಾಯಿ, ಲಾಲಿ ಹಾಡುತ್ತಾ ನಿಶೆಯ ಮೌನಕ್ಕೆ, ತನ್ನ ಸ್ವರವನ್ನು ಬೆರೆಸುತ್ತಾಳೆ. ಮತ್ತೆಲ್ಲೋ ಜೋಡಿಗಳು ಸಂಗಾತಿಯ ಬೆಚ್ಚಗೆ ಅಪ್ಪುಗೆಯಲ್ಲಿ ಕರಗಿಬಿಡುತ್ತಾರೆ. ಯಾರು ಯಾರ ಹಂಗಿಗೂ ಬೀಳದೆ ತಮ್ಮದೇ ಲೋಕದಲ್ಲಿ ವಿಹರಿಸುವ ಅವಕಾಶವನ್ನು ತರುವ ನಿಶೆಯ ಸೌಂದರ್ಯ ಯಾರಿಗೂ ಕಾಣದೆ ಉಳಿದಿಲ್ಲ.

ಆಕಾಶ ಭೂಮಿಯಲ್ಲಿ ಏನೇನೂ ಅಂತರವಿಲ್ಲೆಂಬಂತೆ ಒಂದೇ ಬಣ್ಣ ಬಳಿದ ಮೇಲೆ, ಕನಸುಗಳನ್ನು ಹೆಣೆದು ಕಣ್ಣಿನೊಳಗೆ ತುಂಬುವ ಕತ್ತಲನ್ನು ಸುಖಾಸುಮ್ಮನೆ ಹೀಯಾಳಿಸುವುದು ನಾವು ಎಂಬುವುದೇ ನನ್ನ ಭಾವನೆ!

ಎಲ್ಲವನ್ನು; ಎಲ್ಲರನ್ನು ಒಂದೇ ರಂಗಿನಲ್ಲಿ ಕಾಣುವ ದೃಷ್ಟಿಕೋನ ಅಳಿದ ಮೇಲೆಯೇ ನಾವು ಕತ್ತಲನ್ನು ಕೊರತೆಯಂತೆ ಕಾಣುವುದಕ್ಕೆ ಶುರು ಹಚ್ಚಿಕೊಂಡಿರಬಹುದು. ಜನರ ರಂಗನ್ನು ನೋಡಿ ಅಳೆದು-ತೂಗಿ ಮಾತನಾಡುವ ನಾವು, ಬಾಯಿ ಮಾತಿನಲ್ಲಿ ಮಾತ್ರ ‘ನಾವೆಲ್ಲರೂ ಒಂದೇ’, ‘ವಿವಿಧತೆಯಲ್ಲಿ ಏಕತೆ’ ಎನ್ನುತ್ತಾ ಅರಚಾಡಬೇಕಷ್ಟೆ! ಈ ಪರದೆಯನ್ನು ಎಳೆದು ನಾವೆಲ್ಲರೂ ಒಂದರ್ಥದಲ್ಲಿ ಅದರ ಹಿಂದೆ ಅಡಗಿಕೊಂಡಿದ್ದೇವಷ್ಟೆ; ನಾನು ಇದಕ್ಕೆ ಹೊರತಾಗಿಲ್ಲ. ಅದೆಷ್ಟು ಬಾರಿ ಅರಿಯುವ ಮೊದಲೇ ಜನರ ಸ್ವಭಾವಕ್ಕೊಂದು ರೂಪ ಕೊಟ್ಟಿರಬಹುದು ನಾವು? ಈ ರೂಪ ಕರಗುತ್ತಾ ಹೋದ ಹಾಗೆ ನಾವು ಒಮ್ಮೊಮ್ಮೆ ಅವರ ನೈಜತೆಯನ್ನು ಒಪ್ಪಿಕೊಳ್ಳಲಾಗದೆ ನಮ್ಮೊಳಗೇ ಭ್ರಮೆಯ ಲೋಕವನ್ನು ಹುಟ್ಟಿಸಿಕೊಳ್ಳುತ್ತೇವೆ ಅಥವಾ ಅವರನ್ನು ಅರಿತುಕೊಂಡ ಮೇಲೆ ನಮ್ಮೊಳಗೆ ಇಣುಕಿ ನೋಡಿಕೊಂಡು ಅಲ್ಲಿರುವ ಸಣ್ಣತನಕ್ಕೆ ಪಶ್ಚಾತಾಪಪಟ್ಟು ನಾಚಿಕೊಳ್ಳುತ್ತೇವೆ. ಮೊದಲನೆಯದು ಸಾಮಾನ್ಯವಾದರೂ ಎರಡನೆಯದು ಅಪರೂಪಕ್ಕೆ ನಡೆಯುವಂತಹದ್ದು!




ಅದಕ್ಕಾಗಿಯೇ ಹೇಳಿದ್ದು ಕತ್ತಲಿಗಿಂತ ಕೆಟ್ಟವರು ನಾವೆಂದು... ಆದರೂ ಕತ್ತಲಿನ ಮೇಲೆ ಅಪವಾದ ಹೊರಿಸುವುದು, ಅದು ಎಲ್ಲರನ್ನು ಒಂದೇ ರಂಗಿನಲ್ಲಿ ಬಳಿದದ್ದಕ್ಕೋ? ಅಥವಾ ಸ್ವಾರ್ಥ, ಸುಳ್ಳು, ಅಜ್ಞಾನದ ಗಂಟನ್ನು ನಾವು ಕತ್ತಲಿನಲ್ಲಿ ಅಡಗಿಸಿಟ್ಟಿದ್ದೇವೆಂದೋ?

ನನ್ನನ್ನು ಕೇಳಿದರೆ ಕತ್ತಲನ್ನು ಇಷ್ಟಪಡುವವರಿಗೆ ಕತ್ತಲು ತಮ್ಮ ಗುಟ್ಟನ್ನು ಬಿಟ್ಟುಕೊಟ್ಟರೆ ಎಂಬ ಭಯವೇ ಇರಬೇಕು ಕಾರಣ ಈ ಅಪವಾದಕ್ಕೆ...

-ಪಲ್ಲವಿ ಕಬ್ಬಿನಹಿತ್ಲು


WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM

👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE..

-KADUGUSUMA

(ವಿಶೇಷ ಪ್ರಕಟಣೆ:

ಇದೇ ಪ್ರಯತ್ನದಲ್ಲಿ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇವೆ. ನಮ್ಮ ಬ್ಲಾಗ್ ಓದುಗರಲ್ಲಿ ಬರೆಯುವವರೂ ಇದ್ದಾರೆ. ಅವರಿಗಾಗಿಯೇ ಒಂದು ದಿನದ ಪ್ರಕಟಣೆಯನ್ನು ಮೀಸಲಿಡುವ ಪ್ರಯತ್ನ. ಆಸಕ್ತಿ ಉಳ್ಳವರು ತಮ್ಮ ಕನ್ನಡ ಬರಹವನ್ನು 

kadugusumaofficial@gmail.com 

ಗೆ E-Mail   ಮಾಡಬಹುದು. ಆಯ್ದ ಬರಹಗಳನ್ನು ಪ್ರತಿ ಭಾನುವಾರ 'ಓದುಗರ ಕಾಲಂ' ನಲ್ಲಿ ಪ್ರಕಟಿಸುತ್ತೇವೆ.

ಧನ್ಯವಾದಗಳೊಂದಿಗೆ,

-ಕಾಡುಗುಸುಮ)



Comments

  1. ಕತ್ತಲೆಯೇ ಅಲ್ಲವೇ ಬದುಕಿನ ರಸ ನಿಮಿಷವನ್ನು ಪರಿಚಯಿಸುವುದು. ನಿಶಾಚರಿಯಾಗಿ ಬದುಕುವವರೆ ನಿಜ ಬೆಳಕು ಕಾಣುವುದು ... Super 👏 akka

    ReplyDelete
  2. ಒಳ್ಳೆಯ ಬರಹ ಪಲ್ಲವಿ, ಕತ್ತಲೆಯು ಮುಗಿದು ಜೀವನದ ಬೆಳಕು ಹರಿಯುವ ಕಡೆಗೆ ಮುಂದುವರಿಯಲಿ ಈ ಬರವಣಿಗೆಯ ಪಯಣ.ಶುಭಹಾರೈಕೆಗಳು

    ReplyDelete
    Replies
    1. ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು...
      ಈ ಪಯಣ ನನ್ನೊಬ್ಬಳದ್ದಲ್ಲ ನನ್ನ ತಂದೆ-ತಾಯಿಯರ ಪ್ರೋತ್ಸಾಹ, ಜೊತೆಗೆ ತಂಗಿಯಂದಿರ ಸಹಾಯದೊಂದಿಗೆ ಮುಂದುವರಿಯುತ್ತಿದೆ...

      Delete
  3. Arthapurna, continue writing, all the best.

    ReplyDelete
    Replies
    1. ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು

      Delete
  4. ಅದ್ಭುತವಾದ ವರ್ಣನೆ👌👏👏👏

    ReplyDelete
  5. ಬಹಳ ಚಂದ ಬರಿತೀಯಾ ಪುಟ್ಟು.... ಹೀಗೆ ಮುಂದುವರೆಯಲಿ.....

    ReplyDelete
    Replies
    1. ನಿಮ್ಮ ಶುಭಹಾರೈಕೆಗಳಿಗೆ ಧನ್ಯವಾದಗಳು

      Delete

Post a Comment

Popular posts from this blog

DREAMS…

ಕಾಫಿಯ ಕಪ್ಪು

ಬಿಳಿ ಬದುಕು...