ನಾನೂ, ನೀವೂ ಹೆಸರಿಲ್ಲದ ಭಾವವೂ...


ಜನುಮದ ಗೆಳೆತನಕ್ಕೆ ಒಪ್ಪಿಗೆ ಹಾಕಿ ಅದೆಷ್ಟು ವರ್ಷಗಳು ಸಂದವು?! ನನ್ನ ಮುಖದಲ್ಲಿ ನೆರಿಗೆಗಳಿರದ ನಿಮ್ಮ ಮೊಗದಲ್ಲಿದ್ದ ಮೀಸೆ ಕಪ್ಪಾಗಿದ್ದ ಸಮಯವಲ್ಲವೆ ಅದು! ಹೆದರಿಕೆಯ ಮುದ್ದೆಯಾದ ನನ್ನನ್ನು ನೀವು ಅಂದಿನ 'ನಿಮ್ಮ' ಇಂದಿನ 'ನಮ್ಮ' ಮನೆಗೆ ನನ್ನ ತಂದುಕೊಂಡದ್ದು...
ಈಗ ಕೂದಲು ನರೆತಿದೆ, ಕಣ್ಣು ಮಂಜಾಗಿದೆ... ಆದರೂ ಜೊತೆಯಾಗಿಯೇ ಇರುವೆವಲ್ಲ!!  ಪ್ರೀತಿ-ಪ್ರೇಮ ಎಂದರೆ ಇದುವೆಯೇ? ನಾನಾಗಲೀ-ನೀವಾಗಲೀ ಭಾವನೆಗಳಿಗೆ ಹೆಸರಿಟ್ಟಿದ್ದಿಲ್ಲ, ಪ್ರೀತಿಯೋ, ಕೋಪವೋ, ಮಮತೆಯೋ, ರೋಷವೋ ಎಲ್ಲವನ್ನೂ ಸ್ವಭಾವ ಎಂದು ಒಪ್ಪಿಕೊಂಡೆವು. 
ಮದುವೆಯ ಬಂಧ ಬಂಧನವಾಗಿದ್ದ ಕಾಲದಲ್ಲೂ ನನಗೆ ಹಾಗನಿಸಲಿಲ್ಲ. ನಿಮ್ಮೆದೆಗೆ ಒರಗಿಕೊಂಡು ಕನಸುಗಳ ಹೆಣೆದದ್ದೂ ಇಲ್ಲ, ನಿಮ್ಮ ಕೋಪ ತಣಿಸಲು ನಾನು ನಿಮ್ಮಿಷ್ಟದ ಅಡುಗೆ ಮಾಡಿ ತಂದಿಟ್ಟದ್ದೂ ಇಲ್ಲ... ಈ ಇಲ್ಲಗಳ ನಡುವೆ ಇದ್ದದ್ದೇನು ಹಾಗಾದರೆ?!
ಅತ್ತೆ-ಮಾವನ ಇಳಿ ವಯಸ್ಸಿನ ಜವಾಬ್ದಾರಿಗಳೇ? ಮಕ್ಕಳ ಸಾಲು-ಸಾಲು ಕರ್ತವ್ಯದ ಕರೆಗಳೇ? ಮನೆ ಖರ್ಚುಗಳ ನಿಭಾಯಿಸಬೇಕಾದ ಹೊಣೆಗಾರಿಕೆಯೇ? ಮನೆಗೆಲಸದ ನಡುವಿನಲ್ಲೂ ನೋವು- ನಲಿವುಗಳಿಗೆ ಹೆಗಲುಗೊಡಲೇ ಬೇಕಾದ ಅನಿವಾರ್ಯತೆಯೇ? ಹೌದು ಎಂದು ಬದುಕು ಒಪ್ಪಿಕೊಳ್ಳದು... ಈ ಜವಾಬ್ದಾರಿಗಳು ಒಂದೊಂದಾಗಿ ಮುಗಿದರೂ ನಾವಿಬ್ಬರೂ ಜೊತೆಯಾಗಿದ್ದೇವೆ... ಇಲ್ಲ ಅನ್ನಲೂ ಸಾಧ್ಯವಿಲ್ಲ, ಇವುಗಳನ್ನು ಒಡಗೂಡಿ ಎದುರಿಸಿದವರು ನಾವು...



ಇವೆಲ್ಲವನ್ನೂ ಮೀರಿದ ಭಾವವೊಂದು ನಮ್ಮನ್ನು ಕೊಂಡಿಯಂತೆ ಬೆಸೆದಿದೆ... ಈ ಭಾವಕ್ಕೆ ಹೆಸರಿಡಬಹುದೇ?! ಇನ್ನೂ ಹಲ್ಲುಗಳು ಉದುರಿಲ್ಲ; ಹಲ್ಲುಗಳುದುರಿ ಈ ಎರಡು ಹಣ್ಣುಗಳುದುರುವವರೆಗೆ ಜೊತೆಯಾಗಿ ಪ್ರಯತ್ನಿಸೋಣ... ಈಗ ನಾವು ನಾವಾಗಿರಲು ಕಾರಣ, ನಾನೂ ನೀವೂ ಈ ಹೆಸರಿಲ್ಲದ ಭಾವವೆಂದೆನಿಸದೇ?!




-ಪಲ್ಲವಿ ಕಬ್ಬಿನಹಿತ್ಲು

Comments

Post a Comment

Popular posts from this blog

DREAMS…

ಕಾಫಿಯ ಕಪ್ಪು

ಬಿಳಿ ಬದುಕು...