ಹನಿ ಎಂಬ ಕಹಾನಿ



ಮೊದಲ ಮಳೆಯ ಹನಿಗಳು ನೆಲವನಪ್ಪುವಾಗ ನೆನಪಿನ ಹನಿಗಳುದುರುವುದು ಅತಿ ಸಹಜ. ಸಿಹಿ ನೆನಪುಗಳು ನಗೆ ಹೊನಲನು ಹರಿಸಿದರೆ, ಕಹಿ ನೆನಪುಗಳು ಹನಿಗೂಡಿಸುತ್ತವೆ ಕಣ್ಣಂಚನು. ಮಳೆಯ ರಭಸದೊಂದಿಗೆ ನೆನಪಿನ ಹರಿವು ತೀವ್ರವಾಗುತ್ತಾ ಸಾಗುತ್ತದೆ. ಈ ಭಾವವು ವಯಸ್ಸಿನ ಭೇದವಿಲ್ಲದೆ ಸರ್ವರನ್ನು ಏಕರೂಪದಿಂದ ಕಾಡುತ್ತದೆಂಬುದೇ ಇದರ ವಿಶೇಷತೆ. ಮಳೆಗಾಲದೊಂದಿಗೆ ಕೆಲವು ಎಂದೂ ಬದಲಾಗದ ಪರಿಪಾಠಗಳು ಪರಂಪರೆಯಾದಂತೆ ತೋರುತ್ತದೆ. 

“ನಮ್ಮ ಕಾಲದ ಮಳೆಯ ಮುಂದೆ ಈಗಿನ ಮಳೆ ಏನೇನು ಅಲ್ಲ” ಎಂದು ಶುರುವಾಗುವ ಆನುಭವಿ ಹಿರಿಜೀವಿಗಳ ಮಾತು, ತಮ್ಮ ಜೀವನದ ಸಾಹಸಗಾಥೆಗಳನ್ನು ಅನಾವರಣಗೊಳಿಸುವ ಹಾದಿಯಾಗುತ್ತದೆ. ತಮ್ಮ ಜೀವನದ ನೋವು-ನಲಿವುಗಳು ಮುಂದಿನ ಪೀಳಿಗೆಯ ಹೃದಯಗಳಿಗೆ ತಲುಪಿ ಸ್ಪೂರ್ತಿದಾಯಕವಾಗುವುದು ಎಂಬ ಅರಿವು ಅವರಲ್ಲಿ ಸುಪ್ತವಾಗಿರುವುದಲ್ಲವೆ! ಮೊದಲ ಬಾರಿಗೆ ತಮ್ಮ ಜೀವನ ಸಂಗಾತಿಯನ್ನು ಕಂಡದ್ದು, ಚಿಕ್ಕವಯಸ್ಸಿನಲ್ಲಿಯೆ ಮದುವೆ ಮಾಡಿದ್ದು, ಮೊದಲ ಸಲ ಅಡುಗೆ ಮಾಡಿದ್ದು ಶಾಲೆಯ ಅಂಗಳಕ್ಕೇರಲು ಪಟ್ಟ ಪಾಡು ಹೀಗೆ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಇದು ಹಳೆ ದೇಹಗಳ ಕಥೆಯಾದರೆ ಅವರ ಮಡಿಲಲ್ಲಿ ಮಲಗುವ ಎಳೆ ಜೀವಗಳ ಜಗತ್ತೇ ವಿಭಿನ್ನ-ವಿಶಿಷ್ಟ. 



ಕೈಗೂಸು ಗುಡುಗು-ಸಿಡಿಲಿನ ಆರ್ಭಟಕ್ಕೆ ಬೆದರಿಕೊಂಡರೂ ಮಳೆ ನೀರು ಕೆಳಗಿಳಿಯುವುದು ಮೊಗದಲ್ಲಿ ಹೂನಗುವನ್ನರಳಿಸುತ್ತದೆ. ಇನ್ನು ಶಾಲೆಯ ಮೆಟ್ಟಿಲು ಹತ್ತಿರುವ ಮಕ್ಕಳಲ್ಲಿ ಬೆಳ್ಳಂಬೆಳಗ್ಗೆ ಸುರಿಯುವ ಮಳೆ ಹಾಸಿಗೆ ಬಿಟ್ಟು ಮೇಲೇಳಲು ಆಲಸ್ಯವನ್ನುಂಟು ಮಾಡುತ್ತದೆಯಾದರೂ ಅಮ್ಮನ ಒತ್ತಾಯಕ್ಕೆ ಮಣಿದು ತಯಾರಾಗಿ ಮನೆಯಿಂದ ಹೊರಗೆ ಕಾಲಿಟ್ಟ ಕೂಡಲೆ ಮಳೆ ಹನಿಗಳೊಂದಿಗೆ ನರ್ತಿಸಲು ಪ್ರಾರಂಭಿಸುತ್ತಾರೆ. ಆಗ ಅಮ್ಮನಂತೂ ಸೋತು ಸುಣ್ಣವಾಗುವುದೊಂದೆ ಬಾಕಿ. ಇಲ್ಲಿಗೆ ಈ ಗೋಳು ಮುಗಿಯದೆ ಮನೆಗೆ ವಾಪಾಸಾಗುವಾಗ ಗೆಳೆಯರೊಂದಿಗೆ ಆಡಿ ಮೈಯೆಲ್ಲ ಕೆಸರು ಮೆತ್ತಿ ಬಂದಾಗ ತಾಯಿಯಾದವಳಿಗೆ ಮಗುವಿನ ಚಿಂತೆಯೊಂದಿಗೆ ಯುನಿಫಾರಂ ಚಿಂತೆ ಸೇರಿಕೊಳ್ಳುತ್ತದೆ. 



ಮಳೆಗಾಲ ಮನೆಯೊಡತಿಗೆ ಚಿಂತೆಗಳ ಆಗರವನ್ನೇ ಹೊತ್ತು ತರುವುದೆಂಬ ಆಲೋಚನೆ ಮನಸ್ಸಿಗೆ ಬಂದರೆ ಅಚ್ಚರಿಯೇನಿಲ್ಲ! ಈ ಕಾಲ ಆಕೆಯೆಡೆಗೆ ಮಕ್ಕಳ- ಮನೆಯವರ ಆರೋಗ್ಯದ ಚಿಂತೆ ಹೊತ್ತು ತರುವುದರ ಜೊತೆಗೆ ತನ್ನ ದೈನಂದಿನ ಕೆಲಸಗಳಿಗೆ ವಿಘ್ನವೊಡ್ಡುವ  ಮಳೆರಾಯನ ಮೇಲೆ ತುಸು ಮುನಿಸಿಕೊಳ್ಳುತ್ತಾಳೆ. ಮಳೆಗಾಲದಲ್ಲಿ ಆಗಾಗ ಕೈಕೊಡುವ ಕರೆಂಟು ಬೆಳಗಿನ ತಿಂಡಿ, ಚಟ್ನಿ, ಸಾಂಬಾರುಗಳ ಕೆಲಸವನ್ನು ದ್ವಿಗುಣಗೊಳಿಸುತ್ತದೆ. ಒಣಗದ ಬಟ್ಟೆಗಳ ರಾಶಿ ಅವಳಿಗೆ ಸವಾಲೊಡ್ಡುತ್ತದೆ. ಮನೆ ಮಂದಿಯ ಹೆಚ್ಚುವ ಬಾಯಿಚಪಲದಿಂದ ಸಂಜೆಗೆ ಕುರುಕಲು ತಿಂಡಿ ತಯಾರಿಸುವುದು ಅವಳ ನಿತ್ಯ ಕೆಲಸಗಳ ಭಾಗವಾಗುತ್ತದೆ. ಆದರೂ ಬಿಸಿಲ ಝಳಕ್ಕೆ ನಲುಗಿದ್ದ ಆಕೆಯ ಜೀವಕ್ಕೆ ತಂಪನೀಯುವುದು ಸಹ ಈ ಮಳೆರಾಯನೇ... 

ಬಹುಮುಖ್ಯವಾಗಿ ಮಳೆ ನವಿರಾದ ಭಾವಗಳನ್ನೆಬ್ಬಿಸುವುದು ಹದಿಹರೆಯದವರಲ್ಲಿ ಮತ್ತು ಯುವಮನಸುಗಳಲ್ಲಿ. ಕಾಲೇಜು-ಗೆಳೆಯ-ಗೆಳತಿಯರ ಸಂಗಡದಲ್ಲಿರುವ ಈ ಜೀವಗಳು ಮಳೆಯಲ್ಲರಳುವ ಭಾವಗಳಲ್ಲಿ ಮಿಂದೇಳುತ್ತಾರೆ. ಪ್ರೀತಿ-ಪ್ರೇಮಗಳ ಬಲೆಯಲ್ಲಿ ಬಿದ್ದವರು ಬೀಳುವ ಪ್ರತಿ ಹನಿಯಲ್ಲು ಪ್ರೇಮದ ದನಿ ಕೇಳುತ್ತಾರೆ. ಇದನ್ನು ಹೊರತುಪಡಿಸಿ ಮಳೆಯಲ್ಲಿ ನೆನೆದು ಹಸಿರ ರಾಶಿ ಮೆರೆಯುವಾಗ ಹೊಸ ಆಲೋಚನಾ ಸರಣಿಯನ್ನು ಕಂಡುಕೊಳ್ಳುವ ಯುವಕ-ಯುವತಿಯರಿಗೂ ಕೊರತೆಯೇನಿಲ್ಲ. 
ಕವಿಮನಸುಗಳಲ್ಲಿ ಬಿದ್ದ ಹನಿಯು ಮೊಳಕೆಯೊಡೆದು ಕಥೆ-ಕವನ-ಲೇಖನಗಳಾಗಿ ಅರಳುತ್ತವೆ. ಚಿತ್ರಕಾರರ ಕುಂಚಗಳಲ್ಲಿ ಅದ್ಭುತ ಚಿತ್ರವಾಗಿ ಹೊರಹೊಮ್ಮುತ್ತದೆ.


 ರೈತನಲ್ಲಿ ಹೊಸ ಹುರುಪು ತುಂಬುವ ಹನಿಗಳು ಬರೀ ಸಣ್ಣ ಹನಿಯಾಗಿರದೆ ಹೊಸ ಆರಂಭದ ದನಿಯಾಗುತ್ತದೆ. ಪುಟ್ಟಪುಟ್ಟ ಹನಿಗಳು ನೆಲವನೆಲ್ಲ ಹಸಿಯಾಗಿಸಿ ದೊಡ್ಡ ಪಾಠವನ್ನೇ ಕಲಿಸುವಂತೆ ಕಾಣುತ್ತವೆ...
ಮಳೆಹನಿಗಳು- ನೆನಪಾಗಿ, ಅನುಭವಗಳಾಗಿ, ಜೀವನವಾಗಿ, ನವಾರಂಭದ ಗಣಿಯಾಗಿ,ಕೊನೆಗೆ ಜಗತ್ತಾಗುವುದು ವಿಶೇಷವೇ ಹೌದು...

-ಪಲ್ಲವಿ ಕಬ್ಬಿನಹಿತ್ಲು


WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM

👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE..

-KADUGUSUMA

(ವಿಶೇಷ ಪ್ರಕಟಣೆ:

ಇದೇ ಪ್ರಯತ್ನದಲ್ಲಿ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇವೆ. ನಮ್ಮ ಬ್ಲಾಗ್ ಓದುಗರಲ್ಲಿ ಬರೆಯುವವರೂ ಇದ್ದಾರೆ. ಅವರಿಗಾಗಿಯೇ ಒಂದು ದಿನದ ಪ್ರಕಟಣೆಯನ್ನು ಮೀಸಲಿಡುವ ಪ್ರಯತ್ನ. ಆಸಕ್ತಿ ಉಳ್ಳವರು ತಮ್ಮ ಕನ್ನಡ ಬರಹವನ್ನು 

kadugusumaofficial@gmail.com 

ಗೆ E-Mail   ಮಾಡಬಹುದು. ಆಯ್ದ ಬರಹಗಳನ್ನು ಪ್ರತಿ ಭಾನುವಾರ 'ಓದುಗರ ಕಾಲಂ' ನಲ್ಲಿ ಪ್ರಕಟಿಸುತ್ತೇವೆ.

ಧನ್ಯವಾದಗಳೊಂದಿಗೆ,

-ಕಾಡುಗುಸುಮ)

Comments

  1. 👌👌, ಮೊದಲ ಮಳೆ ಹಾಗೂ ಮಣ್ಣಿನ ಪರಿಮಳ ಪ್ರಕೃತಿಪ್ರಿಯರಿಗೆ ಸದಾ ಸವಿನೆನಪು....

    ReplyDelete
  2. ನೂರು ಭಾವಗಳನ್ನು ನಮ್ಮೆದೆಯಲ್ಲಿ ಬಿತ್ತುವ ಮಳೆ ಹನಿ ಭಗವಂತನ ಅಧ್ಬುತ ಸೃಷ್ಟಿಯೇ ಸರಿ. ಬಾಲ್ಯದ ಆ ಭಾವುಕ ಕ್ಷಣಗಳು ಮತ್ತೊಮ್ಮೆ ಭಾವ ಲಹರಿಯಲ್ಲಿ ತೇಲಿ ಹೋಯಿತು. .. .🥳🥳🌹🌹

    ReplyDelete
  3. Sihi nenapugalu nage honalanu harisidare, kahi nenapugalu hanigoodisuttave kannanchanu,sundaravada saalugalu Pallavi.

    ReplyDelete
  4. Replies
    1. ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು

      Delete

Post a Comment

Popular posts from this blog

THE LONGING…

One-sided!

Winter Inside!