ಹುಚ್ಚು ಮನಸಿನ ಸುತ್ತ...

-೧- 

 ತಲುಪಬೇಕಾದ ಗುರಿಯನು ತಲುಪುವುದು ಕಠಿಣವೇನಲ್ಲ;

 ಎಲ್ಲವನು ಬಿಟ್ಟು ಗುರಿಯೆಡೆಗೆ ದೃಷ್ಟಿಯ ನೆಟ್ಟು ಸಾಗಲು... 

ಹೀಗಾದಾಗ ನಾನು ಗೆದ್ದೆನೆಂದರೆ ಸರಿಯೇನು?!

ತರವಲ್ಲ ಮನಸೇ, 

ಗೆಲುವಡಗಿರುವುದು,

ಸಾಗುವ ದಾರಿಯುದ್ದಕ್ಕೂ ಸಿಗುವ ಸಂಬಂಧಗಳ ದಾರಗಳನು ಕಡಿಯಗೊಡದೆ,

ಬೆಸೆದ ಬಂಧಗಳ ಕೊಂಡಿಯನುಳಿಸಿಕೊಂಡಾಗ...

-------------------------------------------------------------------------------------------------------------------------------

-೨-

ಮನ ಮಸಣವಾದರೆ ಸುತ್ತೆಲ್ಲ ಕಾಣುವುದು ಹೆಣಗಳೇ!

ನಿನ್ನೊಳಗೆ ನಗೆ ಮಲ್ಲಿಗೆ ಅರಳಿಸುವುದನು ಕಲಿತಾಗ,

ಕಲ್ಲಲ್ಲೂ ಕಲೆಯೇ ಕಾಣುವುದಲ್ಲವೇ?!

ಕಣ್ಣು ನೋಡಿತಾದರೂ ಕಾಣಿಸುವುದು ನೀನೇ ತಾನೆ?!

ಇದೆಲ್ಲವನೂ ಮರೆತು,

ಸುತ್ತಲಿನವರೆಲ್ಲರೂ ಶತ್ರುಗಳೆಂದರೆ ಹೇಗೆ, ಮನವೇ?!

ಸ್ನೇಹದ ಜೇನ ಸುರಿಸಿ ಮರೆಸಿಬಿಡು ನೋವನು....

-------------------------------------------------------------------------------------------------------------------------------

 -೩-

ಬೆಳಕಿನೆಡೆಗೆ ನಡೆವ ಹಾದಿಗೆ,

ಬೇಲಿ ಹಾಕಿಕೊಂಡದ್ದೂ ನೀನೇ ತಾನೆ?!

ನೀನು ಹೊಸತರೆಡೆಗೆ ನಡೆವೆನೆಂದರೆ,

ತಡೆವರಾರು ಮನವೇ?!

-------------------------------------------------------------------------------------------------------------------------------

 -೪-

ವಿಚಿತ್ರ ವಿಚಾರಗಳು;

ವಿಶಿಷ್ಟ ಚಿಂತನೆಗಳು;

ಕೆಲಸಕ್ಕೆ ಬಾರದ ಚಿಂತೆಗಳು;

ಒಳಗೊಳಗೆ ಉರಿಯುತ್ತಲೇ ಉಳಿಯುವ ನೋವಿನ ಚಿತೆಗಳು;

ನೆನ್ನೆಗಳಲ್ಲಡಗಿದ ನಗುವಿನ ಕಥೆಗಳು;

ಎಲ್ಲವೂ ನಿನ್ನದೇ ನಿಜ...

ಅಷ್ಟೇ ಸತ್ಯ ಅವುಗಳಲಿ ಉಳಿಸಿಕೊಳ್ಳುವುದಾವುದೆಂಬ ಆಯ್ಕೆಯೂ ನಿನ್ನದೇ!!

-------------------------------------------------------------------------------------------------------------------------------

 -೫-

 ಇರುವುದಕ್ಕೊಂದು ಠಿಕಾಣಿ ಹುಡುಕಿಕೊಳ್ಳಬಾರದೆ ನೀನು?!

ಸುಳಿಯುತ್ತಲೇ ಇರುವೆಯಲ್ಲ ಮನವೇ,

ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ...

ಕಲಿಯಲಿಲ್ಲ ನೀನು ಒಂದೆಡೆ ಉಳಿಯುವುದನು,

ಎಲ್ಲೆಲ್ಲಿಗೋ ಹಾರಾಡಿ ಕಳೆಯುವ-ಕೊಳೆಯುವುದಕ್ಕಿಂತ,

ಇರುವಲ್ಲೇ ಕಳೆದು ಹೋಗಿ ಬೆಳೆಯುವುದು ಚೆನ್ನೆನಿಸದೆ ನಿನಗೆ...

------------------------------------------------------------------------------------------------------------------------------- 

-೬-

ಇಷ್ಟಕ್ಕೇ ಬದುಕು ಮೀಸಲೆಂಬ ಸರಹದ್ದನ್ನು ದಾಟಿ ನೋಡೊಮ್ಮೆ,

ಮನವೇ,

ಅಲ್ಲಿರುವುದು ವಿಶಾಲವಾದ ಆಗಸ,

ಬದುಕನ್ನು ಬಾಳಾಗಿಸುವ ಬೆಳಕು...

------------------------------------------------------------------------------------------------------------------------------- 

-೭-

ಗೆಲುವಿನ ಹಿಂದಿದ್ದ ಶ್ರಮವೆಲ್ಲಾ ನನ್ನದೆನ್ನುವ ನೀನು;

ಸೋಲಿನ ಭಾರವನ್ನು ಹೊರಿಸಲು,

ಹುಡುಕುವುದೇಕೆ ಅವರಿವರ ಹೆಗಲನ್ನು?!

ಒಪ್ಪಿಕೊಂಡು ನೆಲಕಚ್ಚಿದ ಕ್ಷಣವನ್ನು;

ಕಟ್ಟಿಕೊಳ್ಳಬಾರದೆ ಮತ್ತೊಮ್ಮೆ ಪಯಣಿಸುವ ಛಲವನ್ನು?!

------------------------------------------------------------------------------------------------------------------------------- 

-೮-

ಸುತ್ತಲಿನ ಬೆಳಕನು,

ಒಪ್ಪಿಕೊಳ್ಳುವ ಹುರುಪಿರಲಿ, ನಿನ್ನಲ್ಲಿ;

ಕತ್ತಲಿನಿಂದ ಹೊರ ಬಂದಾಗಲೇ,

ಬೆಳಕಿನೆಡೆಯಲ್ಲೂ ಹೊಳೆವ ಬೆಳಕಾಗಬಹುದು ನೀನು...

-ಪಲ್ಲವಿ ಕಬ್ಬಿನಹಿತ್ಲು

👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE...

WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM

-KADUGUSUMA

Comments

Post a Comment

Popular posts from this blog

THE LONGING…

One-sided!

Winter Inside!