Posts

ಸಾಗರದಂತವಳು

Image
ಸಮುದ್ರ ತೀರದ ಉಸುಕಿನ ಮೇಲೆ ಶೂನ್ಯಕ್ಕೆ ದೃಷ್ಟಿ ನೆಟ್ಟು ಸೋತವರಂತೆ ಮೈಚಾಚಿ ಮಲಗಿರುವ ಅವಳೊಳಗೂ ಉಪ್ಪು ನೀರಿನ ಕಡಲೊಂದಿದೆ... ಅಲ್ಲಿ, ಎಡೆಬಿಡದೆ ಎದೆ ಚುಚ್ಚುವ ನೋವಿಗೆ ಕರಗಿದ ಕಂಬನಿಯ ಬಿಂದುಗಳಿವೆ, ಕಟ್ಟೆಯಿಲ್ಲದೆ ಹರಿದ ಸಂತಸದ ಹೊಳೆಯ ಸಿಹಿ ನೀರೂ ಸೇರುವುದು ಅದೇ ಕಡಲಿಗೆ! ಬಿಸಿಲು-ಮಳೆ ಎನ್ನದೆ ದುಡಿದಾಗ ಸುರಿದ ಬೆವರೂ ಬೆರೆತದ್ದೂ ಅದೇ ಕಡಲ ನೀರಿಗೆ ! ಅವಳ ಬದುಕಿನ ಕ್ಷಣ - ಕ್ಷಣವೂ ಹನಿ - ಹನಿಯಾಗಿ ಸೇರಿಕೊಂಡದ್ದೂ ಅದೇ ಕಡಲಿಗೆ; ಅಲ್ಲಿರುವುದು ಅವಳ ಸರ್ವಸ್ವ. ಅಲ್ಲಿರುವುದು ಅವಳ ಸರ್ವಸ್ವವೆಂಬುದು ದಿಟವಾದರೂ ಆಗಾಗ ಆ ಉಪ್ಪು ನೀರಿನ ಕಡಲು ಅವಳಿಗೆ ಭಾರವೆನಿಸುತ್ತದೆ!! ಆಗ ಎಲ್ಲಾ ಒಳಗಿಳಿಯದೆ ಚೂರು - ಚೂರು ಸೋರಿ ಕಳೆದುಹೋಗುತ್ತಿದ್ದರೆ ಚೆನ್ನಿತ್ತು ಎಂದುಕೊಳ್ಳುತ್ತಾಳೆ... ಕೂಡಲೇ ತಲೆ ಕೊಡವಿ, ಹಾಗಿರದಿದ್ದರೇನಾಯಿತು? ಕಡಲೆಂದರೆ ಬಲು ಪ್ರೀತಿ ನನಗೆ ಎನ್ನುತ್ತಾ ಕಡಲ ದಡದ ಮರಳಲ್ಲಿ ಮೈ ಚೆಲ್ಲುತ್ತಾಳೆ, ತನ್ನೊಳಗಿನ ಕಡಲಿ ಭೋರ್ಗರೆತದ ಸದ್ದು ಹೊರಗಿರುವ ಸಮದ್ರದ ಅಲೆಗಳ ಗರ್ಜನೆಗೆ ಹೆದರಿ ಸುಮ್ಮನಾಗುವವರೆಗೂ ಅಲ್ಲೇ ಬಿದ್ದುಕೊಳ್ಳುತ್ತಾಳೆ... ಏಳುವಾಗ ಮೊಗದ ಮೇಲೊಂದು ನಗು,  ಒಡಲೊಳಗೆ ಶಾಂತ ಸಾಗರದ ಛಾಯೆಯನ್ನು ಚಿಮ್ಮುತ್ತಾಳೆ; ಅವಳು ಮತ್ತೆ ಬದುಕುತ್ತಾಳೆ... - ಪಲ್ಲವಿ ಕಬ್ಬಿನಹಿತ್ಲು

ಮಿನುಗು ತಾರೆ

Image
 ಬಯಕೆಗಳನ್ನೆಲ್ಲಾ ಮುರಿದು ಬೀಳುವ  ತಾರೆಗಳ ಬೆನ್ನಿಗೆ ನೇತು ಹಾಕಿದ್ದೇನೆ... ಹೊಳೆವ ತಾರೆಗಳಷ್ಟು ಆಸೆಗಳು  ಇನ್ನೂ ಒಳಗೊಳಗೇ ಮಿನುಗುತ್ತವೆ, ತಾರೆಗಳು ಉದುರಿದ ಹಾಗೆಯೇ  ಆಸೆಗಳು ಪೂರೈಸುತ್ತವೆ ಎಂಬ ಆಸೆ ನನಗೆ! ಆಗಸದಲ್ಲಿ ಹೊಳೆಯುವ ನಕ್ಷತ್ರಗಳ ನೋಡಲು ಕತ್ತಲಾಗುವುದಕ್ಕೆ ಕಾದು ಕುಳಿತುಕೊಳ್ಳುತ್ತೇನೆ... ಅವು ಒಂದೊಂದಾಗಿ ಮಿನುಗಲು ಶುರು ಹಚ್ಚಿಕೊಂಡಾಗ ಅಡ್ಡಲಾಗಿ ಮಲಗಿ ಕಣ್ಣು ತಲುಪಿದಷ್ಟೂ ದೂರ ದೃಷ್ಟಿ ಹಾಯಿಸಿ ನಕ್ಷತ್ರಗಳನ್ನು ಎಣಿಸುತ್ತೇನೆ, ಒಂದೊಂದಾಗಿ ಬಯಕೆಗಳನ್ನು ಹೆಣೆದು ಎಣಿಸಿದ ಪ್ರತೀ ನಕ್ಷತ್ರಕ್ಕೂ ತೊಡಿಸುತ್ತೇನೆ... ಆಗಾಗ ಕಣ್ಣುಗಳು ಕೈ ಕೊಡುತ್ತವೆ, ಆಗ ಎಣಿಸಿದ ತಾರೆ-ಎಣಿಸದ ತಾರೆಗಳಿಗೆ  ವ್ಯತ್ಯಾಸವೇ ಇಲ್ಲದಂತಾಗುತ್ತದೆ; ಆದರೂ ಎಣಿಕೆ ‌ಸಾಗುತ್ತಲೇ ಇರುತ್ತದೆ! ನನಗೂ ಎಲ್ಲೋ ಒಂದು ಕಡೆ ಅರಿವಿದೆ,  ಮುರಿದು ಬೀಳುವುದು ತಾರೆಗಳಲ್ಲವೆಂದು ಆದರೂ ಒಪ್ಪಿಕೊಳ್ಳುವ ಮನ‌ಸಿಲ್ಲ ನನಗೆ,  ಮುಗಿಲೆತ್ತರಕ್ಕೆ ಹಬ್ಬಿರುವ ಆಸೆಗಳು  ಪೂರೈಸುತ್ತವೆ ಎಂಬ ನಂಬಿಕೆ ಉಳಿಸಿಕೊಳ್ಳಬೇಕೆಂಬ ಹುಚ್ಚು ಹಂಬಲ ಎದೆಯೊಳಗೆ! ಬೆಳಕು ಹರಿದಾಗಲೂ  ಅಲ್ಲಲ್ಲಿ, ಸಂದು-ಗೊಂದುಗಳಲ್ಲಿ ಕತ್ತಲು ಅಡಗಿ ಕುಳಿತುಕೊಳ್ಳುತ್ತದೆ, ಆ ನಿಶೆಯಲ್ಲಿ ಮನಸು ಕನಸುಗಳ ಹೊಲಿಯುತ್ತಲಿರುತ್ತದೆ, ಹೊತ್ತೇರಿದ ಹಾಗೆ ಬಿಸಿಲಿನ ಝಳ ಬಯಕೆಗಳ ಸುಡದಿರಲೆಂದು ಮತ್ತಷ್ಟು ಮೂಲೆಯಲ್ಲಿ ಅಡಗಿಕೊಳ್ಳುತ್ತದೆ... ರಾತ್ರಿಯಾದಾಗ ಕ...

ಕಾಫಿಯ ಕಪ್ಪು

Image
ಕಾಫಿಯ ಕಪ್ಪು ಖಾಲಿಯಾಗಿದೆ, ಆದರೆ ಮಾತು ಶುರುವಾಗಲೇ ಇಲ್ಲ! ಅವಳು ಅವನೆದುರು ತಂದಿಟ್ಟದ್ದು  ಹಬೆಯಾಡುವ ಬಿಸಿ ಕಾಫಿಯ ಕಪ್ಪು ಅದು ಅವನಿಗಿಷ್ಟವಾದದ್ದು... ಬಂಧ ಬಂಧನವಾಗಿ ಕೊಂಡಿ ಕಳಚಿದ ಮೇಲೆ ಮಾತು ಕಿರಿಕಿರಿಯೆನಿಸಿದರೆ ಮೌನ ಅಸಹನೀಯ! ತಿಂಗಳುಗಳು ಕಳೆದರೂ ಅವನ ಕಂಡಾಗ ಅವಳ ನಿಟ್ಟುಸಿರ ದಟ್ಟತೆ ಕದಡಿ ಹೋದಂತಿಲ್ಲ: ಅವಳೆದುರು ಬಂದಾಗ ಅವನ ಹುಬ್ಬುಗಳು ಗಂಟಾಗದೆ ಉಳಿಯುವುದೇ ಇಲ್ಲ! ಸಪ್ತಪದಿ ತುಳಿದವರ ಹಾದಿ ಬೇರೆಯಾದಾಗ  ನಡುವೆ ಉಳಿದುಕೊಳ್ಳುವುದು ಕಂದಕ ಮಾತ್ರ!! ಮೌನದೊಳಗೆ ಹೂತು ಹಾಕಿದ್ದ ಮಾತುಗಳು ಮಾತಾಗದೆ ವ್ಯಾಜ್ಯಗಳಾಗಿದ್ದವು  ಕಗ್ಗಂಟಿನ ಗಂಟುಗಳ ಸಡಿಲಿಸಲು ಕ್ಷಮೆಗಾಗಿ ಇಂದಿನ ಭೇಟಿ! ಆ ಹೊತ್ತಿಗೆ ಜೊತೆಯಾಗಿ ನಕ್ಕ ಕ್ಷಣಗಳೆಲ್ಲಾ ಹೃದಯದ ಮೆದು ಪದರವನ್ನು ಚುಚ್ಚಿಕೊಂಡವು... ಕಣ್ಣಲ್ಲಿ ನೀರಾಡಿತು, ಆದರೆ ಮಾತು ಶುರುವಾಗಲೇ ಇಲ್ಲ; ಖಾಲಿ ಕಪ್ಪಿನ ತಳದಲ್ಲಿ ಒಂದಷ್ಟು ಕಪ್ಪು ಕರಿ ಉಳಿದುಕೊಂಡಿತ್ತು!! -ಪಲ್ಲವಿ ಕಬ್ಬಿನಹಿತ್ಲು

ಅಸ್ತಿತ್ವವೇ ಇಲ್ಲದ ಅಪರಾಧಿ!!

Image
ತಿಳಿಯಲೇ ಇಲ್ಲ  ಬದುಕಿನ ಓಟದಲ್ಲಿ!! ಅದಾಗಲೇ ತನ್ನ ಗುರುತನ್ನು ಕಳೆದುಕೊಂಡಾಗಿತ್ತು... ಕಪಟ ಸಂಬಂಧಗಳನು ಕಳಚಿಕೊಳ್ಳುವ ಪ್ರಯತ್ನದಲಿ; ಎಲ್ಲರನ್ನೂ ತೃಪ್ತಿಗೊಳಿಸುವ ಹುಚ್ಚು ಆಕಾಂಕ್ಷೆಯಲಿ; ಷಡ್ಯಂತ್ರಗಳ ವ್ಯೂಹದಿಂದ ಹೊರಬರುವ ಪ್ರಯತ್ನದಲಿ; ಮುಖವಾಡಧಾರಿಗಳ ಹಿಡಿತದಿಂದ ಪರಾರಿಯಾಗುವ ಪ್ರಯಾಸದಲಿ; ದ್ವೇಷ-ಸಾಧನೆಯ ಹುಚ್ಚು ಹಠದಲಿ; ಅದಾಗಲೇ ತನ್ನನ್ನು ಕಳೆದುಕೊಂಡಾಗಿತ್ತು! ಈಗ ಮೌನಕೆ ಶರಣಾಗಿಹೆನು... ತನ್ನತನದ ಹುಡುಕಾಟದಲ್ಲಿರುವೆನು... ಆತ್ಮದ ಕಟಕಟೆಯಲಿ ಆರೋಪಿಯಾಗಿ ನಿಂತಿರುವೆನು!! ತನ್ನ ಕರ್ಮಗಳನು ಸರಿಯೆಂದು ಸಾಬೀತುಪಡಿಸುವ  ಹುಚ್ಚು ಪ್ರಯತ್ನದಲ್ಲಿರುವೆನು... ಕ್ಷಣಗಳು ಉರುಳುತಲಿದೆ... ಮನದ ಹೊಯ್ದಾಟ ಮುಂದುವರೆದಿದೆ... ಆದರೆ ಸೋತಿರುವೆನು!! ತನ್ನತನವನೇ ಕಳೆದುಕೊಂಡಿರುವ ಅಪರಾಧಿಯಾಗಿರುವೆನು; ಅಸ್ತಿತ್ವವೇ ಇಲ್ಲದ ಅಪರಾಧಿಯಾಗಿರುವೆನು!! ಇದೀಗ ಹೊರಟಿರುವೆನು... ತನ್ನತನದ ಜಾಡ ಹಿಡಿದು; ಏಕೆಂದರೆ, ಇನ್ನೂ ಮನದ ಮೂಲೆಯಲಿ ಹಸಿರಾಗಿಹುದು ಹೊಸ 'ನನ್ನನ್ನು' ರೂಪಿಸುವ ಆಸೆ, ಹೊಸ ಅಸ್ತಿತ್ವದ ಕನಸು...                                                                      ...

ಹನಿ-ದನಿ

Image
ಮಕ್ಕಳ ಬೆನ್ನಿಗೆ ರೆಕ್ಕೆಯನಂಟಿಸಿದ ಗುರುವು ತನ್ನ ನೆಲವ ಬಿಟ್ಟು ಹಾರಲೇ ಇಲ್ಲ!! *** ವಿನಂತಿಗಳ ಸಂತೆಯಲಿ  ಬೆಲೆಯಿರುವುದು ಬಣ್ಣದ ಮಾತುಗಳಿಗಷ್ಟೇ!! *** ಕಣ್ಣ ರೆಪ್ಪೆಯ ಗೋಡೆಗಳ ಹಿಂದಡಗಿರುವುದು ಬಣ್ಣದ ಕನಸುಗಳು!! *** ಅವಳ ಅಡುಗೆ ಮನೆಯ ಕತೆಗಳು-ವ್ಯಥೆಗಳು ಹಾಳೆಗಳಿಗಿಳಿಯಲೇ ಇಲ್ಲ!! *** ಅಪ್ಪನ ದಪ್ಪ ಮೀಸೆಯ ಮರೆಯಲ್ಲವಿತಿರುವುದು ನೋವಿನ ನಗೆಯೇನು?! *** ಹಸಿವಿನ ಹೊರೆಯಡಿಯಲ್ಲಿ ಮೊನ್ನೆಯ ತಂಗಳನ್ನವೂ ಹಳಸದು!! *** ಮನೆಯೊಡತಿಯ  ಹೆಸರು ಮನೆಯೊಡೆಯನ ಮಡದಿಯೆಂದು!! *** ಸಿರಿವಂತನ ಸಂಪತ್ತಿನ ಮೂಟೆ ಹೊತ್ತವನ ಗೋಣು ಮುರಿದರೂ ಮುಗಿದದ್ದಿಲ್ಲ!! *** ಸಂಸಾರದ ನೊಗ ಅವನಿಗೆಂದೂ ಭಾರವೆನಿಸಲಿಲ್ಲ!! *** ಉಸಿರುಗಟ್ಟಿಸಿದ ಹತ್ತು ಜನರು ಆತ ಸತ್ತ ಮೇಲೆ ಸುತ್ತ ನಿಂತು ಅತ್ತರು!! -ಪಲ್ಲವಿ ಕಬ್ಬಿನಹಿತ್ಲು

ಮಶಾಲು ಉರಿಯುತಲಿದೆ...

Image
ಬಿರುಗಾಳಿ, ಮಳೆ-ಚಳಿಗೆ ನಂದದೆ ಅಂತರಂಗದೊಳಗಿನ ಮಶಾಲು ಉರಿಯುತ್ತಲೇ ಇದೆ! ಸುತ್ತಲೆಲ್ಲ ಅದೆಷ್ಟು ಕರಿ ನೆರಳುಗಳು ಸುಳಿದರೂ, ಅವು ಮೈ ಸೋಕದಂತೆ ಹೆದರಿಸುತ್ತಾ ಉರಿಯುತಿದೆ; ಕಣ್ಣು ಕೋರೈಸುವ ಮಿನುಗುವ ಬದುಕುಗಳ ಎದೆ ನಡುಗಿಸುವ ಮಂದ ಬೆಳಕನು ಚೆಲ್ಲುತ ಉರಿಯುತಿದೆ; ತನ್ನೊಳಗೇ ಮುಳುಗಿರುವವರ ಕಣ್ಣು ತೆರೆಸಲು ಸ್ವಾರ್ಥದ ಪರದೆಯನೇ ನುಂಗುತ್ತಾ ಉರಿಯುತಿದೆ... ತಣ್ಣಗಿನ ಎದೆಯವರ ಮೇಲೆ ಜ್ವಾಲೆಯು ಕೆನ್ನಾಲಗೆಯ ಬರೆಯನೆಳೆದೆಳೆದು ಉರಿಯುತಿದೆ; ಅಂತರಾಳದೊಳಗೆ ಒಂದಷ್ಟು ಶುದ್ಧತೆಯನುಳಿಸುವ, ಅದರ ದನಿಗೆ ಬೆಳಕಾಗಲು ಮಶಾಲು ಉರಿಯುತ್ತಲೇ ಇದೆ... ಗುಡ್ಡೆ ಹಾಕುತ್ತಲಿರುತ್ತದೆ ಎಲ್ಲರೊಳಗಿನ ಮಶಾಲು  ನಮ್ಮ ಕೈಲಾದ ಅನ್ಯಾಯ ಅಪಮಾನಗಳನು ಸದ್ದಿಲ್ಲದೆ... ಎಗ್ಗಿಲ್ಲದೆ ಆಗಾಗ ಅವುಗಳನು ಮನದ ಮುಂದಿರಿಸಿ  ಕಾಡಿ-ಕಾಡಿ ದಹಿಸುವುದು ನಮ್ಮೊಳಗನು ಪಶ್ಚಾತಾಪದ ಅಗ್ನಿಯಲಿ; ಒಂಟಿಯಾದಾಗ ಒಂದೊಂದನೇ ಯೋಚನೆಗಳಾಗಿ ಕಣ್ಣು ಮುಚ್ಚಿದಾಗ ದಾರುಣ ಕನುಸುಗಳಾಗಿ ಮದದ ಹೆದೆಯೇರಿಸುವಾಗ ಕರ್ಮಗಳ ಪ್ರತಿಫಲದ ಅಂಜಿಕೆಯಾಗಿ ಕಾಡಿ-ಕಾಡಿ ದಹಿಸುವುದು ನಮ್ಮೊಳಗನು ಪಶ್ಚಾತಾಪದ ಅಗ್ನಿಯಲಿ ಎಗ್ಗಿಲ್ಲದೆ ಆಗಾಗ ಅನ್ಯಾಯ ಅಪಮಾನಗಳನು  ಮನದ ಮುಂದಿರಿಸಿ.... ಈ ಮಾನವೀಯತೆಯ ಮಶಾಲು ಉರಿದಷ್ಟು ದಿನ  ಮಾನವನು ಉಳಿದಾನು ಮಾನವನಾಗಿ, ಇದನರಿತ ಅಂತರಾತ್ಮದ ಮಶಾಲು ಉರಿಯುತ್ತಲೇ ಇದೆ; ಎಂತಹ ಬಿರುಗಾಳಿ, ಮಳೆ-ಚಳಿಗೂ ಭಯ ಬೀಳದೆ... -ಪಲ್ಲವಿ ಕಬ್ಬಿನಹಿತ್ಲು

ಹೊಸಬೆಳಕು

Image
ಯಾವಾಗಲೆಂದರೆ ಆಗ ಒಂಟಿಯಾಗುತ್ತೇನೆ, ಮೌನದಿಂದ ಸುಳಿಯುವ ಗಾಳಿಗೆ ನಿಟ್ಟುಸಿರ ಸಂದೇಶ ಕಳುಹಿಸುತ್ತಾ... ಶೂನ್ಯದಲ್ಲಿ ದೃಷ್ಟಿ ನೆಟ್ಟು ಬಿಡುತ್ತೇನೆ, ರೆಪ್ಪೆಗಳು ಕನಸ ತೆರೆಯನು ಕಣ್ಣ ಮೇಲೆಳೆಯದಂತೆ!! ಇಂದೇನೋ ಹೊಸತಿದೆ; ಗಾಳಿಯಲ್ಲಿ ನಗುವನ್ನಷ್ಟೇ ಬೆರೆಸುವ ಆಸೆ ರೆಪ್ಪೆಗಳೊಳಗಿನ ಸ್ವಪ್ನಲೋಕಕ್ಕೆ ಜಾರುವ ತವಕ; ನೆಟ್ಟ ದೃಷ್ಟಿಯ ಪರಿಧಿಯೊಳಗೆ ಅವನು ಇಣುಕಿದ್ದಾನಷ್ಟೆ; ಅಷ್ಟೇ ಸಾಕೆನಿಸಿತು ಒಂಟಿಯಾಗುಳಿಯುವಾಸೆ ತೊರೆಯುವುದಕ್ಕೆ!! ದಿನ-ದಿನದ ಭೇಟಿ ಹೊಸತನದ ಬೆಳಕಾಗಿದೆ ಬದುಕಿಗೆ, ತುಟಿಯಂಚಿಗಂಟಿದ ನಗುವೊಂದಿಗೆ ಆತ ಬೆರೆಸುವ ಮಾತು ಕ್ಷಣ-ಕ್ಷಣವನೂ  ಉಲ್ಲಸಿತಗೊಳಿಸುವುದು, ಆಗೊಮ್ಮೆ-ಈಗೊಮ್ಮೆ ನೋಟ ಬೆರೆತಾಗ ರೆಪ್ಪೆ-ಕೆನ್ನೆಗಂಟಿಕೊಳ್ಳುತ್ತದೆ, ಕನಸಿನ ಲೋಕ ಮತ್ತೆ ತೆರೆದುಕೊಳ್ಳುತ್ತದೆ!! ಅಲ್ಲಿ ಹಾರಾಡುತ್ತೇನೆ, ಈಜಾಡುತ್ತೇನೆ ಯಾರ ಹಂಗಿಲ್ಲದೆ ನಕ್ಕು ಬಿಡುತ್ತೇನೆ... ನನ್ನ, ಅವನ ಸಂತಸದ ಬದುಕಿನ ಕನಸಲ್ಲಿ ಕಳೆದುಹೋಗುತ್ತೇನೆ... ಒಳ್ಳೆಯದರ ಆಯಸ್ಸು ಕಡಿಮೆಯೇ; ಭೇಟಿ, ಮಾತು, ನೋಟ ಇದ್ದಕ್ಕಿದ್ದಂತೆ ಮರೆಯಾಗಿದೆ ಮತ್ತೆ, ನಾಪತ್ತೆಯಾಗಿದೆ ಮೊಗದ ಮೇಲಿನ ನಗುವಿನ ಸುಳಿವು! ಈಗ ಮತ್ತೆ, ಯಾವಾಗಲೆಂದರೆ ಆಗ ಒಂಟಿಯಾಗುತ್ತೇನೆ, ಮೌನದಿಂದ ಸುಳಿಯುವ ಗಾಳಿಗೆ ನಿಟ್ಟುಸಿರ ಸಂದೇಶ ಕಳುಹಿಸುತ್ತಾ, ಶೂನ್ಯದಲ್ಲಿ ದೃಷ್ಟಿ ನೆಟ್ಟು ಬಿಡುತ್ತೇನೆ ರೆಪ್ಪೆಗಳು ಕನಸ ತೆರೆಯನು ಮತ್ತೆ ಕಣ್ಣ ಮೇಲೆಯಳೆಯದಂತೆ! ಸಾಕೆನಿಸುತ್ತಿದೆ ಈ ಬಾಳು, ಪ್ರೀತಿಯ ಆಸರೆ...

(ವಿ)ಚಿತ್ರ ಹನಿಗಳು-3

Image
  ಹಾಕಬೇಕೆನ್ನಿಸಿತು ಖುಷಿಗೊಂದಷ್ಟು ಕಡಿವಾಣ, ಆದರೆ ಖುಷಿಯೆಲ್ಲಿದೆ ನನ್ನಲ್ಲಿ?! ********************************************* ಹುಡುಕಾಟದ ಕಿಡಿಯೊಂದು ಹುಟ್ಟಿತು: ಕಾಳೊಂದು ಮೆಲ್ಲನೆ ಮೊಳಕೆಯೊಡೆದ ಹಾಗೆ, ರವಿಯ ಕಿರಣ ಭುವಿಯನಪ್ಪಿದ ಹಾಗೆ, ಮಳೆಯ ಮೊದಲ ಹನಿ ಮಣ್ಣಿನೊಳಗೆ ಇಳಿದ ಹಾಗೆ, ಸದ್ದಿಲ್ಲದೆ, ಸುದ್ದಿಯೇ ಇಲ್ಲದೆ!! ********************************************** ಸುಳಿವೇ ಸಿಗದಂತೆ ಮರೆಯಾಗುವುನೆಂದರೆ, ಹಾಳು ಮನಸೇ ನನ್ನಲ್ಲಿಲ್ಲವಲ್ಲ!! ನಿನ್ನಲ್ಲೇ ಅದ ಬಿಟ್ಟರೆ ನನ್ನುಸಿರು ಮುನಿಸಿಕೊಂಡೀತೆಂದು, ಉಳಿದುಕೊಂಡಿರುವೆನಿಲ್ಲಿಯೇ!! *********************************************** ಕಚ್ಚಾಡುವ ಮಾತೂ ವಿಚ್ಛೇದನ ಕೊಟ್ಟಂತಿದೆ, ಹೆಚ್ಚಾಡುವ ಮೌನವೂ ಮುನಿಸಿಕೊಂಡಂತಿದೆ, ಇಲ್ಲದವುಗಳನ್ನು ಇದೆಯೆನ್ನುವ, ಇರುವುದರ ಅರಿವನ್ನೂ ಅಲ್ಲಗಳೆಯುವ, 'ಜಗ್ಗಾಟ'ದಲಿ... ************************************************* ಅವಳು ಎಂದೂ ಅಳುವವಳಲ್ಲ, ಯಾವ ಸಂದರ್ಭವೂ ಅವಳ ಮೊಗದ ನಗುವನ್ನು 'ಅಳಿಸು'ವುದಿಲ್ಲ; ಕಾರಣ; ಕಾಲ ಕಲಿಸಿದೆ ಅವಳಿಗೆ ನೋವಿಗೂ ನಗಲು ಕಲಿಸುವುದನ್ನು.... -ಪಲ್ಲವಿ ಕಬ್ಬಿನಹಿತ್ಲು