ಮಾತಾಗದ ಮೌನದ ದನಿ ಕೇಳುವಾಸೆಯಲಿ...



ಕರೆ-ಕರೆದು ಕೊರಗಿದರೂ
ಮೌನವಾದೆ ನೀನು...
ಮರೆಯಾಗುವುದು ನಿನಗೆ ಸರಳವಾಗಿತ್ತೆಂದರೂ
ನಿನ್ನ ಮರೆಯುವುದು ಸುಲಭವಲ್ಲವೆನಗೆ...

ನಿನ್ನ ಕೊನೆಯುಸಿರಿನ ಬಿಸಿಯನ್ನೂ
ತಾಗಗೊಡಲಿಲ್ಲ ನೀನೆನಗೆ, 
ಕೈತಣ್ಣಗಾಗುವಾಗಿನ ನೋವಿನ ಕರೆಯನ್ನೂ
ಮೌನವಾಗಿ ನುಂಗಿಕೊಂಡೆ ನೀನು...

ಉಸಿರಿರುವಾಗ ಉಸುರಲಿಲ್ಲ  ಹಸಿರಿರುವ
ಭಾವಗಳನು ನಾವಿಬ್ಬರೂ ಒಬ್ಬರಿಗೊಬ್ಬರೆಂದು...
ಮರವಾದ ನಿನ್ನನು ಲತೆಯಾಗಿ ಹಬ್ಬುವೆನೆಂಬ ತವಕದಲಿದ್ದೆ,
ಬೇರಿಗೆ ಗೆದ್ದಲು ಹಿಡಿದಿದ್ದರ ಅರಿವಿಲ್ಲದೇ!!



ನೋವುಣ್ಣಬಾರದು ನಾನೆಂದು ನೀ ದೂರವೇ
ಉಳಿದು ಬಿಟ್ಟರೂ ಹತ್ತಿರವಾಗಿತ್ತು ಹೃದಯಗಳು...
ಒಂದಾದ ಎದೆಯ ಬಡಿತವಿಂದು ನಿಂತುಬಿಟ್ಟಿದೆ,
ಜೀವನ ಚಕ್ರ ಮುಂದೆ ಸಾಗೆನೆಂದು ಕುಳಿತುಬಿಟ್ಟಿದೆ.. 



ಆದರೂ ಮೌನವಾದ ನಿನ್ನ ಮಾತುಗಳ ಕೇಳಿದರೆ,
ಉಳಿಯಬೇಕೆನಿಸುತ್ತದೆ,
ಲತೆಯಾಗಿ ನೆಲವಿಡೀ ಹಬ್ಬಿ ಹೂವಾಗಬೇಕೆನಿಸುತ್ತದೆ...
ದುಂಬಿಯಾಗಿ ನೀ ಬರುವೆ 
ಹೇಳಲಾಗದ  ಭಾವಗಳ ಹೇಳಲು ಎಂಬಾಸೆಯಿಂದ....

-ಪಲ್ಲವಿ ಕಬ್ಬಿನಹಿತ್ಲು

Comments

Post a Comment

Popular posts from this blog

She Held On, He Let Go!

Is just loving enough?!

ಬಿಳಿ ಬದುಕು...