Posts

Showing posts from 2020

ಹೊಸತನದ ಸೋಗಿನಲ್ಲಿ...

Image
ಇನ್ನೇನು ಗೋಡೆಗೆ ನೇತು ಹಾಕಿರುವ ಕ್ಯಾಲೆಂಡರ್ ಬದಲಾಯಿಸುವ ದಿನ ಬಂತು... ಹೊಸ ವರ್ಷ ಎಂಬ ಸೋಗಿನಲ್ಲಿ ಎಲ್ಲರಿಗೆ ಸಿಹಿಯನ್ನು ಬಯಸುವ, ಬದುಕಿನಲ್ಲಿ ಎದುರಾಗುವ ಕಹಿಯನ್ನು ಎದುರಿಸುವ ಶಕ್ತಿ ಇರಲೆಂದು ಹಾರೈಸುವ ಸಂದೇಶಗಳು ರವಾನೆಯಾಗುತ್ತಲಿದೆ, ಕಳೆದ 2020ರಲ್ಲಿ ಕಷ್ಟ-ನಷ್ಟಗಳ ನಡುವೆಯೂ ಜೊತೆಯಾದ ಆತ್ಮೀಯರಿಗೆ ಧನ್ಯವಾದಗಳು, ಬಿರುಕು ಬಿಟ್ಟ ಸಂಬಂಧಗಳ ಸವಿಯನ್ನು ನೆನಪಿಸಿ ಅವರವರ ಪಾಲಿನ ಕ್ಷಮೆ ಯಾಚನೆಯ ಸಂದೇಶಗಳು ಸಹಾ ಮತ್ತೊಮ್ಮೆ ಹರಿದಾಡತೊಡಗಿವೆ. ಮತ್ತೊಮ್ಮೆ ನ್ಯೂ ಈಯರ್ ರೆಸೊಲ್ಯೂಶನ್ (New Year Resolution) ತೆಗೆದುಕೊಂಡು, ಈ ಬಾರಿ ಯಾರು ಏನೆಂದರೂ ನಾನು ಹಾಕಿದ ಗುರಿಯನ್ನು ಮುಟ್ಟಿಯೇ ತೀರುತ್ತೇನೆ ಎಂಬ (ಆರಂಭ!) ಶೂರತ್ವದ ಮಾತುಗಳು ಎದೆಯೊಳಗಿನಿಂದ ಮೊಳಗುತ್ತಿವೆ... ಇವೆಲ್ಲ ಪ್ರತಿ ಹೊಸವರ್ಷದಲ್ಲಿ ಮತ್ತೆ-ಮತ್ತೆ ಮರುಕಳಿಸುವಂತಹವೇ ಹಾಗಾದರೆ ಹೊಸತೇನಿದೆ ಎಂದು ಕೇಳಿದರೆ ನನ್ನಲ್ಲಿ ಉತ್ತರವಿಲ್ಲ! ಹಿಂದಿನ ಬಾರಿ ಹೊಸ ವರುಷಕ್ಕೆ ನಾನೇ ಹಾಕಿಟ್ಟುಕೊಂಡ ಬೇಲಿಯನ್ನು ದಾಟಿಕೊಂಡು ಹೊಸ ಮುಖಗಳ ಪರಿಚಯವಾದ ಹಾಗೆಯೇ, ಗೆಳೆತನದ ನಂಟನ್ನು ಬೆಸೆದುಕೊಂಡು ಬಹಳಷ್ಟು ಗೆಳೆಯ-ಗೆಳತಿಯರನ್ನು ಸಂಪಾದಿಸಿಕೊಳ್ಳಬೇಕೆಂದುಕೊಂಡಿದ್ದೆ, ಆದರೇನಾಯಿತು, ಈಗಲೂ ಮೊದಲಿದ್ದ ಗೆಳೆಯ-ಗೆಳತಿಯರನ್ನು ನಾನು ಕಳೆದುಕೊಳ್ಳಲಿಲ್ಲ ಎಂಬ ತೃಪ್ತಿ ಮಾತ್ರ ನನ್ನೊಂದಿಗೆ ಉಳಿದದ್ದು. ಅದಕ್ಕಿಂತಲೂ ಹೆಚ್ಚಾಗಿ ನನ್ನ ಸ್ನೇಹವಿದ್ದದ್ದು ಗ್ರಂಥಾಲಯದೊಂದಿಗೆ, ಪುಸ್ತಕಗಳೊಂದಿ...

ಮರು(ರ)ಳು ಪ್ರೇಮಿ

Image
ಕಿನಾರೆಗೆ ಮುತ್ತನಿಡುತ್ತವೆ ಅಲೆಗಳು, ಸೋಲನೊಪ್ಪದೆ ಮತ್ತೆ-ಮತ್ತೆ... ಮರಳನು ಚುಂಬಿಸುವ ಮರುಳಿಗೆ ಮನಸೋಲದಿರಬಹುದೇ ಕಂಗಳು?! ಲೆಕ್ಕವಿರದಷ್ಟು ಬದುಕುಗಳಡಗಿವೆ ಸಾಗರದಲಿ; ಆದರೂ, ಉಸಿರಿಲ್ಲದ ಉಸುಕಿನ ಮೇಲೆ ಅದೆಷ್ಟು ಮೋಹವದಕೆ?! ತಾನಲ್ಲದೆ ಬೇರಾರೂ ಮರಳ ಮೇಲೆ  ಗುರುತುಳಿಸಬಾರದೆಂದು, ಮೂಡಿದ ಗುರುತುಗಳನೆಲ್ಲಾ ಅಳಿಸುವುದನ್ನೂ ಮರೆಯದು ಮರ(ರು)ಳು ಪ್ರೇಮಿ! ಜೋಡಿ ಹೆಜ್ಜೆಗಳ, ಅಲ್ಲಲ್ಲಿ ಬರೆಯುವ ಎದೆಯ ಚಿತ್ತಾರಗಳ ಮೇಲಂತೂ ಇನ್ನಿರದ ಮುನಿಸು; ತನಗಿಲ್ಲದ ಭಾಗ್ಯದ ಮೇಲೆ ಹೊಟ್ಟೆಕಿಚ್ಚಿರಬೇಕು!! ಚಂದಿರನಿರಲು ಬೆಳದಿಂಗಳ ಬೆಳಕಲ್ಲಿ; ಶಶಿಯಿರದಿರಲು ಅವನು ಚೆಲ್ಲುವ ಪ್ರೀತಿಯ ನೆನಪಲ್ಲಿ; ಭೋರ್ಗರೆದು ಮೈಮೇಲೆ ಬಿದ್ದರೂ, ಕಿನಾರೆಯು ಕಿನಾರೆಗೇ* ತಳ್ಳುವುದು ಲಹರಿಗಳನು, ಕಲ್ಲು ಹೃದಯದ ಇನಿಯನಂತೆ!! ಆದರೇನು, ಸಾಗರದ ಅಲೆಗಳಿಗೆ ಮರುಳು ಪ್ರೀತಿ, ಕೊರಳ ತುಂಬಾ ಕರೆ-ಕರೆದು, ಚೂರು-ಚೂರೇ ಮರಳನು ತನ್ನೊಳಗೆ ಸೆಳೆದುಕೊಳ್ಳುತ್ತವೆ, ಎಂದಾದರೊಮ್ಮೆ ಈ ಅಂತರವೇ  ಅಳಿಸಿಹೋಗಬಹುದೆಂಬ ಆಸೆಯಲಿ... [*ಕಿನಾರೆ=ಮೂಲೆ] -ಪಲ್ಲವಿ ಕಬ್ಬಿನಹಿತ್ಲು

(ಅ)ಪರಿಪೂರ್ಣತೆಯ ಸುಖ

Image
 ಬದುಕಿನಲ್ಲಿ ಅರ್ಧವಾಗಿ ಉಳಿಯುವುದೇ ಖುಷಿಯಲ್ಲವೆ? ಅರೆರೆ, ಇದೇನು ಹುಚ್ಚು ಕಲ್ಪನೆ ಎಂದೆನಿಸಿದರೆ ತಪ್ಪಿಲ್ಲ... ತಪ್ಪು-ಒಪ್ಪುಗಳ ನಡುವೆಯೇ ಬದುಕಿನ ಸೊಗಡು ಅಡಗಿರುವುದು, ಆದರೆ, ಪರಿಪೂರ್ಣತೆಯಲ್ಲಿ ತಪ್ಪುಗಳಿಗೆ ಎಡೆಯಿಲ್ಲ, ಅಲ್ಲಿ ಎಲ್ಲವೂ, ಎಲ್ಲರೂ ಸರಿಯೇ; ಸಂಪೂರ್ಣವೇ! ಆದರೆ ಅರ್ಧವಾಗಿ, ಅಪರಿಪೂರ್ಣ, ಅಪಕ್ವವಾಗಿ ಉಳಿಯುವುದರಲ್ಲಿ ಇವೆಲ್ಲಕ್ಕೂ ಅವಕಾಶವಿದೆ... ಅನುಭವಗಳ ಪಾಠಕ್ಕೆ ಬೆಲೆಯಿದೆ, ಅಲ್ಲಲ್ಲಿ ಎಡೆವಿದರೂ ನಡೆಯುವ ನಿಲುವಿದೆ... ಪರಿಪೂರ್ಣರಾಗುವ ಕನಸು ಕಾಣುವುದಕ್ಕೂ ಅಪೂರ್ಣರಾಗುವ ಅಗತ್ಯತೆಯಿದೆ. ಸೋಲಿನಿಂದ ಕಲಿತು ಗೆದ್ದವನಿಗೆ ಎಂದಿದ್ದರೂ ಸೋಲಿನ ಬಳಿಕದ ಹಾದಿಯ ಮೇಲೆ ಅಪಾರ ಪ್ರೀತಿ, ಬಾಂಧವ್ಯಗಳಿರುತ್ತದೆ. ಆ ನಂಟು ಗೆಲುವಿನ ಸವಿಗಿಂತಲೂ ದಟ್ಟವಾಗಿರುತ್ತದೆ. ಹಾಗೆಯೇ ಅರ್ಧ ತಿಳಿದುಕೊಂಡು ಪೂರ್ತಿಯನ್ನು ಹುಡುಕುವಾಗಿನ ಕುತೂಹಲ, ಉತ್ಸಾಹ, ಅಲ್ಲಡಗಿರುವ ಗಾಬರಿ, ಆತುರತೆ-ಕಾತುರತೆ ಎಲ್ಲವೂ ಚಂದ... ಅದು ಗೆಲುವಿ(ಅರಿವಿ)ನ ಕ್ಷಣದಲ್ಲೊಮ್ಮೆ ಕಾಡಿ ಹೋದಾಗ ಎದೆ ತುಂಬಿ ಬಂದು ಕಣ್ಣು ತುಂಬಿಕೊಳ್ಳುತ್ತದೆ.  ಇದೇಕೆ ಹೀಗೆ? ಎಂದರೆ ಇರುವುದೆಲ್ಲವನು ಬಿಟ್ಟು ಇಲ್ಲದುದರೆಡೆಗೆ ತುಡಿವ ಮನಕ್ಕೇನನ್ನೋಣ! ಹುಡುಕಿದ್ದು ಸಿಕ್ಕಿತು ಎನ್ನುವಾಗ ಇನ್ನೊಂದು ಹುಡುಕಾಟಕ್ಕೆ ವಿಷಯವನ್ನು ಮನಸ್ಸು ಹುಡುಕಿಕೊಳ್ಳುತ್ತದೆ, ಅದಕ್ಕೂ ಪೂರ್ಣವಾಗುವುದಕ್ಕೆ ಇಷ್ಟವಿಲ್ಲ!  ಅಜ್ಞಾನ ದ ಖಾಲಿತನದಲ್ಲಿ ಅದು ವಿಹರಿಸುವ ಜಾಗವನ್ನು ಹುಡು...

(ವಿ)ಚಿತ್ರ ಹನಿಗಳು-3

Image
  ----------------------1------------------------- ಎಲ್ಲವನ್ನೂ ತೊರೆದು ಸಾಧಕನಾಗಬೇಕು ಎಂದಾತನಿಗೆ ಅಚ್ಚರಿ ಹುಟ್ಟಿಸಿದ್ದು; ಬದುಕಿನ ಸಂತೆಯಿಂದ ಓಡಿ ಹೋಗುವುದು, ಸಾಧನೆಯೇ? ಎಂಬ ಪ್ರಶ್ನೆ!! ----------------------2------------------------- ನನ್ನಿರದಿರುವಿಕೆ ನಿನಗೊಮ್ಮೆ ಕಾಡಿದರೂ ಸಾಕು, ಗೆಳತಿ, ಈ ಕಾಯುವಿಕೆ ಸಾರ್ಥಕ! ----------------------3------------------------- ಆಕಾಶಕೆ ಏಣಿ ಹಾಕುವ, ಆಸೆ ಹೊತ್ತ ಮನಸಿಗೇನು ಗೊತ್ತು? ವಾಸ್ತವವಾಗಿ ಆಕಾಶ ಖಾಲಿ ಎಂದು!! ----------------------4------------------------- ಅಳೆದು ಕೊಡುವಂತಹದ್ದೇನೂ, ನನ್ನಲಿಲ್ಲ ಗೆಳತಿ, ಇದ್ದೊಂದು ಹೃದಯದ ಮಹಲಿಗೂ, ಈಗ ನೀನೇ ಒಡತಿ!! ----------------------5------------------------- ಚೆಂದುಟಿಗಳ ಮರೆಯಲ್ಲಿ, ನಗುವನು ಅಡಗಿಸುವುದೇಕೆ ಗೆಳತಿ?! ನಕ್ಕುಬಿಡು ಒಮ್ಮೆ; ಬಿದ್ದ ಮುತ್ತುಗಳನೆತ್ತಿಕೊಂಡು, ಸಿರಿವಂತನಾಗುತ್ತೇನೆ ನಾನು! -ಪಲ್ಲವಿ ಕಬ್ಬಿನಹಿತ್ಲು

ನೆನಪುಗಳ ದಿಬ್ಬಣ

Image
ನೆನಪುಗಳಿಗೆ ನೆನಪುಗಳು ನೆನಪಾದೀತೆ? ಅರ್ಥವಿಲ್ಲದ ಪ್ರಶ್ನೆ! ಈ ಹುಚ್ಚು ಯೋಚನೆಯ ಕೊಡುಗೆ ನನ್ನಲ್ಲಿ ಉಳಿದಿರುವ ಖಾಲಿ ಹೊತ್ತಿನದ್ದು, ಕೆಲಸವಿಲ್ಲದ ಖಾಲಿ ತಲೆಯದ್ದು... ಕೈಗೆ, ಮನಸಿಗೆ, ಬುದ್ಢಿಗೆ ಕೆಲಸವಿಲ್ಲದಿದ್ದರೆ ಕುಳಿತಲ್ಲಿಯೇ ನೂರು ಯೋಚನೆಗಳು ಕಾಡುತ್ತವೆ, ಅದರಲ್ಲಿ ಶೇಕಡ ತೊಂಬತ್ತರಷ್ಟು ನೆನಪುಗಳದ್ದೇ ಸಾಮ್ರಾಜ್ಯ. ಅಲ್ಲಿಯವರೆಗೆ ಕಾಣದ ಹಾಗೆ ಅವಿತು ಕುಳಿತಿದ್ದ ಈ ನೆನಪುಗಳು ಅದೆಲ್ಲಿಂದ ಸಮಯ ಸಾಧಿಸಿಕೊಂಡು ಕಣ್ಣೆದುರು ಮೆಲ್ಲನೆ ಜಗತ್ತೊಂದನ್ನು ತೆರೆಯುತ್ತದೆಯೋ ಅದು ಅಚ್ಚರಿಯಲ್ಲವೇ!! ಅದೆಲ್ಲೋ ಓದಿದ ನೆನಪು, ಬದುಕಲ್ಲಿ ನಡೆದದ್ದೆಲ್ಲವೂ ನೆನಪಿದ್ದರೆ ಒಳ್ಳೆಯದೋ ಕೆಟ್ಟದೋ ಎಂಬುವುದಕ್ಕೆ ನೀಡಿದ್ದ ಪ್ರತ್ಯುತ್ತರ ಹೆಚ್ಚು-ಕಡಿಮೆ ಹೀಗಿತ್ತು: ನೆನಪುಗಳು ಮತ್ತೆ-ಮತ್ತೆ ಕಾಡುತ್ತವೆಂದರೆ ನಾವಿನ್ನೂ ಅದೇ ಹೊತ್ತಲ್ಲಿ ಉಳಿದುಕೊಂಡಿದ್ದೇವೆ, ಅಲ್ಲಿಂದ ಮುಂದೆ ಹೆಜ್ಜೆ ಇಡಲೇ ಇಲ್ಲ ಎಂದು!! ಸತ್ತ 'ಹೊತ್ತಿನಲ್ಲೇ' ಉಳಿದುಕೊಳ್ಳುವುದು ಸರಿಯೇನು?! ಬದುಕು ಅಲ್ಲೇ ಸಿಲುಕಿಕೊಂಡಾಗ ಮುಂದೆ ಹೆಜ್ಜೆ ಹಾಕುವುದು ಕಷ್ಟವಲ್ಲವೇ?  ಹಾಗೆಂದು ನೆನಪುಗಳೆಲ್ಲ ಅಳಿಸಿಹೋಗುತ್ತದೆಂದರೆ, ಈ ಹೊತ್ತಿನ ನಗು, ಅಳು, ನಮ್ಮವರೊಂದಿಗೆ ಕುಳಿತು ಕಳೆಯುವ ಕ್ಷಣ, ಒಮ್ಮೆ ಕಾಡಿ ಮರೆಯಾಗುವ ಅವಮಾನ, ಅಭಿಮಾನ, ಕೋಪ-ತಾಪಗಳಿಗೆ ಅರ್ಥವೇ ಉಳಿಯುವುದಿಲ್ಲ. ಈ ಮಾನವೀಯ ಸಂಬಂಧಗಳು, ಪರಿವಾರ, ಗೆಳೆತನ, ಬಾಂಧವ್ಯ, ಪ್ರೀತಿ, ಪ್ರೇಮ ಯಾವುದಕ್ಕೂ ಅಸ್ತಿತ್ವವೇ ಇಲ್...

(ವಿ)ಚಿತ್ರ ಹನಿಗಳು-2

Image
  ----------------------1------------------------- ಜೀವನ ಕಸೂತಿ ಹಾಕುವಾಸೆಯಾಯಿತು: ಸೂಜಿ-ದಾರಗಳು ಕೈಗೆಟಕಲಿಲ್ಲ! ಮನಸೆಂಬ ಸೂಜಿಗೆ ಪೋಣಿಸಿದೆ ದಾರಗಳನು, ಬದುಕ ಅರಿವೆಯ ಮೇಲೆ ಚಿತ್ತಾರ ಬಿಡಿಸಲು; ಖುಷಿಯ ಎಳೆಗಳಿಗೆ ಒಂದಿಷ್ಟು, ದುಃಖದೆಳೆಗಳೆಗಳನು ನಡುವಲಿ ಸೇರಿಸಿದೆ... ಪ್ರೀತಿಯ ರಂಗಿನಲ್ಲದ್ದಿ ಹೆದರಿಕೆ, ಹೇಸಿಗೆ,ಅಸೂಯೆಗಳನೂ ಚಿಮುಕಿಸಿದೆ... ಕರುಣೆ, ತ್ಯಾಗ, ದ್ವೇಷಗಳನ್ನೂ ಬಿಡಲಿಲ್ಲ... ಚಿತ್ತಾರ ಮೂಡಿತು ಜೀವನದ್ದು!! ----------------------2------------------------- ಭರವಸೆ ಈ ಕ್ಷಣವನು ಕೈಜಾರಿ ಹೋಗದಂತೆ ಕಟ್ಟಿ ಹಾಕುವಾಸೆ, ಕಳೆದುಕೊಂಡರೆ ಸಂತಸದ ಘಳಿಗೆ ಮತ್ತೆ ಸಿಗದೆಂಬ ಅಳುಕು ಕೂಡ,  ಕಾಣಬೇಕಿರುವ ಹೊತ್ತಿನಲಡಗಿರಬಹುದಾದ ನೋವು, ಈ ಹೊತ್ತಿನ ಖುಷಿಯ ಮತ್ತನು ಇಳಿಸಿ ಬಿಟ್ಟರೆ ಎಂಬ ಅಂಜಿಕೆಯ ಸೇರಿಸಿಕೊಂಡು, ಕೇಳಿಯೇ ಬಿಟ್ಟೆ ಕಾಲದ ಕೈ ಹಿಡಿದು ನಿಂತು ಬಿಡೆಂದು... ಮುಂದಿನ ಕ್ಷಣದಲ್ಲಡಗಿರಬಾರದೆ ಹೆಚ್ಚಿನ ಖುಷಿಯೆಂಬ ಭರವಸೆಯ ಸವಾಲನ್ನೆಸೆದು,  ಭದ್ರ ಹಿಡಿತದೆಡೆಯಲ್ಲಿ ಉತ್ತರವಿಲ್ಲದ ಪ್ರಶ್ನೆಯನ್ನು ಮುಂದಿಟ್ಟಿತು ಸಮಯ! ನಿರುತ್ತರನಾಗಿ ಕೈ ಬಿಟ್ಟೆ ಕಾಲಕ್ಕೆ ಕಾಲುವೆ ಕಟ್ಟುವ ಕನಸನು.... ----------------------3------------------------- ಮರೆತುಬಿಡು ನನ್ನನ್ನು ಎಂದಷ್ಟು ಸುಲಭವಲ್ಲ; ನನ್ನೊಲವೇ, ಹಸಿಮಣ್ಣಿನಂತಿದ್ದ ನನ್ನೆದೆಯೊಳಗೆ, ನೀನೂರಿದ ಹೆಜ್ಜೆ ಗುರುತನ್ನು ಅಳಿಸುವುದು....

ನಾನೂ, ನೀವೂ ಹೆಸರಿಲ್ಲದ ಭಾವವೂ...

Image
ಜನುಮದ ಗೆಳೆತನಕ್ಕೆ ಒಪ್ಪಿಗೆ ಹಾಕಿ ಅದೆಷ್ಟು ವರ್ಷಗಳು ಸಂದವು?! ನನ್ನ ಮುಖದಲ್ಲಿ ನೆರಿಗೆಗಳಿರದ ನಿಮ್ಮ ಮೊಗದಲ್ಲಿದ್ದ ಮೀಸೆ ಕಪ್ಪಾಗಿದ್ದ ಸಮಯವಲ್ಲವೆ ಅದು! ಹೆದರಿಕೆಯ ಮುದ್ದೆಯಾದ ನನ್ನನ್ನು ನೀವು ಅಂದಿನ 'ನಿಮ್ಮ' ಇಂದಿನ 'ನಮ್ಮ' ಮನೆಗೆ ನನ್ನ ತಂದುಕೊಂಡದ್ದು... ಈಗ ಕೂದಲು ನರೆತಿದೆ, ಕಣ್ಣು ಮಂಜಾಗಿದೆ... ಆದರೂ ಜೊತೆಯಾಗಿಯೇ ಇರುವೆವಲ್ಲ!!  ಪ್ರೀತಿ-ಪ್ರೇಮ ಎಂದರೆ ಇದುವೆಯೇ? ನಾನಾಗಲೀ-ನೀವಾಗಲೀ ಭಾವನೆಗಳಿಗೆ ಹೆಸರಿಟ್ಟಿದ್ದಿಲ್ಲ, ಪ್ರೀತಿಯೋ, ಕೋಪವೋ, ಮಮತೆಯೋ, ರೋಷವೋ ಎಲ್ಲವನ್ನೂ ಸ್ವಭಾವ ಎಂದು ಒಪ್ಪಿಕೊಂಡೆವು.  ಮದುವೆಯ ಬಂಧ ಬಂಧನವಾಗಿದ್ದ ಕಾಲದಲ್ಲೂ ನನಗೆ ಹಾಗನಿಸಲಿಲ್ಲ. ನಿಮ್ಮೆದೆಗೆ ಒರಗಿಕೊಂಡು ಕನಸುಗಳ ಹೆಣೆದದ್ದೂ ಇಲ್ಲ, ನಿಮ್ಮ ಕೋಪ ತಣಿಸಲು ನಾನು ನಿಮ್ಮಿಷ್ಟದ ಅಡುಗೆ ಮಾಡಿ ತಂದಿಟ್ಟದ್ದೂ ಇಲ್ಲ... ಈ ಇಲ್ಲಗಳ ನಡುವೆ ಇದ್ದದ್ದೇನು ಹಾಗಾದರೆ?! ಅತ್ತೆ-ಮಾವನ ಇಳಿ ವಯಸ್ಸಿನ ಜವಾಬ್ದಾರಿಗಳೇ? ಮಕ್ಕಳ ಸಾಲು-ಸಾಲು ಕರ್ತವ್ಯದ ಕರೆಗಳೇ? ಮನೆ ಖರ್ಚುಗಳ ನಿಭಾಯಿಸಬೇಕಾದ ಹೊಣೆಗಾರಿಕೆಯೇ? ಮನೆಗೆಲಸದ ನಡುವಿನಲ್ಲೂ ನೋವು- ನಲಿವುಗಳಿಗೆ ಹೆಗಲುಗೊಡಲೇ ಬೇಕಾದ ಅನಿವಾರ್ಯತೆಯೇ? ಹೌದು ಎಂದು ಬದುಕು ಒಪ್ಪಿಕೊಳ್ಳದು... ಈ ಜವಾಬ್ದಾರಿಗಳು ಒಂದೊಂದಾಗಿ ಮುಗಿದರೂ ನಾವಿಬ್ಬರೂ ಜೊತೆಯಾಗಿದ್ದೇವೆ... ಇಲ್ಲ ಅನ್ನಲೂ ಸಾಧ್ಯವಿಲ್ಲ, ಇವುಗಳನ್ನು ಒಡಗೂಡಿ ಎದುರಿಸಿದವರು ನಾವು... ಇವೆಲ್ಲವನ್ನೂ ಮೀರಿದ ಭಾವವೊಂದು ನಮ್ಮನ್ನು ಕ...

ಮಾತಾಗದ ಮೌನದ ದನಿ ಕೇಳುವಾಸೆಯಲಿ...

Image
ಕರೆ-ಕರೆದು ಕೊರಗಿದರೂ ಮೌನವಾದೆ ನೀನು... ಮರೆಯಾಗುವುದು ನಿನಗೆ ಸರಳವಾಗಿತ್ತೆಂದರೂ ನಿನ್ನ ಮರೆಯುವುದು ಸುಲಭವಲ್ಲವೆನಗೆ... ನಿನ್ನ ಕೊನೆಯುಸಿರಿನ ಬಿಸಿಯನ್ನೂ ತಾಗಗೊಡಲಿಲ್ಲ ನೀನೆನಗೆ,  ಕೈತಣ್ಣಗಾಗುವಾಗಿನ ನೋವಿನ ಕರೆಯನ್ನೂ ಮೌನವಾಗಿ ನುಂಗಿಕೊಂಡೆ ನೀನು... ಉಸಿರಿರುವಾಗ ಉಸುರಲಿಲ್ಲ  ಹಸಿರಿರುವ ಭಾವಗಳನು ನಾವಿಬ್ಬರೂ ಒಬ್ಬರಿಗೊಬ್ಬರೆಂದು... ಮರವಾದ ನಿನ್ನನು ಲತೆಯಾಗಿ ಹಬ್ಬುವೆನೆಂಬ ತವಕದಲಿದ್ದೆ, ಬೇರಿಗೆ ಗೆದ್ದಲು ಹಿಡಿದಿದ್ದರ ಅರಿವಿಲ್ಲದೇ!! ನೋವುಣ್ಣಬಾರದು ನಾನೆಂದು ನೀ ದೂರವೇ ಉಳಿದು ಬಿಟ್ಟರೂ ಹತ್ತಿರವಾಗಿತ್ತು ಹೃದಯಗಳು... ಒಂದಾದ ಎದೆಯ ಬಡಿತವಿಂದು ನಿಂತುಬಿಟ್ಟಿದೆ, ಜೀವನ ಚಕ್ರ ಮುಂದೆ ಸಾಗೆನೆಂದು ಕುಳಿತುಬಿಟ್ಟಿದೆ..  ಆದರೂ ಮೌನವಾದ ನಿನ್ನ ಮಾತುಗಳ ಕೇಳಿದರೆ, ಉಳಿಯಬೇಕೆನಿಸುತ್ತದೆ, ಲತೆಯಾಗಿ ನೆಲವಿಡೀ ಹಬ್ಬಿ ಹೂವಾಗಬೇಕೆನಿಸುತ್ತದೆ... ದುಂಬಿಯಾಗಿ ನೀ ಬರುವೆ  ಹೇಳಲಾಗದ  ಭಾವಗಳ ಹೇಳಲು ಎಂಬಾಸೆಯಿಂದ.... -ಪಲ್ಲವಿ ಕಬ್ಬಿನಹಿತ್ಲು

ಕಥೆಗಳಲ್ಲಿನ ಹುಡುಗಿ

Image
ಅವನ ಪುಟ್ಟ-ಅಚ್ಚುಕಟ್ಟಾದ ಜಗತ್ತಲ್ಲಿ ಅವನು ಕಟ್ಟಿ ಹಾಕಿಕೊಂಡದ್ದು, ನೂರಾರು ಪುಸ್ತಕಗಳು, ಮನೆಯ ಅಂಗಳದಲ್ಲಿರುವ ಹೂದೋಟ ಮತ್ತು ಹಬೆಯಾಡುವ ಬಿಸಿ ಕಾಫಿ... ಎರಡು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡ ನಂತರ ಅನಾಥನಾದೆ ಎಂಬ ಭಾವದೊಡನೆ ಹಳ್ಳಿಯ ನಂಟನ್ನು ಕಳೆದುಕೊಂಡು ಬೆಂಗಳೂರಿಗೆ ಕಾಲಿಟ್ಟವನು ಕಟ್ಟಿಕೊಂಡ ಜಗತ್ತಿದು... ಎರಡು ವರ್ಷಗಳಲ್ಲಿ ಆಫೀಸು, ಲೈಬ್ರರಿ, ಮಾರ್ಕೆಟ್ಟು ಇವನ್ನು ಬಿಟ್ಟು ಬೇರೆ ಎಲ್ಲಿಗೂ ಇವನ ಗಾಳಿ ಸುಳಿದದ್ದಿಲ್ಲ... ಅವನಾಯಿತು, ಅವನ ಕೆಲಸವಾಯಿತು ಎಂದಿದ್ದವನು ಹೊತ್ತು ಸಿಕ್ಕಾಗಲೆಲ್ಲಾ ಕಲ್ಪನೆಗಳಲ್ಲಿ ತೇಲಾಡಿ; ಅವುಗಳನ್ನು ಕಥೆಯಾಗಿ ಹೆಣೆಯುತ್ತಿದ್ದ, ಆ ಕಥೆಗಳು ಪುಸ್ತಕಗಳಿಗೆ ಇಳಿಯುತ್ತಿತ್ತಾದರೂ, ಯಾರ ಕೈಗೂ ಸಿಗದಂತೆ ಜೋಪಾನವಾಗಿ ಇಡುವುದೂ ಸಹಾ ಅವನ ಬದುಕಿನ ಭಾಗವಾಗಿತ್ತು!! ಆದರೆ ಇಂದೇಕೋ ಅವನಿಗೆ ಅಂಗಳದಲ್ಲಿರುವ ಸೂಜಿ ಮಲ್ಲಿಗೆಯ ಕಂಪು ಹೆಚ್ಚಾಗಿದೆ ಎನ್ನಿಸುತ್ತಿತ್ತು, ಗುಲಾಬಿಯೂ ಕೊಂಚ ಜಾಸ್ತಿಯೇ ನಗೆ ಚೆಲ್ಲುತ್ತಿದೆ ಎಂದೆನಿಸಿದಾಗ ಹುಚ್ಚು ಯೋಚನೆಯನ್ನು ಕೊಡವಿಕೊಳ್ಳುತ್ತಾ ಕಾಫಿ ಕಪ್ ಗಾಗಿ ಒಳನಡೆದ. ಹೊರಬರುವಾಗ ಅವನು ಕಂಡದ್ದು ಇಪ್ಪತ್ತರ ಆಸುಪಾಸಿನ ಒಬ್ಬ  ತರುಣಿಯನ್ನು! ತಿರುಗಿ ನೋಡುವಷ್ಟು ಸುಂದರಿಯಲ್ಲದಿದ್ದರೂ ತಕ್ಕ ಮಟ್ಟಿಗೆ ಲಕ್ಷಣವಾಗಿದ್ದಳು. ಐದುವರೆ ಅಡಿ ಎತ್ತರದ, ಗುಂಗುರು ಕೂದಲಿನ, ತುಸುಕಪ್ಪಿನ ಹುಡುಗಿ. ನೀಳ ರೆಪ್ಪೆಯ ಬೆಕ್ಕಿನ ಕಣ್ಣು ಆಕರ್ಷಕವಾಗಿತ್ತು.. ಅವನಿಗನಿಸಿತು ತನ್ನ ಕ...

ಬೆಳಕಿನ ಭಯ

Image
                              ಕತ್ತಲಿನೊಳಗೆ ಕರಗಿ ಯಾರಿಲ್ಲವೆಂದು ಕೊರಗುವ ನಾನು, ಹೆದರುತ್ತಿದ್ದೇನೆ ಬೆಳಕಿನ ಸುಳಿವು ಸಿಕ್ಕಾಗ... ಬೆಳಕ ಕಂಡು ಅವಿತುಕೊಳ್ಳಲು ಮರೆಯನರಸುವಾಗ, ಕತ್ತಲ ಕಣ್ಣುಪಟ್ಟಿ ನನ್ನನ್ನು ಬಿಟ್ಟು ಉಳಿದೆಲ್ಲವನು ತನ್ನೊಳಗೆ ಅಡಗಿಸಿಕೊಳ್ಳುತ್ತದೆ... ತಡಕಾಡುತ್ತಾ ಇನ್ನಷ್ಟು ಹುಡುಕುತ್ತೇನೆ; ಅಲ್ಲಲ್ಲಿ ಎಡವುತ್ತೇನೆ, ನೋವನ್ನು ಕಣ್ಣಿನೊಳಗೆ ಕದಡಿ ಕಣ್ಣೀರಾಗುತ್ತೇನೆ, ಯಾರಿಗೂ ನಿಜ ಹೇಳದೆ ನೂರು ಜನರೊಳಗೆ ನೂರು ಕಥೆಯಾಗುತ್ತೇನೆ, ಅವರೊಳಗೆ ಕುಳಿತ ರೇಜಿಗೆಗಳಿಗೆ ಚಿತೆಯಾಗುತ್ತೇನೆ, ಅವರು, ಹೆಣೆದಿಟ್ಟುಕೊಂಡ ನೂರು ಕಥೆಗಳನು ಉಸುರಿ, ನಮಗ್ಯಾಕೆ ಅವಳ ಉಸಾಬರಿ ಎನ್ನುತ್ತಾ ಎಲ್ಲರೂ ಹಗುರಾಗುತ್ತಾರೆ; ನಾನು, ಮತ್ತೆ ಎಲ್ಲವನು ಕೇಳಿ ಭಾರವಾಗಿ  ಭಯಬಿದ್ದು ಇನ್ನಷ್ಟು ಕತ್ತಲಿನೊಳಗೆ, ಕತ್ತಲೂ ಹೆದರುವ ಕರಿಕೂಪದೊಳಗೆ ಹೋಗಬೇಕೆಂದುಕೊಳ್ಳುತ್ತೇನೆ... ಕಾರಣ, ನೂರಾರು ಸುಳ್ಳುಗಳೆಡೆಯಲಿ ನನ್ನದೊಂದು ಸತ್ಯ ಬೆತ್ತಲಾಗಲು ಹೆಣಗುತ್ತಿದೆ, ಆದರೆ, ಮಿಥ್ಯದ ಹೊದಿಕೆಗಳನು ಸರಿಸುವುದಕ್ಕಿಂತಲೂ ಅದರೊಳಗೆ ಹೂತು ಹೋಗುವುದು ಸರಳವೆಂದು, ಕೂಪದೊಳಗೆ ನುಸುಳಿರುವೆನು ನಾನು; ಈಗ ಹೆದರುತ್ತಿದ್ದೇನೆ ಬೆಳಕಿನ ಸುಳಿವು ಸಿಕ್ಕಿತೆಂದು... ಕತ್ತಲಿನೊಳಗೆ ಕರಗಿ ಯಾರಿಲ್ಲವೆಂದು ಕೊರಗುವ ನಾನು, ಹೆದರುತ್ತಿದ್ದೇನೆ ಬೆಳಕಿನ ಸುಳಿವು ಸಿಕ್ಕಾಗ.....