(ವಿ)ಚಿತ್ರ ಹನಿಗಳು-2
----------------------1-------------------------
ಜೀವನ
ಕಸೂತಿ ಹಾಕುವಾಸೆಯಾಯಿತು:
ಸೂಜಿ-ದಾರಗಳು ಕೈಗೆಟಕಲಿಲ್ಲ!
ಮನಸೆಂಬ ಸೂಜಿಗೆ ಪೋಣಿಸಿದೆ ದಾರಗಳನು,
ಬದುಕ ಅರಿವೆಯ ಮೇಲೆ ಚಿತ್ತಾರ ಬಿಡಿಸಲು;
ಖುಷಿಯ ಎಳೆಗಳಿಗೆ ಒಂದಿಷ್ಟು,
ದುಃಖದೆಳೆಗಳೆಗಳನು ನಡುವಲಿ ಸೇರಿಸಿದೆ...
ಪ್ರೀತಿಯ ರಂಗಿನಲ್ಲದ್ದಿ ಹೆದರಿಕೆ, ಹೇಸಿಗೆ,ಅಸೂಯೆಗಳನೂ ಚಿಮುಕಿಸಿದೆ...
ಕರುಣೆ, ತ್ಯಾಗ, ದ್ವೇಷಗಳನ್ನೂ ಬಿಡಲಿಲ್ಲ...
ಚಿತ್ತಾರ ಮೂಡಿತು ಜೀವನದ್ದು!!
----------------------2-------------------------
ಭರವಸೆ
ಈ ಕ್ಷಣವನು ಕೈಜಾರಿ ಹೋಗದಂತೆ ಕಟ್ಟಿ ಹಾಕುವಾಸೆ,
ಕಳೆದುಕೊಂಡರೆ ಸಂತಸದ ಘಳಿಗೆ ಮತ್ತೆ ಸಿಗದೆಂಬ ಅಳುಕು ಕೂಡ,
ಕಾಣಬೇಕಿರುವ ಹೊತ್ತಿನಲಡಗಿರಬಹುದಾದ ನೋವು,
ಈ ಹೊತ್ತಿನ ಖುಷಿಯ ಮತ್ತನು ಇಳಿಸಿ ಬಿಟ್ಟರೆ ಎಂಬ ಅಂಜಿಕೆಯ ಸೇರಿಸಿಕೊಂಡು,
ಕೇಳಿಯೇ ಬಿಟ್ಟೆ ಕಾಲದ ಕೈ ಹಿಡಿದು ನಿಂತು ಬಿಡೆಂದು...
ಮುಂದಿನ ಕ್ಷಣದಲ್ಲಡಗಿರಬಾರದೆ ಹೆಚ್ಚಿನ ಖುಷಿಯೆಂಬ ಭರವಸೆಯ ಸವಾಲನ್ನೆಸೆದು,
ಭದ್ರ ಹಿಡಿತದೆಡೆಯಲ್ಲಿ ಉತ್ತರವಿಲ್ಲದ ಪ್ರಶ್ನೆಯನ್ನು ಮುಂದಿಟ್ಟಿತು ಸಮಯ!
ನಿರುತ್ತರನಾಗಿ
ಕೈ ಬಿಟ್ಟೆ ಕಾಲಕ್ಕೆ ಕಾಲುವೆ ಕಟ್ಟುವ ಕನಸನು....
ಮರೆತುಬಿಡು ನನ್ನನ್ನು
ಎಂದಷ್ಟು ಸುಲಭವಲ್ಲ;
ನನ್ನೊಲವೇ,
ಹಸಿಮಣ್ಣಿನಂತಿದ್ದ ನನ್ನೆದೆಯೊಳಗೆ,
ನೀನೂರಿದ ಹೆಜ್ಜೆ ಗುರುತನ್ನು ಅಳಿಸುವುದು...
ಗೆಳೆತನದ ಪಾಠ ಹೇಳಲು ಚಂದಿರನೇ ಬರಬೇಕಷ್ಟೆ...
ಹಗಲೆಲ್ಲಾ ಅಡಗಿದ್ದು ಕತ್ತಲಾದಾಗ ಬೆಳಕಾಗುತ್ತಾನೆ;
ಖುಷಿಯಲ್ಲಿ ಜೊತೆಯಿರದಿದ್ದರೂ
ನೋವಲ್ಲಿ ಹೆಗಲಾಗುವ ಗೆಳೆಯನ ಹಾಗೆಯೇ!!
-ಪಲ್ಲವಿ ಕಬ್ಬಿನಹಿತ್ಲು
👌👌
ReplyDeleteThank You
Delete'Hasi manninantidda nannedeyolage, ninoorida hejjeya gurutu' beautiful lines.
ReplyDeleteNice
ReplyDeleteThank You
Delete